ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ಪತ್ರ ಬರೆಯಲಿ : ಬಿಜೆಪಿ ಶಾಸಕರ ಒತ್ತಾಯ

ತುಮಕೂರು:

      ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಗಿದಿದೆ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು, ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನೀತಿ ಸಂಹಿತೆ ಸಡಿಸಲು ಕೋರಬೇಕು ಎಂದು ಜಿಲ್ಲೆಯ ಬಿಜೆಪಿ ಶಾಸಕರು ಒತ್ತಾಯ ಮಾಡಿದ್ದಾರೆ.

      ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಮಸಾಲಾ ಜಯರಾಮ್, ಜ್ಯೋತಿಗಣೇಶ್, ‘ರಾಜ್ಯದಲ್ಲಿ 126 ತಾಲ್ಲೂಕು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಕಾರಣ ಹೇಳಿಕೊಂಡು ಎರಡು ತಿಂಗಳು ಏನೂ ಕೆಲಸಗಳು ಆಗಿಲ್ಲ. ಚುನಾವಣೆ ಮುಗಿದ ಬಳಿಕವೂ ಅದೇ ಸ್ಥಿತಿ ಆದರೆ ಹೇಗೆ’..? `ನಮ್ಮ ಕ್ಷೇತ್ರದಲ್ಲಿ ನೀರಿಗಾಗಿ, ದನಕರುಗಳಿಗೆ ಮೇವಿಗಾಗಿ, ಬರಪರಿಹಾರ ಕಾಮಗಾರಿಗೆ ಜನ ಒತ್ತಾಯಿಸುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ಯಾರೂ ನಮ್ಮ ಕಷ್ಟ ಕೇಳುತ್ತಿಲ್ಲ. ಫೋನ್ ಮಾಡಿದರೆ ನೀತಿ ಸಂಹಿತೆ ಸರ್ ಏನು ಮಾತಾಡಂಗಿಲ್ಲ. ಮೇಲಧಿಕಾರಿಗಳ ಆದೇಶ ಇದೆ ಅಂತಾರೆ.

       ನೀರು ಕೊಡಿ, ಮೇವು ಕೊಡಿ, ಕೊಳವೆ ಬಾವಿ ಕೊರೆಸಿ ಎಂದರೆ ಅದಕ್ಕೂ ನೀತಿ ಸಂಹಿತೆ ಅಂತಾರೆ.  ಭೇಟಿ ಮಾಡಲೂ ಕೂಡಾ ಆಗದ ಸ್ಥಿತಿ ಇದೆ. ನೀತಿ ಸಂಹಿತೆ ಎಂಬುದು ನಮ್ಮ ಪಾಲಿಗೆ ತುರ್ತುಪರಿಸ್ಥಿತಿಗಿಂತ ಕಡೆಯಾಗಿದೆ’ ಎಂದು ಹೇಳಿದರು.

      ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ ಕೂಡಾ ಅದನ್ನೇ ಹೇಳ್ತಾರೆ. ಹೀಗಾಗಿ ಇದಕ್ಕೆ ಪರಿಹಾರವನ್ನು ಮುಖ್ಯ ಕಾರ್ಯದರ್ಶಿಗಳೇ ಹುಡುಕಬೇಕು.
ಚುನಾವಣಾ ಆಯೋಗಕ್ಕೆ ಪತ್ರ ಬರೆದು ರಾಜ್ಯದ ಬರಗಾಲ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ನೀತಿ ಸಂಹಿತೆ ಸಡಿಲಗೊಳಿಸಲು ಮನವಿ ಮಾಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೆ.ಸಿ.ಮಾಧುಸ್ವಾಮಿ, ಮಸಾಲಾ ಜಯರಾಮ್, ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು.

(Visited 14 times, 1 visits today)

Related posts

Leave a Comment