ತುಮುಲ್ ವತಿಯಿಂದ 4 ಸಾವಿರ ಕೆ.ಜಿ. ಮೇವು ಬೀಜ ವಿತರಣೆ!

ಮಧುಗಿರಿ :

      ಸತತ ಬರಗಾಲದಿಂದಾಗಿ ಈ ಬಾರಿ ರೈತರಿಗೆ ಬಹಳಷ್ಟು ತೊಂದರೆಯುಂಟಾಗಿದ್ದು, ಶೇ. 75 ರಷ್ಟು ಸಬ್ಸಿಡಿ ದರದಲ್ಲಿ 4 ಸಾವಿರ ಕೆಜಿ ಮೇವಿನ ಬೀಜ ವಿತರಿಸಲಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

      ಪಟ್ಟಣದ ಹಿಂದೂಪುರ ರಸ್ತೆಯಲ್ಲಿರುವ ತುಮುಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯ ಬೇಸಿಗೆ ತೀವ್ರತೆಯಿಂದಾಗಿ ಮೇವಿನ ಅಭಾವ ಕಂಡು ಬಂದು ಹಾಲಿನ ಗುಣಮಟ್ಟದಲ್ಲಿ ಕುಂಟಿತಗೊಂಡಿದ್ದು, ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು, ರೈತರು ಹೆಚ್ಚಿನ ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ರೈತರಿಗೆ ಮೇವಿನ ಬೀಜವನ್ನು ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

      ನನ್ನ ಅವಧಿಯಲ್ಲಿ ಒಕ್ಕೂಟವನ್ನು ಯಾರೂ ಮಾಡದಷ್ಟು ಅಭಿವೃದ್ದಿ ಮಾಡಲಾಗಿದ್ದು, ಹಿಂದೆ ನಷ್ಟದಲ್ಲಿದ್ದ ತುಮುಲ್ ಸಂಸ್ಥೆ ಇಂದು ಆರ್ಥಿಕ ಸಂಮೃದ್ದಿಯಾಗಿದೆ. ಒಕ್ಕೂಟ ಲಾಭದಲ್ಲಿದ್ದಾಗ ರೈತರ ಕೈಹಿಡಿದರೆ ಮಾತ್ರ ಅವರ ಬದುಕು ಹಸನಾಗಲಿದೆ. ಇಂದು ಹಾಲಿಗೆ ಬಹಳಷ್ಟು ಬೇಡಿಕೆಯಿದೆ. ಹಾಗಾಗಿ ರೈತರ ಹಾಲಿಗೆ ಇನ್ನೂ 2 ರೂ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು. ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರಲಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕಳೆದ 3 ವರ್ಷದ ಹಿಂದೆ ಒಕ್ಕೂಟದ ವತಿಯಿಂದ 200 ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಹಾಸ್ಟೆಲ್ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದರು.

      ಈಗ ತುಮುಲ್ ಸಂಘದ ವತಿಯಿಂದ 8 ಸಂಘಗಳಿಗೆ ತಲಾ 25 ಸಾವಿರ ವಿತರಿಸಲಾಗಿದ್ದು, 20 ಜನ ಫಲಾನುಭವಿಗಳಿಗೆ 9.60 ಲಕ್ಷ ರಾಸು ವಿಮೆ ನೀಡಲಾಗಿದೆ. ಹಾಲು ನೀಡುವ ರಾಸುಗಳು ರೋಗಗಳಿಗೆ ತುತ್ತಾಗಿ ಮೃತಪಟ್ಟರೆ ರೈತರಿಗೆ ಬಹಳಷ್ಟು ನಷ್ಟವಾಗಲಿದೆ. ಆದ್ದರಿಂದ ಎಲ್ಲಾ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಕೇವಲ 270 ರೂಗಳನ್ನು ಪಾವತಿಸಿದರೆ 50 ಸಾವಿರ ವಿಮಾ ಸೌಲಭ್ಯ ದೊರೆಯಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      2018-19 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 85 ಅಂಕಗಳಿಸಿದ ಹಾಗೂ 2019-20 ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ಇಂಜಿನಿಯರಿಂಗ್, ಅಗ್ರಿಕಲ್ಚರ್, ವೈದ್ಯಕೀಯ, ಪಶು ವೈದ್ಯಕೀಯ, ಡೆಂಟಲ್, ಆಯುರ್ವೇದ, ಡೈರಿ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಒಕ್ಕೂಟದ ವತಿಯಿಂದ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದ್ದು, ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದು ಮಾಹಿತಿ ನೀಡಿದರು.

       ಸಭೆಯಲ್ಲಿ ತುಮುಲ್ ವ್ಯವಸ್ಥಾಪಕ ನಿರ್ದೇಶಕ ಮುನೇಗೌಡ, ಮುಖಂಡ ಸಿದ್ದಣ್ಣ, ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ದಿಲೀಪ್, ದೀಕ್ಷಿತ್, ದರ್ಶನ್, ಧರ್ಮವೀರ್, ಶಿಲ್ಪಶ್ರೀ ಇದ್ದರು.

(Visited 14 times, 1 visits today)

Related posts

Leave a Comment