ಅನಿಲ ಸೋರಿಕೆಯಿಂದ ಮನೆ ಭಸ್ಮ : 25 ಲಕ್ಷಕ್ಕೂ ಅಧಿಕ ನಷ್ಟ

ಹುಳಿಯಾರು:

     ಅಡಿಗೆ ಅನಿಲ ಸೋರಿಕೆಯಿಂದ ಮನೆ ಸಂಪೂರ್ಣ ಭಸ್ಮವಾಗಿ 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಹುಳಿಯಾರು ಹೋಬಳಿಯ ಕುಶಾಲಪುರದಲ್ಲಿ ನಡೆದಿದೆ.

     ಕುಶಾಲಪುರದ ಮಧುಸೂಧನ್ ಅವರ ಮನೆ ಈ ಅನಿಲ ದುರಂತದಿಂದ ಭಸ್ಮವಾಗಿದ್ದು ಇವರು ಕುಟುಂಬ ಸಮೇತ ಪಕ್ಕದ ಊರಿನ ದೇವಾಲಯಕ್ಕೆ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಜರುಗಿದೆ.

     ಮನೆಯಲ್ಲಿ ತೆಂಗಿನ ಕೊಬ್ಬರಿ ಹಾಗೂ ಊಟಕ್ಕೆ ಬಳಸುವ ಮುತ್ತುಗದ ಎಲೆಗಳು ಇದ್ದ ಕಾರಣದಿಂದ ಬೆಂಕಿ ಮನೆಯನ್ನು ಸಂಪೂರ್ಣ ವ್ಯಾಪಿಸಿದೆ. ಅಗ್ನಿಶಾಮಕ ತಂಡದವರು ಬರುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಹೋಗಿತ್ತು.

      ಬೆಂಕಿಯ ಕೆನ್ನಾಲಿಗೆಗೆ ಮನೆಯ ಗೃಹಪಯೋಗಿ ವಸ್ತುಗಳು, ಪೀಠೋಪಕರಣಗಳು, ದವಸಧಾನ್ಯ, ಊಟಕ್ಕೆ ಬಳಸುವ ಮುತ್ತಗದ ಎಲೆ, ನಗದು, ಒಡವೆ ಸೇರಿದಂತೆ ಕಟ್ಟಡ ಬಾಗಿಲು, ಕಿಟಕಿ, ಮೇಲ್ಚಾವಣಿ ಸೇರಿದಂತೆ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ.

      ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಎಸ್‍ಐ ಆನಂದಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದರು.

(Visited 6 times, 1 visits today)

Related posts