ಅರಣ್ಯ ಬೆಳೆಸಿ-ಪರಿಸರ ಉಳಿಸಿ

 ತುಮಕೂರು:

      ಅರಣ್ಯ ಬೆಳೆಸುವ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

      ಮಕ್ಕಳಲ್ಲಿ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ “ಚಿಣ್ಣರ ವನ ದರ್ಶನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಅರಣ್ಯ ಬೆಳೆಸುವ ಹಾಗೂ ಪರಿಸರ ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಅರಣ್ಯ ಪ್ರದೇಶಗಳಾದ ಬನ್ನೇರುಘಟ್ಟ, ಬಂಡೀಪುರ, ನಾಗರಹೊಳೆ ಪ್ರದೇಶಕ್ಕೆ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೆ ಪರಿಸರದಲ್ಲಿ ವೈಪರಿತ್ಯ ಉಂಟಾಗಿ ಅರಣ್ಯ ನಾಶವಾಗುತ್ತಿದೆ. ನಮ್ಮ ಕಾಲದಲ್ಲಿ ಬಾವಿಗಳಲ್ಲಿ ನೀರನ್ನು ನೋಡುತ್ತಿದ್ದೆವು. ಇಂದಿನ ದಿನಗಳಲ್ಲಿ ಮಕ್ಕಳು ಬಾಟಲ್‍ಗಳಲ್ಲಿ ನೀರನ್ನು ನೋಡುವ ಕಾಲ ಬಂದಿದೆ. ಮುಂದಿನ ಪೀಳಿಗೆಗೆ ಎಂತಹ ಪರಿಸ್ಥಿತಿ ಉಂಟಾಗುತ್ತದೋ ಎಂಬ ಆತಂಕ ಸೃಷ್ಠಿಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಬೆಳೆಸಿ ಪರಿಸರ ಉಳಿಸುವ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಮಹೇಶ್ ವಿ.ಮಾಲಗತ್ತಿ, ಡಿಡಿಪಿಐ ಕೆ.ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು. ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 55 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದರು.

(Visited 27 times, 1 visits today)

Related posts

Leave a Comment