ಉತ್ತಮ ಸೇವೆ ಒದಗಿಸಲು 3 ಹೊಸ ಮೊಬೈಲ್ ಅಪ್ಲಿಕೇಶನ್‍ಗಳ ಪ್ರಾರಂಭ!

ತುಮಕೂರು:

      ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಖಿಖಂI)ವು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಮೈಕಾಲ್, ಮೈಸ್ಪೀಡ್ ಹಾಗೂ ಡಿಎನ್‍ಡಿ ಎಂಬ ಮೂರು ಹೊಸ ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಿದೆ ಎಂದು ಕಾರ್ಯದರ್ಶಿ ಸುನಿಲ್ ಕೆ ಗುಪ್ತಾ ತಿಳಿಸಿದರು.

      ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಗರದ ಕನ್ನಡ ಭವನದಲ್ಲಿಂದು ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವಾರು ಉತ್ತಮ ದೂರಸಂಪರ್ಕ ಸೇವೆಗಳನ್ನು ಪ್ರಾಧಿಕಾರ ಒದಗಿಸುತ್ತಾ ಬಂದಿದ್ದು, ಈಗ ಹೊಸದಾಗಿ 3 ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಿದೆ. ದೂರವಾಣಿ ಕರೆಯ ಗುಣ ಮಟ್ಟ ತಿಳಿಯಲು ಮೈಕಾಲ್, ಮೊಬೈಲ್ ನೆಟ್‍ವರ್ಕ್ (ಡೌನ್‍ಲೋಡಿಂಗ್ ಹಾಗೂ ಅಪ್‍ಲೋಡಿಂಗ್)ವೇಗವನ್ನು ತಿಳಿಯಲು ಮೈ ಸ್ಪೀಡ್ ಹಾಗೂ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ/ಕರೆಗಳನ್ನು ನಿಷ್ಕ್ರಿಯಗೊಳಿಸಲು ಡಿಎನ್‍ಡಿ ಅಪ್ಲಿಕೇಶನ್‍ಗಳೊಂದಿಗೆ ಹೊಸ ವೆಬ್ ಪೋರ್ಟಲ್ ಅನ್ನು ಪರಿಚಯಿಸಲಾಗಿದೆ. ಹೊಸ ಅಪ್ಲಿಕೇಶನ್‍ಗಳನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

      ದೇಶದಲ್ಲಿ 116ಕೋಟಿ ಗ್ರಾಹಕರು ಮೊಬೈಲ್ ಬಳಸುತ್ತಿದ್ದು, ದಿನೇ ದಿನೇ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗ್ರಾಹಕರ ಅನುಕೂಲಕ್ಕಾಗಿ ನಿಯಂತ್ರಣ ಪ್ರಾಧಿಕಾರವು ದೂರಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ. ನಿಯಮಗಳನ್ವಯ ಪ್ರೀ ಪೇಯ್ಡ್ ಗ್ರಾಹಕರು ಕಳೆದ ಆರು ತಿಂಗಳ ಅವಧಿಯಲ್ಲಿ ಕರೆ/ಎಸ್‍ಎಂಎಸ್‍ಗಳ ವಿವರಗಳನ್ನು ಪಡೆಯಬಹುದು. ಸರ್ವೀಸ್ ಪ್ರೊವೈಡರ್‍ನಿಂದ ಪಡೆದ ಶುಲ್ಕ ಯೋಜನೆ ಗ್ರಾಹಕರಿಗೆ ಕನಿಷ್ಠ 6 ತಿಂಗಳವರೆಗೆ ಲಭ್ಯವಿರಬೇಕು.

      ಈ ಆರು ತಿಂಗಳ ಅವಧಿಯಲ್ಲಿ ಗ್ರಾಹಕರು ಬೇರೆ ಶುಲ್ಕ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಸಂಸ್ಥೆಗಳು ಸೇವೆಯ ನಿಷ್ಕ್ರಿಯ ಬೇಡಿಕೆಯನ್ನು 7 ದಿನಗಳೊಳಗೆ ಪೂರ್ಣಗೊಳಿಸಬೇಕಲ್ಲದೆ ನಂತರದ ಅವಧಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರಿಂದ ಸ್ಪಷ್ಟ ಅನುಮತಿಯಿಲ್ಲದೆ ಮೊಬೈಲ್ ಡಾಟಾ ಸೇವೆಯನ್ನು ಸಕ್ರಿಯಗೊಳಿಸುವಂತಿಲ್ಲ. ಗ್ರಾಹಕರು ಶುಲ್ಕರಹಿತ ಸಂಖ್ಯೆ 1925ಕ್ಕೆ ಕರೆ ಅಥವಾ ಎಸ್‍ಎಂಎಸ್ ಮಾಡುವ ಮೂಲಕ ಡಾಟಾ ಸೇವೆಯನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದಾಗಿದೆ ಎಂದು ತಿಳಿಸಿದರು.

      ಪ್ರಾಧಿಕಾರದ ಸಲಹೆಗಾರ ಶ್ರೀನಿವಾಸ ಎಸ್ ಗಲಗಲಿ ಮಾತನಾಡಿ ಪ್ರಾಧಿಕಾರವು ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದ ದೂರಸಂಪರ್ಕ ಹಾಗೂ ಕೇಬಲ್ ಸೇವೆಗಳ ಮೇಲೆ ನಿಯಂತ್ರಿಸುವ ಅಧಿಕಾರ ಹೊಂದಿರುತ್ತದೆ ಎಂದು ತಿಳಿಸಿದರಲ್ಲದೆ ಕೆಲ ದೂರಸಂಪರ್ಕ ಸಂಸ್ಥೆಗಳು ಮೊಬೈಲ್ ಟವರ್ ಅನುಸ್ಥಾಪನೆಗೆ ಹೆಚ್ಚಿನ ಬಾಡಿಗೆ ನೀಡುವ ನೆಪದಲ್ಲಿ ಜನರಿಂದ ಹಣ ಪಡೆದು ನಂತರ ಮಾಯವಾಗುತ್ತಿವೆ. ಮೊಬೈಲ್ ಟವರ್ ಅನುಸ್ಥಾಪನೆಯಲ್ಲಿ ನೇರ ಅಥವಾ ಪರೋಕ್ಷವಾಗಿ ಪ್ರಾಧಿಕಾರದ ಯಾವುದೇ ಪಾತ್ರವಿರುವುದಿಲ್ಲ ಎಂದರು. ಕೇಬಲ್ ಸೇವೆಗಳ ಮೇಲೆ ನಿಯಂತ್ರಿಸುವ ಸಲುವಾಗಿ ಹೊಸ ನಿಯಂತ್ರಣ ಚೌಕಟ್ಟನ್ನು ಜಾರಿಮಾಡಿದ್ದು, ಈ ಚೌಕಟ್ಟಿನನುಸಾರ ಗ್ರಾಹಕನಿಗೆ ದೂರದರ್ಶನದಲ್ಲಿ ತಾನು ವೀಕ್ಷಿಸಲು ಬಯಸುವ ಚಾನಲ್‍ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಒದಗಿಸಬೇಕು. ಗ್ರಾಹಕನು ತಾನು ವೀಕ್ಷಿಸುವ ಚಾನಲ್‍ಗಳಿಗೆ ಮಾತ್ರ ಶುಲ್ಕ ಪಾವತಿ ಮಾಡುವ ಸ್ವಾತಂತ್ರ್ಯ ಹೊಂದಿರುತ್ತಾನೆ ಎಂದು ಮಾಹಿತಿ ನೀಡಿದರು.

      ಗ್ರಾಹಕರಿಗೆ ಅಸ್ತಿತ್ವದಲ್ಲಿರುವ ತಮ್ಮ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡು ಇನ್ನೊಂದು ಸೇವಾ ಸಂಸ್ಥೆಗೆ ಚಲಿಸುವ ಅವಕಾಶವಿದ್ದು, ಮೊಬೈಲ್ ಸಂಪರ್ಕ ಹೊಂದಿದ 90 ದಿನಗಳ ಬಳಿಕವಷ್ಟೇ ಚಂದಾದಾರರಿಗೆ ಪೋರ್ಟಿಂಗ್ ಮನವಿ ಸಲ್ಲಿಸಲು ಅರ್ಹತೆ ದೊರೆಯುತ್ತದೆ. ಗ್ರಾಹಕರು ಟೋಲ್‍ಫ್ರೀ ಸಂಖ್ಯೆ 1909ಕ್ಕೆ ಕರೆ/ಎಸ್‍ಎಂಎಸ್ ಮಾಡುವ ಮೂಲಕ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ/ಟೆಲಿಮಾರ್ಕೆಟಿಂಗ್ ಕರೆಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

      ಗ್ರಾಹಕರು ದೂರ ಸಂಪರ್ಕ ಹಾಗೂ ಕೇಬಲ್ ಸೇವೆಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರು ಕೇಂದ್ರದಲ್ಲಿ ದೂರುಗಳನ್ನು ನೋಂದಾಯಿಸಬೇಕು.
ದೂರು ನಿವಾರಣೆಯಲ್ಲಿ ಅತೃಪ್ತಿಯಿದ್ದಲ್ಲಿ ದೂರಿನ ನಿವಾರಣೆಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

      ನಂತರ ನಡೆದ ಗ್ರಾಹಕರ ಸಂವಾದದಲ್ಲಿ ಗ್ರಾಹಕರು ದೂರಸಂಪರ್ಕಕ್ಕೆ ಸಂಬಂಧಿಸಿದ ಸೇವಾ ನ್ಯೂನ್ಯತೆಗಳ ಬಗ್ಗೆ ಸಲಹೆ ಅಭಿಪ್ರಾಯಗಳನ್ನು ನೀಡಿದರಲ್ಲದೆ ನಿಯಂತ್ರಣ ಪ್ರಾಧಿಕಾರದ ನೀತಿ ನಿಯಮಗಳ ಬಗ್ಗೆ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ವಿವಿಧ ಸೇವಾ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

(Visited 17 times, 1 visits today)

Related posts

Leave a Comment