ಪಿಯುಸಿ ಪರೀಕ್ಷೆ ಪಾರದರ್ಶಕವಾಗಿ ಯಶಸ್ವಿಗೊಳಿಸಲು ಡಿಸಿ ಸೂಚನೆ!

ತುಮಕೂರು :

      2020ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ 2020ರ ಮಾರ್ಚ್ 4ರಿಂದ 23ರವರೆಗೆ ನಡೆಯಲಿದ್ದು, ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ಘಟಿಸಿರುವಂತಹ ಘಟನೆಗಳು ಮರುಕಳಿಸದಂತೆ ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      ಅವರು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ತುಮಕೂರು ಜಿಲ್ಲಾ ಖಜಾನೆಯಿಂದ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಕುಣಿಗಲ್ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 24 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ರವಾನೆ ಆಗಲಿವೆ. ಅದೇರೀತಿ ಮಧುಗಿರಿ ಉಪ ಖಜಾನೆಯಿಂದ ಮಧುಗಿರಿ, ಶಿರಾ, ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ 10 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಕೇಂದ್ರಗಳಿಗೆ ರವಾನೆ ಆಗಲಿವೆ. ಎರಡು ಖಜಾನೆಗಳಲ್ಲಿ ದಿನದ 24ಗಂಟೆ ಕಾರ್ಯನಿರ್ವಹಿಸುವ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಅವರು ತಿಳಿಸಿದರು.

      ಜಿಲ್ಲೆಯಲ್ಲಿ 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ ಕಾಲೇಜುಗಳ ಖಾಯಂ ಪ್ರಾಚಾರ್ಯರನ್ನು ಮಾತ್ರ ರ್ಯಾಂಡಮೈಜೇಶನ್ ಮೂಲಕ ಅದಲು-ಬದಲು ಮಾಡಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ನೇಮಕಗೊಂಡ ಮುಖ್ಯ ಅಧೀಕ್ಷಕರು ಫೆಬ್ರವರಿ 26ರಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

      ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ತುಮಕೂರಿನಿಂದ 8 ಮಾರ್ಗಾಧಿಕಾರಿಗಳ ತಂಡಗಳನ್ನು ಮಧುಗಿರಿಯಿಂದ 4 ಮಾರ್ಗಾಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಮಾರ್ಗಾಧಿಕಾರಿಗಳ ತಂಡಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಯಾ ತಾಲ್ಲೂಕಿನ ತಹಶಿಲ್ದಾರರು ಮತ್ತು ಪ್ರಾಂಶುಪಾಲರು ಸೇರಿ ಮೂರು ಜನರು ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬಯೋಮೆಟ್ರಿಕ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಆಯಾ ಖಜಾನೆಯಲ್ಲಿ ಜಮಾ ಮಾಡುವುದು ಮತ್ತು ನಿಗದಿತ ದಿನದಂದು ನಿಗದಿತ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪಡೆದು ಪರೀಕ್ಷಾ ಕೇಂದ್ರಗಳಿಗೆ ವಿತರಿಸುವುದು ಈ ತಂಡಗಳ ಜವಾಬ್ದಾರಿಯಾಗಿದೆ.

      ಈ ಬಾರಿ ಜಿಲ್ಲೆಯ 20 ಸಾವಿರ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದು, ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆ ನಡೆಸುವವರು ಯಾವುದೇ ನ್ಯೂನ್ಯತೆ ಇಲ್ಲದೆ ಹೊಸ ನಿಯಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಪರೀಕ್ಷೆಯನ್ನು ಪಾರದರ್ಶಕವಾಗಿ ಬರೆಯುವಂತೆ ಸಮಾನ ಅವಕಾಶ ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

      ಪ್ರಶ್ನೆ ಪತ್ರಿಕೆಗಳು ಲೀಕ್ ಆಗದ ಹಾಗೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದ ಹಾಗೆ ಸುಳ್ಳು ವದಂತಿಗಳಿಗೆ ಎಡೆಮಾಡಿಕೊಡದಂತೆ ಆಗಿಂದಾಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಪರೀಕ್ಷೆ ಎದುರಿಸಲು ಅಣಿಗೊಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆರೋಗ್ಯ ಚಿಕಿತ್ಸೆ, ಪೀಠೋಪಕರಣಗಳ ವ್ಯವಸ್ಥೆಗೊಳಿಸಬೇಕು. ಹಾಗೂ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ಕಾರ್ಯ ಆದ್ಯತೆಯ ಮೇಲೆ ಆಗಬೇಕೆಂದು ಅವರು ತಿಳಿಸಿದರು.

      ಪ್ರಶ್ನೆಪತ್ರಿಕೆಗಳನ್ನು ಹ್ಯಾಂಡ್ಲಿಂಗ್ ಮಾಡುವವರು ಗೌಪ್ಯತೆಯನ್ನು ಕಾಪಾಡಿಕೊಂಡು ಪೊಲೀಸ್ ಬಂದೋಬಸ್ತ್‍ನಲ್ಲಿ ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ವಿಷಯ ವೇಳಾಪಟ್ಟಿಯಂತೆ ಅದೇದಿನದಂದು ಪ್ರಶ್ನೆ ಪತ್ರಿಕೆಗಳನ್ನು ನೇರವಾಗಿ ವಿಳಂಬಮಾಡದೇ ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಹಸ್ತಾಂತರಿಸುವುದು ಅದೇ ಮಾದರಿಯಲ್ಲಿ ಉತ್ತರ ಪತ್ರಿಕೆಗಳನ್ನು ಸಹ ರವಾನೆಗೊಳಿಸುವುದು, ಜಾಗೃತದಳ ಹಾಗೂ ಮಾರ್ಗಾಧಿಕಾರಿಗಳ ತಂಡಗಳ ಸಂಯುಕ್ತ ಜವಾಬ್ದಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ತಿಳಿಸಿದರು.

      ಹೊಸದಾಗಿ ನೇಮಕಾತಿಗೊಂಡಿರುವ ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಸರಿಯಾದ ತರಬೇತಿಯನ್ನು ನೀಡಿ ನಿಯೋಜಿಸಬೇಕು ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ವ್ಯವಸ್ಥೆ ಮಾಡಬೇಕೆಂದು ಡಿಡಿಪಿಯು ಟಿ.ಎ. ಲಲಿತಾಕುಮಾರಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಿಯೋಜಿತ ಸಿಬ್ಬಂದಿಯವರು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಪರೀಕ್ಷಾ ಸಮಯದ ಮುಂಚಿತವಾಗಿ ಹಾಜರಾಗುವುದು, 4ರಿಂದ 5 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಂದಿನ ವಿಷಯವನ್ನು ಖಾತರಿಪಡಿಸಿಕೊಂಡು ಪ್ರಶ್ನೆಪತ್ರಿಕೆಗಳನ್ನು ತೆರೆಯುವುದು, ಗೈರುಹಾಜರಾದ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ತಮ್ಮ ಬಳಿ ಸಂಗ್ರಹ ಮಾಡಿಟ್ಟುಕೊಳ್ಳುವುದು ಅಧೀಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಮೊಬೈಲ್, ಸ್ಮಾರ್ಟ್‍ವಾಚ್, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯವುದು ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಇಂತಹ ಪ್ರಕರಣಗಳು ಜರುಗದಂತೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೆ ಮರುಪರೀಕ್ಷೆ ಆಗದಂತೆ ಎಚ್ಚೆತ್ತುಕೊಂಡು ಸಿಬ್ಬಂದಿಯವರು ಪರೀಕ್ಷೆ ನಡೆಸಬೇಕೆಂದು ಅವರು ತಾಕೀತು ಮಾಡಿದರು.

      ಪರೀಕ್ಷಾ ಕೇಂದ್ರಗಳ ಅಧೀಕ್ಷಕರುಗಳ ಮಕ್ಕಳು ಅಥವಾ ಸಂಬಂಧಿಕರು ಪ್ರಸಕ್ತ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವರಿದ್ದರೆ ಅಂತಹ ಅಧೀಕ್ಷಕರನ್ನು ಪರೀಕ್ಷಾ ಕಾರ್ಯದಿಂದ ಕೈಬಿಡುವಂತೆ, ಯಾವುದೇ ಕಾಲೇಜಿನ ಸಂಸ್ಥೆಯವರು ಶುಲ್ಕ ಪಾವತಿಸದೇ ಇರುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡುವುದನ್ನು ನಿರಾಕರಿಸಿದರೆ ಅಂತಹ ಸಂಸ್ಥೆಗಳ ಮೇಲೆ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

      ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಎಲ್ಲಾ ತಾಲ್ಲೂಕುಗಳ ತಹಶಿಲ್ದಾರರು, ಹಾಗೂ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆನಡೆಸಿ ಲೋಪದೋಷಗಳನ್ನು ಮುಂಚಿತವಾಗಿಯೇ ಸರಿಪಡಿಸಿಕೊಂಡು ಸುಸೂತ್ರವಾಗಿ ಪರೀಕ್ಷೆ ನಡೆಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

      ಸಭೆಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ. ಗಿರೀಶ್ ದಿಲೀಪ್ ಬಿಡೋಲಿ, ಪೊಲೀಸ್ ಇಲಾಖೆಯ ಡಿವೈಎಸ್‍ಪಿ ತಿಪ್ಪೇಸ್ವಾಮಿ, ಎಲ್ಲಾ ತಾಲ್ಲೂಕುಗಳ ತಹಶಿಲ್ದಾರರು, ಎಲ್ಲಾ ಕಾಲೇಜುಗಳು ಪ್ರಾಚಾರ್ಯರು, ಹಾಗೂ ಖಜಾನೆಯ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

(Visited 5 times, 1 visits today)

Related posts