ಪೌರ ಕಾರ್ಮಿಕರು, ಆಟೋ ಚಾಲಕರಿಗೆ ಸುರಕ್ಷತಾ ಸಲಕರಣೆಗಳ ವಿತರಣೆ

ತುಮಕೂರು:

      ಕೊರೋನಾ ಸಂಕಷ್ಟದ ಸಮಯದಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಆದೇಶದಂತೆ ಪಡಿತರ ಕಿಟ್ ವಿತರಿಸಲಾಯಿತು ಎಂದು ಕ್ರೀಬ್ಕೋ ಸಂಸ್ಥೆ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು.

      ನಗರದ ಕ್ಯಾತ್ಸಂದ್ರದ ಚಂದ್ರಮೌಳೇಶ್ವರ ಸಹಕಾರ ಸಂಘದ ಆವರಣದ ಬಳಿ ಕೊರೋನಾ ಸಂಕಷ್ಟದಲ್ಲಿರುವ ಕ್ಯಾತ್ಸಂದ್ರ 33, 34ನೇ ವಾರ್ಡ್ ನ ಪೌರಕಾರ್ಮಿಕರು, ಮಡಿವಾಳರು, ಮೇದರು, ಆಟೋ ಚಾಲಕರಿಗೆ ಪಡಿತರ ವಿತರಿಸಿ ಅವರು ಮಾತನಾಡಿದರು.

       ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ಸುರಕ್ಷತಾ ಸಲಕರಣೆಗಳು ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ, ಅವರಿಗೆ ಮೊದಲು ಸುರಕ್ಷತಾ ಸಾಧನಾಗಳನ್ನು ವಿತರಿಸಬೇಕು ಈ ನಿಟ್ಟಿನಲ್ಲಿ ನಮ್ಮ ಭಾಗದ ಮುಖಂಡರು ಗಮನಹರಿಸಬೇಕು, ಟಿಜಿಎಂಸಿ ಬ್ಯಾಂಕ್ ನ ಎನ್.ಎಸ್.ಜಯಕುಮಾರ್ ಅವರು ಬ್ಯಾಂಕ್ ವತಿಯಿಂದ ನೀಡಿರುವ ಯೂನಿಫಾರ್ಮ್ ಧರಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

       ಕೊರೋನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದ್ದು, ಪ್ರತಿ ದಿನ ಬೆಳಿಗ್ಗೆಯೇ ಎದ್ದು ಬೀದಿ ಬೀದಿಗಳಲ್ಲಿ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರು ನಿಜವಾದ ಕೊರೋನಾ ವಾರಿಯರ್ಸ್ ಗಳು, ಸ್ವಚ್ಛತೆಗೆ ಗಮನ ನೀಡುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.     

       ಇಂದಿನ ಪರಿಸ್ಥಿತಿಯಲ್ಲಿ ಕೊರೋನಾದೊಂದಿಗೆ ಜೀವನ ನಡೆಸಬೇಕಾಗಿದ್ದು, ಪೌರಕಾರ್ಮಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಹಾಗೂ ಸ್ಯಾನಿಟೈಜರ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವ ಮೂಲಕ ತಮ್ಮ ಕುಟುಂಬವನ್ನು ಸಹ ಕೊರೋನಾದಿಂದ ದೂರ ಮಾಡಬೇಕು ಎಂದು ಕರೆ ನೀಡಿದರು.

        ತುಮಕೂರು ನಗರದಲ್ಲಿ ಲಾಕ್ ಡೌನ್ ಆರಂಭವಾದಗಿನಿಂದಲೂ ಕಾರ್ಮಿಕರಿಗಾಗಿ ಊಟ ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಹಾಗೂ ಕ್ಯಾತ್ಸಂದ್ರ ಭಾಗದ ಆಟೋ ಚಾಲಕರು ಹಾಗೂ ಪೌರ ಕಾರ್ಮಿಕರಿಗೆ ಪಡಿತರವನ್ನು ನೀಡುವ ಕೆಲಸವನ್ನು ಯಾರು ಹಸಿವಿನಿಂದ ಇರಬಾರದು ಎಂಬ ಉದ್ದೇಶಕ್ಕಾಗಿ ಸಣ್ಣ ಸಹಾಯ ಮಾಡುತ್ತಿದ್ದು, ಇದಕ್ಕೆ ಯಾವುದೇ ರಾಜಕೀಯ ಕಾರಣಗಳಿಲ್ಲ ಎಂದರು.

       ಸಂಘ ಸಂಸ್ಥೆಗಳು ನೀಡುವ ಪಡಿತರದಿಂದಲೇ ಎಲ್ಲ ಆಗುತ್ತದೆ ಎನ್ನುವುದು ತಪ್ಪು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ ಅದಕ್ಕಾಗಿ ಪಡಿತರವನ್ನು ನೀಡಲಾಗಿದೆ, ಪರಸ್ಪರ ಸಹಕಾರದಿಂದ ಕೊರೋನಾದ ಸಂಕಷ್ಟದ ಸಮಯವನ್ನು ಕಳೆಯಬೇಕಿದೆ ಎಂದು ಹೇಳಿದರು.

       ಈ ವೇಳೆ ಸಹಕಾರ ಸಂಘದ ನಿರ್ದೇಶಕರಾದ ಕಲ್ಲಹಳ್ಳಿ ದೇವರಾಜು, ಮಹೇಂದ್ರ ಕುಮಾರ್, ಕೆ.ಜಿ.ಆನಂದ್, ಕೆಎನ್ ಜಯರಾಂ, ಪಿ.ಮೂರ್ತಿ, ಕೆ.ಎ.ಜಯರಾಂ, ಪಿ.ರಾಮು, ಕೆ.ಸತ್ಯಾನಾರಾಯಣ್, ಕೆ.ಎಚ್.ಗಂಗಾಧರ್, ಜಿ.ಎಲ್.ನಾಗೇಶ್ ಹೆಚ್ ಎಂಟಿ, ಆಡಳಿತಾಧಿಕಾರಿ ಉಗ್ರಪ್ಪ, ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ರಂಗನಾಥ್ ಸೇರಿದಂತೆ ಇತರರಿದ್ದರು.

(Visited 7 times, 1 visits today)

Related posts