ಭಾನುವಾರವೂ ಶಾಲೆಗಳನ್ನು ತೆರೆದಿಟ್ಟು ಪಲ್ಸ್ ಪೋಲಿಯೋ ಹನಿ

ತುಮಕೂರು :

      ಜಿಲ್ಲೆಯಲ್ಲಿ ಜನವರಿ 17ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 211330 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ತಿಳಿಸಿದರು.

       ತಮ್ಮ ಕಛೇರಿಯಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೋವಿಡ್-19 ಮಾರ್ಗಸೂಚಿಯನ್ನು ಅನುಸರಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರಲ್ಲದೆ, ಲಸಿಕಾ ಗುಣಮಟ್ಟವನ್ನು ಕಾಪಾಡಲು ಜನವರಿ 10 ರಿಂದ 20ರವರೆಗೆ ನಿರಂತರವಾಗಿ ವಿದ್ಯುತ್‍ಚ್ಛಕ್ತಿ ಸರಬರಾಜು ಮಾಡಬೇಕೆಂದು ಬೆಸ್ಕಾಂ ಅಧಿಕಾರಿಗೆ ನಿರ್ದೇಶನ ನೀಡಿದರು.

       ಭಾನುವಾರವೂ ಸಹ ಶಾಲೆಗಳನ್ನು ತೆರೆದಿಟ್ಟು ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದರು.  ಅಂಗನವಾಡಿ ಕೇಂದ್ರಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆಯಬೇಕು. ಮನೆ-ಮನೆಗೆ ಭೇಟಿ ನೀಡಿ ಐಇಸಿ ಕರಪತ್ರ, ಭಿತ್ತಿಪತ್ರಗಳನ್ನು ವಿತರಿಸಿ ಪೋಲಿಯೋ ಹನಿ ಹಾಕಿಸುವ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಕಾರ್ಯಕರ್ತೆಯರನ್ನು ನಿಯೋಜಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

         ಲಸಿಕೆ ಹಾಕುವವರಿಗೆ ಊಟದ ವ್ಯವಸ್ಥೆ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆ, ಪ್ರಚಾರ ಸಾಮಗ್ರಿಗಳ ವಿತರಣೆ ಹಾಗೂ ಪ್ರದರ್ಶನ ವ್ಯವಸ್ಥೆ, ಲಸಿಕಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ರೋಟರಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಸೂಚಿಸಿದರು.
ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ವಾಹನ ಪೂರೈಸಲು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಹೋರ್ಡಿಂಗ್/ಎಲ್‍ಇಡಿ ಪರದೆಗಳಲ್ಲಿ ಲಸಿಕಾ ಕಾರ್ಯಕ್ರಮದ ಪ್ರದರ್ಶನಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

    ರೈಲ್ವೇ ನಿಲ್ದಾಣ/ ಬಸ್‍ನಿಲ್ದಾಣ/ಟೋಲ್‍ಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಬೇಕು ಹಾಗೂ ಎಲ್ಲಾ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿರುವ ಟೀವಿಗಳಲ್ಲಿ ಕಾರ್ಯಕ್ರಮದ ಬಗ್ಗೆ ನಿರಂತರವಾಗಿ ಬಿತ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆಗೆ ಸೂಚಿಸಿದರು.

      ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವರಾಜ್ ಸಭೆಗೆ ಮಾಹಿತಿ ನೀಡುತ್ತಾ, ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ 1225 ಕೇಂದ್ರ(ಲಸಿಕಾ ಬೂತ್) ಹಾಗೂ 67 ಟ್ರಾನ್ಸಿಟ್ ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಲಸಿಕೆ ನೀಡಲು 221 ವಾಹನಗಳನ್ನು ಬಳಸಿಕೊಂಡು 5070 ಆರೋಗ್ಯ ಸಿಬ್ಬಂದಿ ಹಾಗೂ ಮೇಲ್ವಿಚಾರಣೆಗಾಗಿ 276 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತು ಕರಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಎಸ್. ವೀರಭದ್ರಯ್ಯ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ: ನಾಗೇಶ್, ಡಾ: ಮೋಹನ್‍ದಾಸ್, ಡಾ: ಚೇತನ್, ಡಾ: ಮಹಿಮಾ, ಡಾ: ಪುರುಷೋತ್ತಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್. ನಟರಾಜ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

(Visited 4 times, 1 visits today)

Related posts

Leave a Comment