ತುರುವೇಕೆರೆ: ಕಳೆದು ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ. ಸುರಿದ ಕೃತ್ತಿಕೆ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿದೆ.
ಮಾರ್ಚ್ ತಿಂಗಳ ಕೊನೆಯ ಭರಣಿ ಮಳೆ ತಾಲ್ಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಕೆಲವು ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಹೆಸರು, ಉದ್ದು ಬೀಜ ಬಿತ್ತನೆ ಮಾಡಿದ್ದರು. ಕೆಲವು ಭಾಗದಲ್ಲಿನ ರೈತರು ಭೂಮಿ ಹದಮಾಡಿಕೊಂಡರು. ಜೊತೆಗೆ ಪೂರ್ವ ಮುಂಗಾರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರವನ್ನು ಸಹ ದಾಸ್ತಾನು ಮಾಡಿಕೊಂಡಿದ್ದರು. ಇದಾದ ಮೇಲೆ ಸಮರ್ಪಕವಾಗಿ ಮಳೆ ಬಾರದ ಕಾರಣ ರೈತರು ಬೀಜ ಭಿತ್ತನೆ ಹಿಂದೇಟು ಹಾಕಿದರು. ತಾಲ್ಲೂಕಿನ ಸಂಪಿಗೆ, ದೊಂಬರನಹಳ್ಳಿ, ಕುರುಬರಹಳ್ಳಿ ಬ್ಯಾಲಾ, ತಾಳ್ಕೆರೆ, ಮಾಯಸಂದ್ರ, ಸೂಳೇಕೆರೆ ಲೋಕಮ್ಮನಹಳ್ಳಿ, ದಂಡಿನಶಿವರ, ಬಾಣಸಂದ್ರ ಸೇರಿದಂತೆ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ರೈತರು ಹೆಸರು, ಅಲಸಂದೆ ಭಿತ್ತನೆ ಮಾಡಿದರು ಇದರಿಂದ ಹೆಸರು ಮತ್ತು ಅಲಸಂದೆ ಗಿಡಗಳು ಈಗಾಗಲೇ ಎರಡು ಎಲೆ ಬಂದಿವೆ. ಕೃತ್ತಿಕೆ ಮಳೆ ಚನ್ನಾಗಿ ಬೀಳುತ್ತಿರುವ ಕಾರಣ ಭಿತ್ತನೆ ಮಾಡಿದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ದಬ್ಬೇಘಟ್ಟ ಹೋಬಳಿ ಸೇರಿದಂತೆ ಇನ್ನೂ ಹಲವೆಡೆ ಸರಿಯಾಗಿ ಮಳೆ ಬೀಳದ ಹಿನ್ನೆಲೆಯಲ್ಲಿ ಭೂಮಿ ಹದ ಮಾಡಿಕೊಳ್ಳಲು ರೈತರಿಗೆ ಸಾದ್ಯವಾಗಿಲ್ಲ ಹಾಗಾಗಿ ಹೆಸರು ಭಿತ್ತನೆಗೆ ಹಿನ್ನೆಡೆಯಾಗಿತ್ತು ಈ ಮಳೆಯಿಂದ ಕೃಷಿ ಚಟುವಟಿಕೆ ಗರಿಗೆದರಿದೆ.
ಕಸಬಾ ಹೋಬಳಿಯಲ್ಲಿ ಹೆಸರು ೧೧೦, ಅಲಸಂದೆ ೩೦, ದಂಡಿನಶಿವರ ಹೋಬಳಿಯಲ್ಲಿ ಹೆಸರು ೯೦, ಅಲಸಂದೆ ೩೦, ದಬ್ಬೇಘಟ್ಟ ಹೋಬಳಿಯಲ್ಲಿ ಹೆಸರು ೮೦, ಅಲಸಂದೆ ೩೦, ಮಾಯಸಂದ್ರ ಹೋಬಳಿಯಯಲ್ಲಿ ಹೆಸರು ೧೧೦, ಅಲಸಂದೆ ೧೨೦ ಹೆಕ್ಟೇರ್ ಪ್ರದೇಶದಲ್ಲಿ ಪೂರ್ವಮುಂಗಾರು ಭಿತ್ತನೆಯಾಗಿದೆ.ಪ್ರಸಕ್ತ ಸಾಲಿನಲ್ಲಿ ೬೬೫.೯ ಮೀ.ಮೀಟರ್ ವಾಡಿಕೆ ಮಳೆ ಪೈಕಿ ಇಲ್ಲಿಯ ತನಕ ೨೧೬ ಮಿ.ಮೀಟರ್ ಮಾತ್ರ ಮಳೆಯಾಗಿದೆ. ಕಳೆದ ಬಾರಿ ಏಪ್ರೀಲ್ ಕಳೆದರೂ ಬಾರದ ಮುಂಗಾರು ಮಳೆ ಈ ವರ್ಷ ಮಾರ್ಚ್ ನಿಂದಲೇ ಮಳೆ ಬಂದಿದೆ ಆದರೂ ನಿಶ್ಚಿತ ಪ್ರಮಾಣದಲ್ಲಿ ಪೂರ್ವಮುಂಗಾರು ಭಿತ್ತನೆ ಗುರಿ ಈಡೇರಿಲ್ಲ. ಪೂರ್ವಮುಂಗಾರು ಭಿತ್ತನೆ ತಡವಾದರೆ ಫಸಲು ಸರಿಯಾಗಿ ಬರುವುದಿಲ್ಲ ಜೊತೆಗೆ ರಾಗಿ, ಅವರೆ, ತೋಗರಿ ಭಿತ್ತನೆಗೆ ತೊಂದರೆಯಾಗುತ್ತದೆ ಎಂದು ರೈತ ವಿಶ್ವನಾಥ ತಿಳಿಸಿದ್ದಾರೆ.
ಜನ ಜೀವನ ಅಸ್ತವ್ಯಸ್ತ: ಕಳೆದ ಮೂರು ದಿನಗಳಿಂದ ಎಡೆ ಬಿಡದೆ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆ ಗಳಲ್ಲಿ ನೀರು ತುಂಬಿದ್ದು ಕೆಸರು ಮಯವಾಗಿತ್ತು. ಜನರು ಸಂಚಾರ ಮಾಡಲು ತೊಂದರೆಯಾಗಿತ್ತು. ಬೀದಿ ಬದಿ ದಿನದ ವ್ಯಾಪಾರಿಗಳಿಗೂ ತೊಂದರೆಯಾಗಿ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಜನರು ಮನೆಯಿಂದ ಆಚೆಬರಲು ಹಿಂದೇಟು ಹಾಕುತ್ತಿದ್ದರು. ರೈತರು ಜನ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಕಷ್ಟಪಡುವಂತಾಗಿತ್ತು. ಪಟ್ಟಣದಲ್ಲಿ ಜನರ ಸಂಚಾರ ವಿರಳವಾಗಿದ್ದರು. ಮಂಗಳವಾರ ಮದ್ಯಾಹ್ನದಿಂದ ಬಿಡುವು ನೀಡಿದ ಮಳೆರಾಯನಿಂದ ಜನ ಜೀವನ ಮರಳಿ ಸ್ಥಿತಿಗೆ ತಲುಪಿತು.