
ಹುಳಿಯಾರು: ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಪ್ರಕೃತಿಯ ಕರೆಗಳನ್ನು ಮನೆಯಲ್ಲೇ ಮುಗಿಸಿಕೊಂಡು ಬನ್ನಿ ಎಂದು ಸುದ್ದಿ ಮಾಡಿದಾಯ್ತು. ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಕುಡಿಯುವ ನೀರನ್ನು ಮನೆಯಿಂದಲೇ ತನ್ನಿ ಎನ್ನುವ ಸುದ್ದಿಯನ್ನೂ ಮಾಡಿದಾಯ್ತು. ಈಗ ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ವಿಷಕಾರಿ ಹೊಗೆಯ ರಕ್ಷಣೆಗೆ ಒಳ್ಳೆಯ ಮಾಸ್ಕ್ ಹಾಕ್ಕೊಂಡು ಬನ್ನಿ ಎನ್ನುವ ಸುದ್ದಿ ಮಾಡುವ ಸರದಿ.
ಹೌದು, ಹುಳಿಯಾರು ಪಟ್ಟಣ ಪಂಚಾಯ್ತಿಯ ನಿರ್ಲಕ್ಷö್ಯದಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದಲೂ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿಲ್ಲ ಹಾಗೂ ಶೌಚಾಲಯ ಇಲ್ಲ. ಈಗ ಬಸ್ ನಿಲ್ದಾಣದ ಹೊಸ ಸಮಸ್ಯೆಯಾಗಿದೆ ವಿಷಕಾರಿ ಹೊಗೆ. ಬಸ್ ನಿಲ್ದಾಣದ ಪಕ್ಕದಲ್ಲೇ ನಿತ್ಯ ಕಸಕ್ಕೆ ಬೆಂಕಿ ಇಡುತ್ತಿದ್ದು ಇದರಿಂದ ಹೊರಸೂಸುವ ಹೊಗೆಯದ್ದು ದೊಡ್ಡ ಸಮಸ್ಯೆಯಾಗಿದೆ. ಬೆಳಗ್ಗೆಯ ವೇಳೆ ಪಂಚಾಯ್ತಿಯವರು ಇಟ್ಟರೆ, ಮಧ್ಯಾಹ್ನ ಅಂಗಡಿ, ಹೋಟಲ್‌ನವರು, ರಾತ್ರಿ ಬಾರ್‌ನವರು ಹೀಗೆ ನಿತ್ಯ ಬೆಳಗ್ಗೆಯಿಂದ ಸಂಜೆವರೆವಗೂ ಯಾರಾದರೊಬ್ಬರು ಬೆಂಕಿ ಹಾಕುತ್ತಲೇ ಇರುತ್ತಾರೆ.
ಪಂಚಾಯ್ತಿಯವರು ಕಸ ವಿಲೇವಾರಿ ಘಟಕ ನಿರ್ಮಿಸಿಲ್ಲವಾದ್ದರಿಂದ ನಿತ್ಯ ಬೆಳಗ್ಗೆ ಪಟ್ಟಣದ ಬೀದಿ ಕಸ ಗುಡಿಸಿದ ನಂತರ ಸಂಗ್ರಹವಾದ ತ್ಯಾಜ್ಯವನ್ನು ಬಸ್ ನಿಲ್ದಾಣದ ಪಕ್ಕದ ಕೆರೆ ದಡಕ್ಕೆ ತಂದು ಸುರಿದು ಬೆಂಕಿ ಹಾಕಿ ಹೋಗುತ್ತಾರೆ. ಅಂಗಡಿ, ಹೋಟಲ್, ಬಾರ್‌ನವರು ತಮ್ಮಲ್ಲಿನ ತ್ಯಾಜ್ಯವನ್ನು ತಂದು ಕೆರೆ ದಡದಲ್ಲೇ ಸುರಿದು ಬೆಂಕಿ ಇಟ್ಟು ತೊಂದರೆ ಕೊಡುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಪರಿಣಾಮ ಬೆಳಗ್ಗೆಯಿಂದ ಸಂಜೆಯವರೆವಿಗೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ವಾಹನ ಸವಾರರು, ವ್ಯಾಪಾರಿಗಳು, ಸಾರ್ವಜನಿಕರು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಡುವ ಪ್ಲಾಸ್ಟಿಕ್ ಕವರ್, ಪೇಪರ್, ಹೊರಸೂಸುವ ವಿಷಕಾರಿ ಹೊಗೆಯನ್ನು ಕುಡಿಯುವುದು ಅನಿವಾರ್ಯ ಕರ್ಮವಾಗಿದೆ.
ಪತ್ರಿ ನಿತ್ಯ ಕೆರೆ ಏರಿಯ ಮೇಲೆ ವಾಯುವಿಹಾರಕ್ಕೆ ಬರುವವರು ಈ ವಿಷಕಾರಿ ಗಾಳಿಗೆ ಹೆದರಿ ವಾಯುವಿಹಾರದ ಮಾರ್ಗವನ್ನೇ ಬದಲಾಯಿಸಿದ್ದಾರೆ. ಕೆರೆ ಏರಿಯ ಮೇಲಿನ ರಸ್ತೆಯ ಮೂಲಕ ಶಾಲಾಕಾಲೇಜಿಗೆ ಓಡಾಡುತ್ತಿದ್ದ ವಿದ್ಯಾರ್ಥಿಗಳು ರಾಷ್ಟಿçÃಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದಾರೆ. ಇನ್ನು ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾಯುವವರು ಸೀರೆಯ ಸೆರಗೋ, ಕರ್ಚಿಪ್ಪೋ, ವೇಲ್‌ನಲ್ಲೂ ಮೂಗು ಮುಚ್ಚಿಕೊಳ್ಳಬೇಕಿದೆ. ಇದು ಒಂದೆರಡು ದಿನಗಳದಲ್ಲ ನಿತ್ಯದ ಸಮಸ್ಯೆಯಾಗಿದ್ದರೂ ಸಹ ಪಂಚಾಯ್ತಿಯವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಪಂಚಾಯ್ತಿಯವರು ರಾಶಿಗಟ್ಟಲೆ ಸಂಗ್ರಹವಾಗುವ ಕಸಕ್ಕೆ ಒಮ್ಮೆಲೆ ಬೆಂಕಿ ಇಡುವುದರಿಂದ ಬೆಂಕಿಯ ಜ್ವಾಲೆ ಹತ್ತದಿನೈದು ಅಡಿ ಎತ್ತರದವರೆವಿಗೆ ಏರುತ್ತದೆ. ಸಮೀಪದ ಮರಗಳು, ವಿದ್ಯುತ್ ಮಾರ್ಗಕ್ಕೆ ಇದರಿಂದ ಹಾನಿಯಾಗುವ ಸಾಧ್ಯತೆಇದೆ. ಅಲ್ಲದೆ ಸಮೀಪದಲ್ಲಿರುವ ಗೂಡಂಗಡಿಗಳಿಗೆ ಬೆಂಕಿಯ ಕೆನ್ನಾಲಿಗೆ ತಗುಲಿ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ದಡ್ಡವಾಗಿ ಏಳುವ ಹೊಗೆ ವಾಹನ ಸಾವರರಿಗೆ ತೊಂದರೆಯಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅನಾಹುತ ಸಂಭವಿಸುವ ಮುನ್ನ ಕಸ ಹಾಕುವವರು ಹಾಗೂ ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದುರ್ವಾಸನೆಯ ಹೊಗೆ ಕುಡಿದು ಸಾಕಾಗಿದೆ
ನನ್ನದೊಂದು ಖಾಸಗಿ ಬಸ್ ಇದೆ. ನಿತ್ಯ ಮುಂಜಾನೆ ಶಿರಾ ರೂಟ್ ಬಸ್ ಕಳುಹಿಸಲು ಬಸ್ ನಿಲ್ದಾಣಕ್ಕೆ ಬರುತ್ತೇನೆ. ಇಲ್ಲಿಗೆ ಬಂದಾಗಿನಿAದಲೂ ಮೂಗು ಮುಚ್ಚಿಕೊಂಡು ಓಡಾಡಬೇಕು. ಅಷ್ಟರಮಟ್ಟಿಗೆ ದುರ್ವಾಸನೆಯ ಹೊಗೆ ಬರುತ್ತದೆ. ಬಸ್ ಹತ್ತಲು ಬರುವ ಪ್ರಯಾಣಿಕರು ಇದೇನ್ರಿ ನಿಮ್ಮೂರ ಬಸ್ ಸ್ಟಾಂಡ್‌ನಲ್ಲಿ ೫ ನಿಮಿಷ ನಿಲ್ಲೋದಕ್ಕಾಗದಷ್ಟು ಹೊಗೆ. ಪಂಚಾಯ್ತಿಯವರಿಗೆ ಹೇಳಿ ಇದಕ್ಕೆ ಕಡಿವಾಣ ಹಾಕಿಸಿ ಎನ್ನುತ್ತಾರೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಪಂಚಾಯ್ತಿಯವರೇ ಬೆಂಕಿ ಇಟ್ಟರೆ ಯಾರಿಗೆ ದೂರೋದು ಹೇಳಿ?
> ರಾಜಣ್ಣ, ಖಾಸಗಿ ಬಸ್ ಮಾಲೀಕ, ಹುಳಿಯಾರು
ನಿತ್ಯ ಬೆಳಗ್ಗೆ ಪೂಜೆ ಹೂ ಬಿಡಿಸಿಕೊಂಡು ಹೋಗುವಾಗ ಬಸ್ ನಿಲ್ದಾಣದ ಟೀ ಅಂಗಡಿಯಲ್ಲಿ ಅರ್ದ ಟೀ ಕುಡಿದು ಹೋಗುವುದನ್ನು ಸುಮಾರು ವರ್ಷಗಳಿಂದ ಹವ್ಯಾಸ ಮಾಡಿಕೊಂಡಿದ್ದೇನೆ. ಹೋಟೆಲ್‌ನವರು ಟೀ ಹಾಕಿ ಕೊಡುವವರೆವಿಗೂ, ಕೊಟ್ಟ ಟೀ ಕುಡಿಯುವವರೆವಿಗೂ ಪುಕ್ಕಟ್ಟೆಯಾಗಿ ಈ ಹೊಗೆ ಕುಡಿಯಬೇಕಿದೆ. ಹೊಗೆ ಕುಡಿದು ಆರೋಗ್ಯ ಏಕೆ ಹಾಳುಮಾಡಿಕೊಳ್ಳೋಣವೆಂದು ಟೀ ಕುಡಿಯದೆ ಹೋಗುತ್ತಿದ್ದೇನೆ.
> ಪುಟ್ಟರಾಜು, ಸ್ಥಳೀಯ ನಿವಾಸಿ, ಹುಳಿಯಾರು
ಬೆಂಕಿ ಹಾಕದಂತೆ ಎಚ್ಚರಿಕೆ ನೀಡಿದ್ದೇನೆ
ಪೌರಕಾರ್ಮಿಕರು ಕಸಕ್ಕೆ ಬೆಂಕಿ ಇಡದಂತೆ ಎಚ್ಚರಿಕೆ ನೀಡಿದ್ದೇನೆ. ಒಂದು ಪಕ್ಷ ಅವರೇ ಇಟ್ಟಿದ್ದರೆ ನೋಟಿಸ್ ಕೊಡುತ್ತೇನೆ. ಬೇರೆಯವರು ಇಟ್ಟಿದ್ದರೆ ದಂಡ ವಿಧಿಸುತ್ತೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಈಗಲೇ ಹೆಲ್ತ್ ಇನ್ಸ್ಪೆಕ್ಟರ್ ಅವರಿಗೆ ಸೂಚನೆ ನೀಡುತ್ತೇನೆ.
> ನಾಗಭೂಷಣ್, ಮುಖ್ಯಾಧಿಕಾರಿ, ಪಪಂ, ಹುಳಿಯಾರು
(Visited 1 times, 1 visits today)