ಕೊರಟಗೆರೆ: ಸನಾತನ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳು ಉಳಿಯಬೇಕಾದರೆ ಪ್ರತಿಯೊಂದು ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು. ವರ್ಣರಹಿತವಾಗಿ ಬದುಕು ಕಟ್ಟಿಕೊಳ್ಳಬೇಕಾದರೆ ಇಂತಹ ಹಬ್ಬಗಳು, ಜಾತ್ರೆಗಳು ಅವಕಾಶ ಮಾಡಿಕೊಡುತ್ತವೆ ಎಂದು ಎಲೆರಾಂಪುರ ನರಸಿಂಹಗಿರಿ ಸುಕ್ಷೇತ್ರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನಪಾಳ್ಯ ಗ್ರಾಮದೇವತೆ ಶ್ರೀದೊಡ್ಡಮ್ಮ ದೇವಿ ದೇವಾಲಯದ ಆವರಣದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ೧ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ ಶ್ರೀದೊಡ್ಡಮ್ಮದೇವಿಯ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಹಾಗೂ ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮವು ಆ.೨೯ ರಿಂದ ೩೧ ರವರೆಗೆ ನಡೆಯಲಿದೆ ಎಂದು ಹೇಳಿದರು.
ದೇವಾಲಯದ ಧಾರ್ಮಿಕ ಕಾರ್ಯಕ್ರಮ ಸಿಂಹಪಾಲು ಉದ್ಯಮಿ ನಿಲೇಶ್‌ಗೆ ಸಲ್ಲಬೇಕು. ರಸ್ತೆ ಮತ್ತು ಮೂಲಭೂತ ಸೌಕರ್ಯದಿಂದ ವಂಚಿತಗೊAಡ ಈ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಆ.೩೧ಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್‌ರವರು ಆಗಮಿಸಲಿದ್ದು, ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳು ಸೇರಿದಂತೆ ರಾಜ್ಯದ ಹಲವು ಭಾಗದ ಶ್ರೀಮಠದ ಶ್ರೀಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ, ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ೨ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಉದ್ಯಮಿ ನಿಲೇಶ್ ಮಾತನಾಡಿ, ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನಪಾಳ್ಯ ಗ್ರಾಮದೇವತೆ ಶ್ರೀದೊಡ್ಡಮ್ಮ ದೇವಿ ದೇವಾಲಯದಲ್ಲಿ ಆ.೨೯ರಿಂದ ೩೧ರವೆರೆಗೆ ವಿಶೇಷ ಧಾರ್ಮಿಕ ಪೂಜೆಗಳು ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮವು ಎಲೆರಾಂಪುರ ಶ್ರೀಗಳ ಆಶೀರ್ವಾದದಿಂದ ಸಿದ್ದತೆಗೊಂಡಿದೆ. ಇದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು.
ಈ ವೇಳೆ ಮತ್ತೋರ್ವ ಉದ್ಯಮಿ ವಿಜಯ್, ಹಿರಿಯ ಮುಖಂಡ ಹನುಮಂತರಾಯಪ್ಪ ಸೇರಿದಂತೆ ಇತರರು ಇದ್ದರು.
೩ದಿನದ ಧಾರ್ಮಿಕ ಕಾರ್ಯಕ್ರಮ:
ದೊಡ್ಡಮ್ಮ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಪೂಜಾ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ಆ.೨೯ರ ಸಂಜೆ.೪ಕ್ಕೆ ಗಂಗಾಪೂಜೆ, ಗುರುಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ದೇವನಾಂದಿ, ಪಂಚಗವ್ಯ, ಆಚಾರ್ಯಾದಿ ಋತ್ವಿಕ್‌ವರುಣ, ರಕ್ಷಾಸೂತ್ರಾ ಪೂಜೆ, ಮೃತ್ಯುಗ್ರಹಣ, ಮಹಾಮಂಗಳಾರತಿ, ಆ.೩೦ರಂದು ಯಾಗಾಶಾಲಾ ಪ್ರವೇಶ, ಕಲಶಾಸ್ಥಾಪನೆ, ನವಗ್ರಹ, ಮೃತ್ಯುಂಜಯ, ಆ.೩೧ರಂದು ಪ್ರಾತಕಾಲದಲ್ಲಿ ನೇತ್ರೋಲನ, ಪ್ರಾಣ ಪ್ರತಿಷ್ಠಾಪನೆ, ಕಲಶ ಪೂಜೆ, ಮಹಾ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಚಂಡಿಕಾಹೋಮ, ತೀರ್ಥ ಪ್ರಸಾದ ವಿನಿಯೋಗವಿದೆ ಎಂದು ಎಲೆರಾಂಪುರ ಶ್ರೀಮಠದ ಶ್ರೀಗಳು ತಿಳಿಸಿದರು.