
ತುಮಕೂರು: ದೇಶದಲ್ಲಿ ನ್ಯಾಯ ನೀಡುವಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಮಾನವೇ ಅಂತಿಮ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಡಾ. ವಿ. ಸುದೇಶ್ ಹೇಳಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ನ್ಯಾಯದ ಪರಿಕಲ್ಪನೆ ರಕ್ಷಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಪಾತ್ರವೇ ಅಂತಿಮ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು. ಸಂವಿಧಾನದ ಅನುಚ್ಚೇಧ ೩೨ ಮತ್ತು ೧೩೬ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಮತ್ತು ವಿಶೇಷ ಮೇಲ್ಮನವಿಗಳನ್ನು ತೆಗೆದುಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸುವ ಅಧಿಕಾರವಿದ್ದರೂ ಸಹ ಅನುಚ್ಛೇಧ ೧೪೨ ರಡಿ ನ್ಯಾಯದ ಪರಿಕಲ್ಪನೆಯ ರಕ್ಷಣೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಪಾತ್ರವೇ ಅಂತಿಮವೆ0ದು ಇದರಡಿ ರಾಮಜನ್ಮಭೂಮಿ ಪ್ರಕರಣ ಇತ್ಯರ್ಥವಾಗಿದೆ. ಅದೇ ರೀತಿ ಇದೀಗ ರಾಷ್ಟçಪತಿ ಮತ್ತು ರಾಜ್ಯಪಾಲರ ಅಧಿಕಾರದಲ್ಲಿ ಶಾಸಕಾಂಗ ಕಾರ್ಯಾಂಗಗಳ ನಡುವೆ ಸಂಘರ್ಷಣೆ ತಲೆದೋರಿದೆ. ಇದಕ್ಕೆ ಸರ್ವೋಚ್ಛ ನ್ಯಾಯಲಯದಿಂದ ಬರುವ ತೀರ್ಪು ಅಂತಿಮವಾಗುತ್ತದೆ ಎಂದು ತಿಳಿಸಿದರು.
ಕಾನೂನು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ನ್ಯಾಯ ರಕ್ಷಣೆ ನೀಡುವಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಯಾವುದು ಮೇಲು, ಯಾವುದಕ್ಕೆ ಹೆಚ್ಚಿನ ಅಧಿಕಾರವಿದೆ ಎಂದು ಚಿಂತಿಸಿ ಸಂಶೋಧನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನ್ಯಾಯಾಧೀಶರು ನ್ಯಾಯ ಒದಗಿಸುವಲ್ಲಿ ನಿಯಮಗಳನ್ನಷ್ಟನ್ನೇ ಪರಿಪಾಲಿಸದೆ ಅದನ್ನು ಮೀರಿದ ಮಾನವೀಯ ಮೌಲ್ಯಗಳನ್ನು ಪರಿಗಣಿಸಿ ನ್ಯಾಯ ನೀಡಬೇಕು. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ ಎಂದ ಅವರು, ಸಂವಿಧಾನ ಮೀರಿದರೂ ನ್ಯಾಯ ನೀಡುವಾಗ ಮಾನವೀಯ ಮೌಲ್ಯಗಳಿರಬೇಕು. ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಹೇಳಿದರು.
ವಿದ್ಯೋದಯ ಫೌಂಡೇಷನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಹೆಚ್.ಎಸ್.ರಾಜು ಮಾತನಾಡಿ, ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪರಿಣಿತರಿಂದ ಕಾರ್ಯಾಗಾರ ನಡೆಸಿ ಉಪನ್ಯಾಸ ಕೊಡಿಸಲಾಗುತ್ತಿದೆ. ಕಾನೂನು ಪಂಡಿತರು ಕಾಲೇಜಿಗೆ ಬಂದಾಗ ವಿದ್ಯಾರ್ಥಿಗಳು ಅವರಿಂದ ತಮಗೆ ಅವಶ್ಯ ಇರುವ ಜ್ಞಾನವನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಮ್ಮ ಕಾಲೇಜು ಈ ಹಿಂದಿನಿ0ದಲೇ ಕಾನೂನು ವಿದ್ಯಾರ್ಥಿಗಳಿಗೆ ಕಾನೂನು ಪರಿಣತರಿಂದ ಕಾನೂನು ಸೇವೆಗಳ ಬಗ್ಗೆ ಉಪನ್ಯಾಸ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.
ಕಾನೂನು ವಿದ್ಯೋದಯ ಕಾಲೇಜಿನ ಸಿಇಒ ಪ್ರೊ.ಕೆ. ಚಂದ್ರಣ್ಣ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಹೇಗೆ ಪರಿಣಿತರು ಇರುತ್ತಾರೋ ಹಾಗೆಯೇ ನ್ಯಾಯವಾದಿಗಳಲ್ಲೂ ವಿಶೇಷ ಪರಿಣಿತಿ ಪಡೆದವರಿದ್ದಾರೆ. ಇಂತಹ ಪರಿಣಿತರಿಂದ ಜ್ಞಾನವನ್ನು ಪಡೆದು ಕಾನೂನು ವಿದ್ಯಾರ್ಥಿಗಳು ಮುಂದೆ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾನೂನು ವಿದ್ಯಾರ್ಥಿಗಳು ಕಾನೂನು ಸೇವೆಗಳ ಬಗ್ಗೆ ಜ್ಞಾನ ಪಡೆದುಕೊಳ್ಳುವುದು ಅತ್ಯವಶ್ಯ. ಮುಂದೆ ವೃತ್ತಿ ಜೀವನದಲ್ಲಿ ಅದೇ ತಮ್ಮ ಕೈಹಿಡಿಯಲಿದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯೋದಯ ಫೌಂಡೇಷನ್ (ರಿ) ಟ್ರಸ್ಟ್ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಡಾ. ವಿ. ಸುದೇಶ್ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯೋದಯ ಫೌಂಡೇಷನ್ (ರಿ) ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಹೆಚ್.ಎಸ್.ರಾಜು, ಸಿ.ಇ.ಒ. ಪ್ರೊ.ಕೆ.ಚಂದ್ರಣ್ಣ, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮಾಸೈಯದಿ, ಹಿರಿಯ ಉಪನ್ಯಾಸಕರಾದ ಡಾ. ಎ. ನಾರಾಯಣಸ್ವಾಮಿ, ಕೆ.ವಿ. ರೂಪ, ಕೆ.ಎಸ್. ಪುಷ್ಪಾ ಹಾಗೂ ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.





