
ತುಮಕೂರು: ಅಂಗವಿಕಲತೆ ಶಾಪವೂ ಅಲ್ಲ. ವರವೂ ಅಲ್ಲ. ವಾಸ್ತವವೆಂಬುದನ್ನು ಅಂಗವೈಕಲ್ಯಕ್ಕೊಳಗಾದ ಮಕ್ಕಳು ಮತ್ತು ಅವರ ಪೋಷಕರು ಅರ್ಥ ಮಾಡಿಕೊಂಡು ಸರಕಾರ, ಸರಕಾರೇತರ ಸಂಸ್ಥೆಗಳು ನೀಡುವ ಸಹಕಾರ ಪಡೆದು, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ: ಸಿದ್ದರಾಮಣ್ಣ ತಿಳಿಸಿದ್ದಾರೆ.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ‘ಮೊಬಲಿಟಿ ಇಂಡಿಯಾ ತುಮಕೂರು’ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಆರೈಕೆದಾರರಿಗೆ ಪುನಶ್ಚೇತನ ಸೇವೆಯಲ್ಲಿ ಆರಂಭಿಕ ಮದ್ಯಸ್ಥಿಕೆ, ನಿರಾಮಯ ಆರೋಗ್ಯ ಕಾರ್ಡು ವಿತರಣೆ ಹಾಗು ಅರಿವಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಲಚೇತನ ಮಕ್ಕಳ ಆರೈಕೆಗೆ ತಾಳ್ಮೆ ಅತಿ ಮುಖ್ಯ ಎಂದರು.
ಮೊಬಿಲಿಟಿ ಇಂಡಿಯಾ ಕಳೆದ ಹತ್ತಾರು ವರ್ಷಗಳಿಂದ ಇಡೀ ಭಾರತದಾದ್ಯಂತ ವಿಕಲಚೇತನರ ಪುನಶ್ಚೇತನಕ್ಕೆ ದುಡಿಯುತ್ತಿರುವ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಸುಮಾರು ೧೧,೪೫,೨೬೫ ಅಂಗವಿಕಲರಿದ್ದು, ಜಿಲ್ಲೆಯಲ್ಲಿ ಸುಮಾರು ೪೦,೦೦೦ಕ್ಕೂ ಹೆಚ್ಚು ವಿಕಲಚೇತನರಿದ್ದಾರೆ. ಇವರಲ್ಲಿ ೦-೧೮ ವರ್ಷ ವಯಸ್ಸಿನ ಸುಮಾರು ೧೧೮೧ ಮಕ್ಕಳನ್ನು ಗುರುತಿಸಿ, ಅವರ ಪುನಶ್ಚೇತನಕ್ಕೆ ಅಗತ್ಯ ಪರಿಕರಗಳನ್ನು ವಿತರಿಸಿ, ಅವುಗಳ ಬಳಕೆಯ ಮೂಲಕ ಹೇಗೆ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದು ಎಂಬ ತರಬೇತಿಯನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ವಿಕಲಚೇತನ ಮಕ್ಕಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಪ್ರಾಧ್ಯಾಪಕ ಹಾಗೂ ತುಮಕೂರು ವಿವಿ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜಿ. ಪರುಶುರಾಮ್ ಮಾತನಾಡಿ, ಅಂಗವಿಕಲರ ಸಮುದಾಯ ಆಧಾರಿತ ಕಾರ್ಯಕ್ರಮಗಳಲ್ಲಿ ಮೊಬಿಲಿಟಿ ಇಂಡಿಯಾ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮೊದಲಿಗೆ ೦-೧೮ ವರ್ಷದ ಅಂಗವಿಕಲ ಮಕ್ಕಳನ್ನು ಗುರುತಿಸಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರ ಜೀವನ ಮಟ್ಟ ಸುಧಾರಿಸಲು ಅಗತ್ಯ ಪರಿಕರಗಳನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸಿ ಬಳಕೆ ಮಾಡುವ ತರಬೇತಿ ನೀಡಿ, ವಿಕಚೇತನರ ಬಾಳಿನಲ್ಲಿ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.
ಅ0ಗವಿಕಲ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನ ಸಮಯವನ್ನು ಈ ಮಕ್ಕಳಿಗೆ ನೀಡಬೇಕಾಗುತ್ತದೆ. ಇದಕ್ಕಾಗಿ ಪೋಷಕರು ಬೇಸರ ವ್ಯಕ್ತಪಡಿಸದೆ ತಾಳ್ಮೆಯಿಂದ ಕೆಲಸ ಮಾಡಿದರೆ ನಿಮ್ಮ ಮಕ್ಕಳು ಇತರೆ ಮಕ್ಕಳಂತೆ ಸಮಾಜದಲ್ಲಿ ಬದುಕಲು ಸಾಧ್ಯ. ಇದನ್ನು ಅರ್ಥ ಮಾಡಿಕೊಂಡು, ಪ್ರತಿ ಹಂತದ ತರಬೇತಿಯನ್ನು ಎಚ್ಚರಿಕೆಯಿಂದ ಗಮನಿಸಿ ಅದನ್ನು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಿಡಿಪಿಓ ನಾಗರಾಜು ಮಾತನಾಡಿ, ಅಂಗವಿಕಲ ಮಕ್ಕಳ ಪಾಲನೆ, ಪೋಷಣೆ ನಿಜಕ್ಕೂ ಒಂದು ಸವಾಲಿನ ಕೆಲಸ. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕೆಂದರೆ ಮಕ್ಕಳ ಪೋಷಕರು ಬಹಳ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಿದೆ. ಮೊಬಿಲಿಟಿ ಇಂಡಿಯಾ ಸಂಸ್ಥೆಯು ಪ್ರತಿ ಮಗುವಿನ ಮಾನಸಿಕ ಮತ್ತು ದೈಹಿಕ ತೊಂದರೆಯನ್ನು ಅರ್ಥ ಮಾಡಿಕೊಂಡು, ಅದರ ಪರಿಹಾರಕ್ಕೆ ವೈಜ್ಞಾನಿಕವಾಗಿ ಪರಿಕರಗಳನ್ನು ತಯಾರಿಸಿ ನೀಡುತ್ತಿದೆ. ಇದನ್ನು ಸಮರ್ಥವಾಗಿ ವಿಕಲಚೇತನ ಮಗುವಿನ ದೈನಂದಿನ ವ್ಯಾಯಾಮದಲ್ಲಿ ಅಳವಡಿಸಿಕೊಂಡರೆ ಸಾಮಾನ್ಯ ಮಗುವಿನಂತಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೊಬಿಲಿಟಿ ಇಂಡಿಯಾ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಎಸ್.ಎನ್. ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ೪ ತಾಲೂಕುಗಳಲ್ಲಿ ಮೊಬಿಲಿಟಿ ಇಂಡಿಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಸಹಾಯಕಿಯರ ಸಹಯೋಗದೊಂದಿಗೆ ೦-೦೬ವರೆಗಿನ ಸುಮಾರು ೧೮೧ ಅಂಗವಿಕಲ ಮಕ್ಕಳನ್ನು ಗುರುತಿಸಿ, ಅವರ ಪುನಶ್ಚೇತನಕ್ಕೆ ಶ್ರಮಿಸುತ್ತಿದೆ. ಮಕ್ಕಳ ಜೊತೆಗೆ ಮಕ್ಕಳ ಪೋಷಕರಿಗೂ ತರಬೇತಿ ನೀಡಿ, ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸಲು ಪ್ರಯತ್ನಿಸುತ್ತಿದೆಯಲ್ಲದೆ ನಿರಾಮಯ ಕಾರ್ಡುಗಳ ಮೂಲಕ ಇಂತಹ ಮಕ್ಕಳಿಗೆ ಸಿಗುವ ಆರೋಗ್ಯ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ. ಇಂದು ೨೧ ಮಕ್ಕಳಿಗೆ ನಿರಾಮಯ ಕಾರ್ಡು ನೀಡುತ್ತಿದ್ದು, ಸುಮಾರು ೧,೦೦,೦೦೦ ರೂ.ಗಳವರೆಗೆ ವಾರ್ಷಿಕ ಸಹಾಯಧನ ದೊರೆಯಲಿದೆ. ಇದರ ಜೊತೆಗೆ ಮಕ್ಕಳ ದೈಹಿಕ ಬೆಳವಣಿಗೆಗೆ ಅಗತ್ಯವಿರುವ ಪರಿಕರಗಳನ್ನು ನೀಡಿ ಆತ್ಮಸ್ಥೆöÊಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೊಬಿಲಿಟಿ ಇಂಡಿಯಾದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಸುಮಾರು ೫೦ಕ್ಕೂ ಹೆಚ್ಚು ದೈಹಿಕ ಅಂಗವಿಕಲ ಮಕ್ಕಳಿಗೆ ವಿವಿಧ ಪರಿಕರ ಮತ್ತು ನಿರಾಮಯ ಕಾರ್ಡುಗಳನ್ನು ವಿತರಿಸಲಾಯಿತು.





