
ಹುಳಿಯಾರು: ವಿದ್ಯಾರ್ಥಿಗಳು ಓದುವ ವಿಷಯದಲ್ಲಿ ಹಾಗೂ ಗುರಿ ಸಾಧಿಸುವಲ್ಲಿ ಸ್ವಾರ್ಥಿಗಳಾಗಬೇಕು, ಸದಾ ಕ್ರಿಯಾಶೀಲರಾಗಿರಬೇಕು, ಸ್ವಾವಲಂಭಿಗಳಾಗಿರಬೇಕು. ನಿಂತ ನೀರಿನಂತಾಗದೆ ಹರಿಯುವ ನೀರಿನಂತೆ ಪರಿಶುದ್ಧವಾದ ಮನಸ್ಸಿನಿಂದ ಇರಬೇಕು. ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಬೆಳಸಿಕೊಳ್ಳಬೇಕು. ನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎನ್ನುವ ನಿಸ್ವಾರ್ಥತೆಯನ್ನು ಬೆಳಸಿಕೊಂಡಾಗ ಸಮಾಜದಲ್ಲಿ ಅಜಾತಶತ್ರುವಾಗಿ ಬೆಳೆಯಬಹುದು ಎಂದು ಅಬ್ಯಾಕಸ್ ಶಿಕ್ಷಕಿ ಮನೋಜ್ ಅವರು ತಿಳಿಸಿದರು.
ಹುಳಿಯಾರಿನಲ್ಲಿ ತಾವು ನಡೆಸುತ್ತಿರುವ ಅಬ್ಯಾಕಸ್‌ನಿಂದ ಬಂದ ಲಾಭಾಂಶದಲ್ಲಿ ಹುಳಿಯಾರಿನ ಕೇಶವಾ ವಿದ್ಯಾ ಮಂದಿರದ ಎಲ್‌ಕೆಜಿಯಿಂದ ೭ ನೇ ತರಗತಿಯ ಅಷ್ಟೂ ವಿದ್ಯಾರ್ಥಿಗಳಿಗೆ ಹಾಟ್ ಅಂಡ್ ಕೋಲ್ಡ್ ವಾಟರ್ ಬಾಟಲ್‌ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿ ನಾವು ಹುಟ್ಟಿದಾಗ ಎನನ್ನೂ ತೆಗೆದುಕೊಂಡು ಬರಲಿಲ್ಲ, ಸತ್ತಾಗಲೂ ಎನ್ನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ದುಡಿದ ಅಷ್ಟೂ ಹಣವನ್ನು ಕೂಡಿಡದೆ ಸ್ವಲ್ಪ ಹಣವನ್ನು ಸೇವಾ ಕಾರ್ಯಗಳಿಗೆ ಬಳಸಬೇಕೆಂದು ನಿರ್ಧರಿಸಿ ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್ ನೀಡುತ್ತಿರುವುದಾಗಿ ತಿಳಿಸಿದರು.
ಮನುಷ್ಯನ ಆರೋಗ್ಯಕ್ಕೆ ನೀರು ಅತಿ ಮುಖ್ಯ. ಶುದ್ಧ ನೀರು ಕುಡಿಯುವ ಜೊತೆಗೆ ದಿನಕ್ಕೆ ಕನಿಷ್ಟ ೩ ಲೀಟರ್ ನೀರು ಸೇವಿಸುವುದು ಅತ್ಯಗತ್ಯ. ಆದರೆ ವಿದ್ಯಾರ್ಥಿಗಳು ಶಾಲೆಗೆ ಬರುವ ಮುಂಚೆ ಮನೆಯಲ್ಲಿ ನೀರು ಕುಡಿಯುವುದು ಬಿಟ್ಟರೆ ಮತ್ತೆ ಮಧ್ಯಾಹ್ನ ಊಟದ ಸಂದರ್ಭದಲ್ಲೇ ಕುಡಿಯುವುದು. ಹಾಗಾಗಿ ಕೈಯಲ್ಲಿ ನೀರಿದ್ದರೆ ಗಂಟೆಗೊಮ್ಮೆ ಕುಡಿದು ಆರೋಗ್ಯ ಕಾಪಾಡಿಕೊಳ್ಳಬಹುದೆನ್ನುವ ಸದುದ್ದೇಶದಿಂದ ಅದರಲ್ಲೂ ಪ್ಲಾಸ್ಟಿಕ್ ಬಾಟಲ್ ನೀರು ಅಪಾಯಕಾರಿಯೆಂದು ಸ್ಟೀಲ್ ಬಾಟಲ್ ಕೊಟ್ಟಿದ್ದು ಶಿಕ್ಷಕರು ಕಾಲಕಾಲಕ್ಕೆ ಮಕ್ಕಳಿಗೆ ನೀರು ಕುಡಿಯುವಂತೆ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಲು ನೆರವಾಗಬೇಕು ಎಂದರು.
ಕೇಶವಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಟಿ.ಜಯಣ್ಣ ಮಾತನಾಡಿ ಕರ್ಣ ಅಭ್ಯಂಜಯ ಸ್ನಾನಕ್ಕೆ ಎಣ್ಣೆ ಹಚ್ಚಿಕೊಳ್ಳುವಾಗ ಬ್ರಾಹ್ಮಣ ವೇಷದಾರಿ ಕೃಷ್ಣ ಬಟ್ಟಲನ್ನು ದಾನ ಕೇಳುತ್ತಾನೆ. ಕೂಡಲೇ ಕರ್ಣ ಬಟ್ಟಲನ್ನು ಹಿಡಿದುಕೊಂಡಿದ್ದ ಎಡಗೈಯಿಂದಲೇ ದಾನ ಕೊಟ್ಟುಬಿಡುತ್ತಾನೆ. ನೀವು ದಾನಶೂರ ಕರ್ಣ, ಎಡಗೈಯಿಂದ ದಾನವನ್ನು ನೀಡಬಹುದೇ ಎಂದು ಬ್ರಾಹ್ಮಣ ಪ್ರಶ್ನಿಸಿದಾಗ ನನ್ನ ಬಲಗೈಗೆ ಎಣ್ಣೆಯಾಗಿದೆ. ನಾನು ಅದನ್ನು ತೊಳೆದುಕೊಂಡು ಬರಲು ಹೋದಾಗ ನನ್ನ ಮನಸ್ಸು ಯಾವುದೋ ಕಾರಣಕ್ಕೆ ಆ ಬಟ್ಟಲನ್ನು ನಿನಗೆ ದಾನವಾಗಿ ನೀಡಲು ಒಪ್ಪದೇ ಹೋದರೆ? ನನ್ನ ಮನಸ್ಸು ಬದಲಾಗಿ ನಾನು ದಾನ ಕೊಡದೇ ಹೋದರೆ ಅದು ದೊಡ್ದ ತಪ್ಪಾಗುತ್ತದೆ. ಅದೇ ಕಾರಣಕ್ಕೆ, ಎಡಗೈಯಿಂದ ದಾನ ನೀಡುವುದು ಸರಿಯಾದ ಕ್ರಮ ಅಲ್ಲವಾದರೂ ನಾನು ಮನಸ್ಸಿನ ಚಂಚಲತೆಗೆ ಅಂಜಿ ದಾನ ಮಾಡಿದೆ. ನನ್ನಿಂದ ಅಪಚಾರವಾದರೆ ಕ್ಷಮಿಸಬೇಕು ಎನ್ನುತ್ತಾನೆ. ಹಾಗಾಗಿ ದಾನ ಮಾಡಬೇಕು ಎಂದು ಮನಸ್ಸು ಬಂದಾಗ ಯೋಚಿಸದೆ ದಾನ ಮಾಡುವುದು ಒಳಿತು ಎಂದರು.
ದಾನಿಗಳಾದ ಉಮಾ, ಮನೋಜ್, ಆಲೈಕ್ಯ, ಆಕೃತಿ, ಉಪಾಧ್ಯಕ್ಷರಾದ ಈಶ್ವರಪ್ಪ, ಖಜಾಂಜಿ ರಮೇಶ್, ಕಾರ್ಯದರ್ಶಿ ದಾಸಪ್ಪ, ಸದಸ್ಯರಾದ ಚನ್ನಬಸವಯ್ಯ, ಶ್ರೀಕಂಠಮೂರ್ತಿ, ಮುಖ್ಯಶಿಕ್ಷಕ ಸನತ್‌ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



