
ತುಮಕೂರು: ಇತಿಹಾಸದ ಪುಟಗಳಲ್ಲಿ ಅಡಗಿ ಹೋಗಿದ್ದ ೧೪ನೇ ಶತಮಾನದ ಮಹತ್ವದ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನವೊಂದು ನಗರದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ. ಕೊಟ್ರೇಶ್ ಹಾಗೂ ಡಾ. ಸುಧಾ ಜೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನವನ್ನು ಗುರುತಿಸಿ ಸಂಶೋಧಿಸಿದೆ.
ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಮಂಗಲದ ಹೊಸ ಬಡಾವಣೆಗಳು ನಿರ್ಮಾ ಣವಾಗುತ್ತಿವೆ. ಇಲ್ಲಿನ ಖಾಸಗಿ ಶಾಲೆಯ ಕಾಂಪೌ0ಡ್ ಪಕ್ಕದಲ್ಲಿ ಪತ್ತೆಯಾಗಿರುವ ಈ ವೀರಗಲ್ಲು ಒಟ್ಟು ಏಳು ಸಾಲುಗಳ ಬರಹವನ್ನು ಹೊಂದಿದೆ. ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದು, ಅಂದರೆ ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಇಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ ‘ಸತ್ಯಮಂಗಲ’ ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ.
ಈ ವೀರಗಲ್ಲಿನ ಅತ್ಯಂತ ಆಕರ್ಷಕ ಅಂಶವೆ0ದರೆ ಅದರಲ್ಲಿ ಕೆತ್ತಲಾಗಿರುವ ಚಿತ್ರಣ. ೧೪ನೇ ಶತಮಾನದಲ್ಲಿ ಸಾಮಾನ್ಯ ಜನರು ಹೇಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ಇದು ಜಿವಂತ ಸಾಕ್ಷಿಯಂತಿದೆ. ಹೆಣ್ಣು ಮಕ್ಕಳು ಸಾಲಾಗಿ ತಲೆಯ ಮೇಲೆ ಕುಂಭಗಳನ್ನು ಹೊತ್ತುಕೊಂಡು ಸಂಭ್ರಮದಿ0ದ ಜಾತ್ರೆಗೆ ಹೊರಟಿರುವ ಸುಂದರ ದೃಶ್ಯವನ್ನು ಈ ಶಿಲೆಯಲ್ಲಿ ಕಡೆಯಲಾಗಿದೆ. ಶಾಸನದ ಕೊನೆಯ ಸಾಲುಗಳು ಯಾವುದೋ ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ ನೀಡುತ್ತವೆಯಾದರೂ, ಅದು ಯಾವ ದೇವರ ಜಾತ್ರೆ ಎಂಬುದು ಸ್ಪಷ್ಟವಾಗಿಲ್ಲ.
ಶಾಸನದಲ್ಲಿ ಆತ ‘ಕಾದಿ ಸತ್ತ’ ಎಂದು ಉಲ್ಲೇಖಿಸಲಾಗಿದ್ದು, ಆತ ಕೈಲಾಸವಾಸಿಯಾದ ಚಿತ್ರವನ್ನೂ ಇಲ್ಲಿ ಕೆತ್ತಲಾಗಿದೆ. ನಗರೀಕರಣದ ನಡುವೆ ಪತ್ತೆಯಾಗಿರುವ ಈ ಶಾಸನವು ತುಮಕೂರು ಭಾಗದ ಅಂದಿನ ಸಾಮಾಜಿಕ ಭದ್ರತೆ ಮತ್ತು ಧಾರ್ಮಿಕ ಆಚರಣೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ ಎಂದು ಪ್ರೊ.ಎಂ. ಕೊಟ್ರೇಶ್ ತಿಳಿಸಿದ್ದಾರೆ.





