ತುಮಕೂರು:

ಲಾಕ್‍ಡೌನ್‍ನಿಂದ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ನಗರದಲ್ಲಿ ಉಚಿತ ದಾಸೋಹ ನಡೆಸುತ್ತಿರುವ ಆರ್.ಆರ್.ಅಭಿಮಾನಿ ಬಳಗ ಹಾಗೂ ಯುವ ಕಾಂಗ್ರೆಸ್ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಸಿಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಮರಳೂರು ರಸ್ತೆಯ ಎಸ್‍ಎಸ್‍ಐಟಿ ಮುಂಭಾಗದಲ್ಲಿರುವ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಉಚಿತ ದಾಸೋಹ ಕಾರ್ಯವನ್ನು ಬುಧವಾರ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿ ಆಹಾರ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಆಹಾರ ತಯಾರಿಸುವವರಿಂದ ಹಿಡಿದು ಪ್ಯಾಕ್ ಮಾಡುವವರೆಗೂ ಸ್ವಚ್ಚತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡು ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಂಘಟಿತರಾಗಿ ಆಹಾರ ಸಿದ್ಧಪಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಲಾಕ್‍ಡೌನ್‍ನಿಂದ ನಗರದಲ್ಲಿ ಪೊಲೀಸರಿಗಷ್ಟೇ ಅಲ್ಲದೆ, ವೈದ್ಯಕೀಯ ಸಿಬ್ಬಂದಿ, ಹೋಂಗಾಡ್ರ್ಸ್ ಸಿಬ್ಬಂದಿ, ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ದಾಸೋಹ ಮಾಡುತ್ತಿದ್ದಾರೆ.
ಆರ್.ಆರ್. ಅಭಿಮಾನಿ ಬಳಗ ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕೆಲಸ ನಿರ್ವಹಿಸುತ್ತಿದ್ದು, ಇದೇ ರೀತಿ ಇನ್ನೂ ಉತ್ತಮ ಕಾರ್ಯ ಮಾಡಲಿ ಎಂದು ಆಶಿಸಿದರು.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಮಾತನಾಡಿ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ನಗರದಲ್ಲಿ ದಾಸೋಹ ಕಾರ್ಯ ನಡೆಸುತ್ತಿದ್ದು, ಇಂದಿಗೆ ಸುಮಾರು 1 ಲಕ್ಷ ಆಹಾರ ವಿತರಣೆ ಮಾಡಲಾಗಿದೆ. ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟವನ್ನು ನಗರದಲ್ಲಿ ವಿವಿಧೆಡೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿ ನಡೆಯುತ್ತಿರುವ ದಾಸೋಹ ಕಾರ್ಯಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಗಳು, ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮತ್ತು ಇತರೆ ಜನಪ್ರತಿನಿಧಿಗಳು ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಅವರೂ ಸಹ ಉತ್ತಮ ಗುಣಮಟ್ಟದಿಂದ ಕೂಡಿದ ಆಹಾರವನ್ನು ನಗರದ ಜನತೆಗೆ ನೀಡುತ್ತಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಲಾಕ್‍ಡೌನ್ ಮುಗಿಯುವವರೆಗೂ ದಾಸೋಹ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ನಾವು ಆಹಾರ ತಯಾರಿಸಿದ ನಂತರ ಆಹಾರದ ಗುಣಮಟ್ಟ ಪರೀಕ್ಷೆಯನ್ನು ಆಹಾರ ಇಲಾಖೆ ಅಧಿಕಾರಿಗಳು ಪರೀಕ್ಷಿಸಿದ ನಂತರವೇ ನಾವು ಆಹಾರ ವಿತರಣೆ ಮಾಡುತ್ತಿದ್ದೇವೆ. ನಗರದ ವಿವಿಧೆಡೆ ಕೆಲಸ ನಿರ್ವಹಿಸುತ್ತಿರುವ ಕೊರೋನ ವಾರಿಯರ್ಸ್‍ಗಳಿಗೆ ಆಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ರವೀಂದ್ರ, ಹೋಂಗಾಡ್ರ್ಸ್ ಕಮಾಂಡೆಂಟ್ ಆರ್.ಪಾತಣ್ಣ, ರಾಜೇಶ್ ದೊಡ್ಮನೆ, ದರ್ಶನ್, ಬಿ.ಜಿ.ವೆಂಕಟೇಗೌಡ, ಪುಟ್ಟಣ್ಣ, ರಮೇಶ್, ರಘು, ರಾಕೇಶ್ ಸೇರಿದಂತೆ ಮತ್ತಿತರರು ಇದ್ದರು.





