ಚಿಕ್ಕನಾಯಕನಹಳ್ಳಿ: ಒಂದೇ ದಿನ 17ಪ್ರಕರಣ ಧೃಡ, ಆತಂಕದಲ್ಲಿ ಜನತೆ!!

 ಚಿಕ್ಕನಾಯಕನಹಳ್ಳಿ:

      ಇದುವರೆಗೂ ತಾಲ್ಲೂಕಿನಾದ್ಯಂತ 12 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದು ಬುಧವಾರ ಒಂದೇ ದಿನದಲ್ಲಿ ಮತ್ತೆ 17 ಪ್ರಕರಣಗಳು ಧೃಡಪಟ್ಟಿದ್ದು ಒಟ್ಟಾರೆ ಕೊರೊನಾ ಸೋಂಕಿತರ ಪ್ರಮಾಣ 29 ಕ್ಕೇರಿದಂತಾಗಿದೆ.

      ಬುಧವಾರ ತಾಲ್ಲೂಕಿಗೆ ಮೊದಲ ಕರಾಳದಿನವೆನಿಸಿದ್ದು ಒಂದೇ ದಿನದಲ್ಲಿ 17 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಪಟ್ಟಣದ ಸಮೀಪದ ಕಾಡೇನಹಳ್ಳಿಯಲ್ಲಿ ಆರು ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು ಈ ಗ್ರಾಮದಲ್ಲಿ ಒಟ್ಟಾರೆ 9 ಮಂದಿಗೆ ಸೋಂಕು ತಗುಲಿದಂತಾಗಿದೆ. ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ 8 ಮಂದಿಗೆ ಸೋಂಕು ಧೃಡಪಟ್ಟಿದ್ದು ಇಲ್ಲಿ ಒಟ್ಟು ಸೋಂಕಿತರ ಪ್ರಮಾಣ 9ಕ್ಕೆರಿದೆ. ಸಮೀಪದ ಬುಳ್ಳೇನಹಳ್ಳಿಯಲ್ಲಿ ಒಂದು, ಆಶ್ರೀಹಾಲ್ ಗ್ರಾಮದಲ್ಲಿ ಒಬ್ಬರು ಹಾಗೂ ಪಟ್ಟಣದ ದೇವಾಂಗಬೀದಿಯ ಮಹಿಳೆಯೊಬ್ಬರಿಗೆ ಸೋಂಕು ಧೃಡಪಟ್ಟಿದೆ.

      ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಗಲಾಟೆ: ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಈ ಹಿಂದೆ ಯುವಕನೊಬ್ಬನಿಗೆ ಸೋಂಕು ಧೃಡಪಟ್ಟಿದ್ದು ಈತನ ಪ್ರಾಥಮಿಕ ಸಂಪಕದಲ್ಲಿದವರನ್ನು ಕ್ವಾರಂಟೈನ್ ಮಾಡಿ ಒಂದು ವಾರದಹಿಂದೆ ಇವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಇವರಲ್ಲಿ 8ಮಂದಿಗೆ ಕೊರೊನಾ ಧೃಡಪಟ್ಟಿದೆ ಎಂದು ತಹಸೀಲ್ದಾರ್ ಸಮ್ಮುಖದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವಾಹನಗಳ ಸಮೇತ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಸ್ಥಳೀಯರು ಪ್ರತಿರೋಧ ಒಡ್ಡಿದರು. ಕ್ವಾರಂಟೈನ್ ಮಾಡಿ ಸೋಂಕು ಇಲ್ಲವೆಂದು ಮನೆಗೆ ಕಳುಹಿಸಿ ಈಗ ಮತ್ತೆ ಸೋಂಕು ತಗುಲಿದೆ ಎಂದು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಇದರಿಂದ ಜನರಿಗೆ ಹೆಚ್ಚು ಆತಂಕವೆನಿಸಿದೆ ಸರ್ಕಾರಗಳ ಗೊಂದಲದ ನೀತಿಯಿಂದ ಸೋಂಕು ಸಮುದಾಯಕ್ಕೆ ಹಬ್ಬಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಗೆ ತೆರಳಲು ಪ್ರತಿರೋಧ ಒಡ್ಡಿದರು. ಇದಕ್ಕೆ ತಹಸೀಲ್ದಾರ್ ಬಿ. ತೇಜಸ್ವಿನಿ ಎಲ್ಲರನ್ನು ಮನವೊಲಿಸಿ ಮಾತನಾಡಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ, ಸೋಂಕಿತರಿಗೆ ಹಾಗೂ ಕ್ವಾರಂಟೈನ್‍ಲಿರುವವರಿಗೆ ಆರೋಗ್ಯದ ರಕ್ಷಣೆ, ಆಹಾರ ಎಲ್ಲವನ್ನೂ ನೀಡಿದ್ದೇವೆ, ಇಂತಹ ಸಮಯದಲ್ಲಿ ಗೊಂದಲಗಳಿಗೆ ಅವಕಾಶ ನೀಡಬೇಡಿ ಎಂದರು. ನಂತರ ಎಲ್ಲರನ್ನೂ ಪೊಲಿಸರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತು.

      ಅನಾಥೆ ಮಹಿಳೆಗೆ ಸೋಂಕು ಹೆಚ್ಚಿದ ಆತಂಕ: ಪಟ್ಟಣದ ದೇವಾಂಗ ಬೀದಿಯಲ್ಲಿ 25 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಈಕೆ ಹಾಗೂ ಈಕೆಯ ಗಂಡ ಮತ್ತು ಅತ್ತೆ ಮೂವರು ಬುದ್ದಿ ಮಾಂದ್ಯರಾಗಿದ್ದು ಇವರು ಅನಾಥರಂತೆ ಈ ಬೀದಿಯಲ್ಲಿ ವಾಸವಿದ್ದರು. ವಾಸಿಸಲೂ ಒಂದು ಮನೆಯೂ ಇರದ ಇವರು ತಾತ್ಕಾಲಿಕ ಟೆಂಟಿನಲ್ಲಿ ದಿನ ಕಳೆಯುತ್ತಿದ್ದರು. ಹಗಲು ಹೊತ್ತಿನಲ್ಲಿ ಪಟ್ಟಣದ ದೇವಾಂಗ ಬೀದಿಗಳ ಮನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಅವರು ನೀಡುವ ಆಹಾರ ಹಾಗೂ ಯಾರಾದರೂ ನೀಡಿದ ತಿಂಡಿಗಳನ್ನು ತಿನ್ನುತ್ತಾ ದಿನಕಳೆಯುತ್ತಿದ್ದರು. ಇವರು ಹೆಚ್ಚು ಜನರ ಸಂಪರ್ಕದಲ್ಲಿರುವುದು ಆತಂಕಕ್ಕೆ ಎಡೆ ಮಾಡಿದೆ. ಈಗ್ಗೆ ಕೆಲದಿನಗಳ ಹಿಂದೆ ಅತ್ತೆ ಹಾಗೂ ಸೊಸೆಗೆ ಜ್ವರಬಂದ ಕಾರಣ ಚಿಕಿತ್ಸೆ ನೀಡಿ ಗಂಟಲು ದ್ರವ ತೆಗೆದು ಕಳುಹಿಸಲಾಗಿತ್ತು.

      ಪಟ್ಟಣದಲ್ಲಿ ಎರಡು ಪ್ರದೇಶದಲ್ಲಿ ಸೀಲ್ಡೌನ್: ಕೊರೊನಾ ಪ್ರಕರಣದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಈ ಹಿಂದೆ ಮಣಿಧಿರಹಟ್ಟಿ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಬುಧವಾರ ಶ್ರೀಬನಶಂಕರಿ ದೇವಾಲಯದಲ್ಲಿರುವ ದೇವಾಂಗಬೀದಿಯನ್ನು ಸೀಲ್‍ಡೌನ್ ಮಾಡಲಾಯಿತು.

(Visited 51 times, 1 visits today)

Related posts

Leave a Comment