ಜಿಲ್ಲೆಯಲ್ಲಿ ರಸ್ತೆ ಸುರಕ್ಷಾ ನಿಯಮ ಉಲ್ಲಂಘನೆ 257 ಚಾಲನ ಹಾಗೂ 45 ವಾಹನ ಪರವಾನಗಿ ಅಮಾನತ್ತು!

ತುಮಕೂರು:

       ಜಿಲ್ಲೆಯಲ್ಲಿ ರಸ್ತೆ ಸುರಕ್ಷಾತಾ ನಿಯಮಗಳನ್ನ ಉಲ್ಲಂಘಿಸಿರುವ 257 ವಾಹನ ಸವಾರರ ಚಾಲನಾ ಪರವಾನಗಿ(ಡಿ.ಎಲ್) ಹಾಗೂ 45 ವಾಹನ ಪರವಾನಗಿಯನ್ನು ಅಮಾನತ್ತು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ರಸ್ತೆ ಸುರಕ್ಷಾತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಅಪಘಾತಗಳು ಹಾಗೂ ಮರಣಗಳು ಸಂಭವಿಸುತ್ತಿವೆ. ಅಪಘಾತಗಳನ್ನು ತಡೆಗಟಲು ಆರ್.ಟಿ.ಒ ಹಾಗೂ ಹೆದ್ದಾರಿ ಪ್ರಾಧಿಕಾರ, ಪೊಲೀಸ್, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

      ಅಪಘಾತ ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ಕಿರು ಚಿತ್ರವನ್ನು ಎಲ್ಲಾ ಶಾಲಾ-ಕಾಲೇಜು, ಸಂಸ್ಥೆಗಳಲ್ಲಿ ಅರಿವು ಮೂಡಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ, ಇಲಾಖೆಗಳ ವೆಬ್‍ಪೇಜ್‍ಗಳಲ್ಲಿ ಪ್ರಚಾರ ಪಡಿಸಿ ಎಲ್ಲರಿಗೂ ಶೇರ್ ಮಾಡಬೇಕು ಎಂದು ಆರ್.ಟಿ.ಒ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ ಇದಕ್ಕೆ ಏನು ಕ್ರಮ ಕೈ ಗೊಂಡಿದ್ದಿರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಬೇರೆ ವಿಭಾಗದಿಂದ ಬರುವ ಬಸ್‍ಗಳಿಂದ ಜಿಲ್ಲೆಯಲ್ಲಿ ಹೆಚ್ಚು ಅಪಘಾತವಾಗುತ್ತಿವೆ. ಕಳೆದ 2-3 ತಿಂಗಳಿಂದ ತುಮಕೂರು ವಿಭಾಗದ ಯಾವುದೇ ಬಸ್‍ಗಳು ಅಪಘಾತಕ್ಕೆ ಸಂಭವಿಸಿಲ್ಲ. ಜಿಲ್ಲೆಯ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಿಗೆ ಆರೋಗ್ಯ ಹಾಗೂ ಕಣ್ಣು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.

      ಜಿಲ್ಲೆಯಲ್ಲಿ 364 ಮದ್ಯ ಪರವಾನಿಗೆ ಇರುವ ಮದ್ಯದಂಗಡಿಗಳಿವೆ. ಅಂಗಡಿಗಳ ಮುಂದೆ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬೇಡಿ ಅರಿವಿನ ಫಲಕ ಹಾಕಲಾಗಿದೆ ಹಾಗೂ ಸ್ಥಳದಲ್ಲಿಯೇ ವಾಹನಗಳಲ್ಲಿ ಕುಳಿತು ಮದ್ಯ ಸೇವನೆ ಮಾಡುವುವರ ಬಗ್ಗೆ ಮದ್ಯದಂಗಡಿ ಮಾಲೀಕರು ಪೊಲೀಸರಿಗೆ ತಿಳಿಸುವಂತೆ ಸೂಚಿಸಿ ಎಂದು ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

     ಶಿಕ್ಷಣ ಇಲಾಖೆ ವತಿಯಿಂದ ಎಲ್ಲಾ ಶಿಕ್ಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿ ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಸಹಕಾರದಿಂದ ಹೆಚ್ಚಿನ ರೀತಿಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ವಾಹನ ಚಾಲಕರಿಗೆ ಅಪಘಾತ ಸಂದರ್ಭದಲ್ಲಿ ನೀಡುವ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

      ಕೇಂದ್ರ ಸರ್ಕಾರದ ನೂತನ ಮೋಟರ್ ವಾಹನ ಕಾಯ್ದೆ ಜಾರಿಯಾಗಿದ್ದು, ಎಲ್ಲಾ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಎಲ್ಲಾ ಇಲಾಖೆಗಳ ಸಿಬ್ಬಂದಿಗಳಿಗೆ ಕಚೇರಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ಹೇಳಿದರು.

       ನಗರದಲ್ಲಿ 50 ನಗರ ಸಂಚಾರಿ ಬಸ್‍ಗಳು ಸಂಚರಿಸುತ್ತಿದ್ದು, ನಗರ ಸಾರಿಗೆ ಬಸ್‍ಗಳಿಗೆ ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಜಿಪಿಎಸ್ ಅಳವಡಿಸಬೇಕು. ನಿಗದಿತ ಸಮಯಕ್ಕೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬಸ್‍ಗಳು ಬಸ್ ನಿಲ್ದಾಣಗಳಲ್ಲಿ ನಿಲ್ಲಸಿ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಅವಶ್ಯಕತೆ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಸ್ಕ್ವಾಡ್‍ಗಳನ್ನು ರಚಿಸಿ ಈ ಬಗ್ಗೆ ನಿಗಾ ವಹಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

      ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರನ್ನು ಸರಕು ಸಾಗಾಣೆ ವಾಹನಗಳಲ್ಲಿ ಕೊಂಡೊಯ್ಯುವಂತಿಲ್ಲ. ಇದು ಕಂಡು ಬಂದರೆ ವಾಹನ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆ.ಎಸ್.ಆರ್.ಟಿ.ಸಿ ವತಿಯಿಂದ ಕಾರ್ಮಿಕರು ಪ್ರಯಾಣಿಸಲು ಕಾರ್ಖಾನೆ ಮಾಲೀಕರ ಹತ್ತಿರ ಮಾತನಾಡಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

      ಅವಶ್ಯಕತೆ ಇರುವ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿನವರು ರಸ್ತೆಗಳಲ್ಲಿ ಜಿರ್ಬಾ ಕ್ರಾಸಿಂಗ್, ಮಾರ್ಕಿಂಗ್, ಹಮ್ಸ್, ಅಪಘಾತ ಸ್ಥಳಗಳಲ್ಲಿ, ತಿರುವುಗಳಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಮಿಳುನಾಡಿನ ಕೃಷ್ಣಗಿರಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಹಂತದ ಬ್ಲೀಂಕರ್‍ಗಳನ್ನು (ಸ್ಪೀಡ್ ಬ್ರೇಕರ್) ಅಳವಡಿಸಳಾಗಿದೆ. ಇವು ಅತೀ ವೇಗವನ್ನು ಕಡಿಮೆಗೊಳಿಸುತ್ತವೆ. ಇಂತಹ ಸೋಲಾರ್ ಬ್ಲೀಂಕರ್‍ಗಳನ್ನು ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‍ಗಳಲ್ಲಿ ಅಳವಡಿಸಬೇಕು. ಇದರಿಂದ ರಸ್ತೆ ಅಪಘಾತಗಳು ಕಡಿಮೆಗೊಳ್ಳುತ್ತವೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

      ತುಮಕೂರು ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಸಂಚಾರಿ ಪೊಲೀಸರಿಗೂ ಬಾಡಿ ಕ್ಯಾಮೆರಾಗಳನ್ನು ನೀಡಲಾಗಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತದೆ. ಜಿಲ್ಲೆಯಲ್ಲಿರುವ ಪ್ರತಿ ವಾಹನಕ್ಕೂ ಎಮಿಷನ್ ತಪಾಸಣೆಯನ್ನು ಕಡ್ಡಾಯವಾಗಿ ವಾಹನ ಮಾಲಿಕರು ಮಾಡಿಸಬೇಕಿದೆ. ಇಲ್ಲದಿದ್ದರೆ ವಾಹನ ತಪಾಸಣೆ ಮಾಡಿ ದಂಡ ವಿಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್, ಆರ್.ಟಿ.ಒ, ಎಇಇ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 17 times, 1 visits today)

Related posts

Leave a Comment