ಆನ್‍ಲೈನ್ ಬೆಟ್ಟಿಂಗ್ : 6 ಜನರ ಬಂಧನ, 7.15 ಲಕ್ಷ ವಶ!

ತುಮಕೂರು :   

      ಆನ್ ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 6 ಜನರ ತಂಡವನ್ನು ಬಂಧಿಸಿರುವ  ಪೊಲೀಸರು, ಬಂಧಿತರಿಂದ ಒಟ್ಟು 7.15 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

      ಮೊಬೈಲ್ ಮೂಲಕ ಲೋಟಸ್ ಮತ್ತು ಸ್ಪೆಕ್ಟ್ಟಿಕ್ಯುಲರ್ ಎಂಬ ಆಪ್ ಮೂಲಕ ಕುದುರೆ ರೇಸ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ಮಾಡಿ ತುಮಕೂರು ನಗರದ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುವ ಮೂಲಕ ಅನಧಿಕೃತ ಜೂಜಾಟ ನಡೆಯುತ್ತಿದೆಯೆಂಬ ಮಾಹಿತಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಅವರಿಗೆ ಲಭಿಸಿತು. ಈ ಹಿನ್ನೆಲೆಯಲ್ಲಿ ಪ್ರಕರಣ ಭೇದಿಸಲು ಅವರು ಸಿ.ಇ.ಎನ್. ಠಾಣೆಯ ಪೊಲೀಸರ ತಂಡವೊಂದನ್ನು ರಚಿಸಿದ್ದರು.

      ಈ ತಂಡವು ತನಿಖೆ ಆರಂಭಿಸಿತು. ಫೆ.9 ರಂದು ಮಧ್ಯಾಹ್ನ 1-30 ರಲ್ಲಿ ಈ ತಂಡವು ನಗರದ ಐಶ್ವರ್ಯ ಲಾಡ್ಜ್‍ನ ಕೊಠಡಿ ಸಂಖ್ಯೆ 7 ರಮೇಲೆ ದಾಳಿ ನಡೆಸಿದಾಗ ಆರೋಪಿಗಳಾದ 1)ರಾಜೇಶ್ (27 ವರ್ಷ, ಖಾಸಗಿ ಕಂಪನಿಯಲ್ಲಿ ಉದ್ಯೋಗ, ಎಸ್.ಐ.ಟಿ. ಬಡಾವಣೆ, ತುಮಕೂರು), 2)ದಿಲೀಪ್ ಕುಮಾರ್ (23 ವರ್ಷ, ಖಾಸಗಿ ಕಂಪನಿಯಲ್ಲಿ ಉದ್ಯೋಗ, ಉಪ್ಪಾರಹಳ್ಳಿ, ತುಮಕೂರು), 3)ಮಹಂತೇಶ್ (34 ವರ್ಷ, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ, ತುಮಕೂರು), 4)ಅರ್ಜುನ್ (23 ವರ್ಷ, ವಿದ್ಯಾರ್ಥಿ, ಎಸ್.ಎಸ್. ಪುರಂ, ತುಮಕೂರು), 5)ಅಶ್ವಿನ್ (22 ವರ್ಷ, ಹಿಂದುಜಾ ಫೈನಾನ್ಸ್ ಉದ್ಯೋಗಿ, ಕೆ.ಆರ್.ಬಡಾವಣೆ, ತುಮಕೂರು), 6)ಧನುಷ್ (21 ವರ್ಷ, ಚಾಲಕ ವೃತ್ತಿ, ಶ್ರೀನಗರ, ಬೆಂಗಳೂರು) ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಡೀ ಹಗರಣ ಬೆಳಕಿಗೆ ಬಂದಿದೆ.

      ಬಂಧಿತರಿಂದ 4 ಎ.ಟಿ.ಎಂ. ಕಾರ್ಡ್‍ಗಳು, 6 ಮೊಬೈಲ್ ಫೋನ್‍ಗಳು, 68,730 ರೂ. ನಗದು, ವಹಿವಾಟಿನ ವಿವರ ಬರೆದುಕೊಳ್ಳುತ್ತಿದ್ದ ಪುಸ್ತಕಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

      ಇದಲ್ಲದೆ ಈ ಆರೋಪಿಗಳು ನಗರದ ಶಿರಾಗೇಟ್‍ನ ಅಕ್ಸಿಸ್ ಬ್ಯಾಂಕ್‍ನಲ್ಲಿ ಬಸವರಾಜು, ರಂಜಿತ್, ನಿತಿನ್ ಎಂಬುವವರ ಹೆಸರಿನಲ್ಲಿ 3 ಖಾತೆಗಳನ್ನು ತೆರೆದು ಬೆಟ್ಟಿಂಗ್ ಹಣವನ್ನು ಆ ಖಾತೆಗಳಿಗೆ ಜಮಾ ಮಾಡುತ್ತಿದ್ದರೆಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸದರಿ ಖಾತೆಗಳಲ್ಲಿ ಜೂಜಾಟಕ್ಕೆ ಬಳಸಿದ್ದ ಒಟ್ಟು 6,47,132 ರೂ.ಗಳನ್ನು ಬ್ಯಾಂಕ್‍ಗೆ ಪತ್ರ ಬರೆದು, ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

      ಈ ಪ್ರಕರಣದಲ್ಲಿ ಬಂಧಿತ ರಾಜೇಶ್ ತಂಡದ ಪ್ರಮುಖನಾಗಿದ್ದು, ಬಂದ ಹಣದಲ್ಲಿ ಶೇ.40 ರಷ್ಟು ಭಾಗವನ್ನು ಆಪ್‍ಗಳನ್ನು ಸರಬರಾಜು ಮಾಡುತ್ತಿದ್ದ ಗಿರಿ ಅಲಿಯಾಸ್ ಯಲ್ಲಾಪುರ ಗಿರಿ, ದಯಾನಂದ, ಹುಲಿಯೂರು ದುರ್ಗ ಮತ್ತು ಶಿರಾದ ಹರಿ ಎಂಬುವವರಿಗೆ ಸಂದಾಯ ಮಾಡಿತ್ತಿದ್ದನೆಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಜನರನ್ನು ಮತ್ತು ರಾಕಿ ಅಲಿಯಾಸ್ ರಾಕೇಶ್ ಎಂಬಾತನ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

      ಎಸ್ಪಿ ಡಾ.ಕೆ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ, ತಿಲಕ್ ಪಾರ್ಕ್ ಸರ್ಕಲ್ ಇನ್ಸ್‍ಪೆಕ್ಟರ್ ಪಾರ್ವತಮ್ಮ, ಎನ್.ಇ.ಪಿ.ಎಸ್. ಸಬ್‍ಇನ್ಸ್‍ಪೆಕ್ಟರ್ ಮಂಜುಳ ಹಾಗೂ ಸಿಬ್ಬಂದಿಗಳಾದ ಅಯೂಬ್ ಖಾನ್. ರಮೇಶ್, ಶಿವಶಂಕರ್, ಪರಮೇಶ್, ಹರೀಶ್, ರಂಗನಾಥ್ ಅವರು ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಈ ಪ್ರಯತ್ನವನ್ನು ಎಸ್ಪಿ ಪ್ರಶಂಸಿಸಿದ್ದಾರೆ.

(Visited 9 times, 1 visits today)

Related posts