ವೈದ್ಯರ ಚೀಟಿಯಿಲ್ಲದೆ ಔಷಧಿ ಮಾರಾಟಬೇಡ – ಸಚಿವ

ತುಮಕೂರು :

      ವೈದ್ಯರ ಚೀಟಿಯಿಲ್ಲದೆ ಔಷಧಿ ವ್ಯಾಪಾರಿ(ಮೆಡಿಕಲ್ ಸ್ಟೋರ್ಸ್)ಗಳು ಔಷಧಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಇಂದಿಲ್ಲಿ ತಿಳಿಸಿದರು.

       ಕೋವಿಡ್-19ರ ನಿಯಂತ್ರಣದ ಹಿನ್ನೆಲೆಯಲ್ಲಿ ಕುಣಿಗಲ್ ತಾಲ್ಲೂಕ್ ಪಂಚಾಯತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಪಾರಾಸೀಟ್‍ಮೋಲ್, ಹೈಡ್ರಾಕ್ಸಿಕ್ಲೊರೊಕ್ವಿನ್, ಜ್ವರಕ್ಕಾಗಿ ವೈದ್ಯರ ಚೀಟಿಯಿಲ್ಲದೆ ಔಷಧಿಗಳನ್ನು ಖರೀದಿಸಲು ಬರುವವರಿಗೆ ಔಷಧಿ ವ್ಯಾಪಾರಿಗಳು ಔಷಧಿಗಳನ್ನು ಮಾರಾಟ ಮಾಡಬಾರದು. ಈ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ ಔಷಧಿ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

        ಕೋವಿಡ್-19 ಸೋಂಕು ಹರಡದಂತೆ ನಿಯಂತ್ರಿಸಲು ಲಾಕ್‍ಡೌನ್ ಘೋಷಿಸಲಾಗಿದೆ. ಜನರು ವಿನಾಕಾರಣ ಓಡಾಡಬಾರದು. ಈಗಾಗಲೇ ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದ್ದು, ಜ್ವರದಿಂದ ಬಳಲುತ್ತಿರುವವರನ್ನು ಈ ಕ್ಲಿನಿಕ್‍ಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದವರು/ಸಂಶಯಾತ್ಮಕ ಪ್ರಕರಣಗಳನ್ನು ತಾಲ್ಲೂಕು ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡದೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದು ಅವರು ತಿಳಿಸಿದರು.

       ತುಮಕೂರು ಜಿಲ್ಲೆಯಲ್ಲಿರುವ ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ವೈದ್ಯರು, ನರ್ಸ್‍ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೆ ಕೋವಿಡ್ ನಿಯಂತ್ರಣದ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಡಿಹೆಚ್‍ಓ ಡಾ: ಚಂದ್ರಿಕಾ ಅವರಿಗೆ ಸೂಚನೆ ನೀಡಿದ ಸಚಿವರು, ತಾಲ್ಲೂಕಿನಲ್ಲಿ ಎಲ್ಲಾ ಖಾಸಗಿ ಕ್ಲಿನಿಕ್‍ಗಳು ತೆರೆದು ಕಾರ್ಯನಿರ್ವಹಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

       ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಬೇಕು. ಕೃಷಿ ಪಂಪ್‍ಸೆಟ್‍ಗಳ ರಿಪೇರಿ ಹಾಗೂ ಅದಕ್ಕೆ ಸಂಬಂಧಿಸಿದ ಪರಿಕರ ಖರೀದಿಗೆ ಅಂಗಡಿಗಳಲ್ಲಿ ಅವಕಾಶ ಮಾಡಿಕೊಡಿ ಎಂದು ಅವರು ಹೇಳಿದರು.   

        ಕೋವಿಡ್ ಹರಡುವಿಕೆ ಆತಂಕವಿರುವುದರಿಂದ ಹಲಸು, ಬಾಳೆಕಾಯಿ, ಕೊಬ್ಬರಿ ಸೇರಿದಂತೆ ಮತ್ತಿತರ ಕೃಷಿ ಉತ್ಪನ್ನಗಳಿಗೆ ರಾಜ್ಯದೊಳಗೆ ವ್ಯಾಪಾರ ಮಾಡಲು ಅವಕಾಶವಿದೆ. ಆದರೆ ಮಹಾರಾಷ್ಟ್ರ, ಕೇರಳ ಮತ್ತಿತರ ಹೊರರಾಜ್ಯಗಳೊಂದಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ:-

      ತಾಲ್ಲೂಕಿನಲ್ಲಿ 48 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, 36 ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯತಿ ಇಓ ಸಭೆಗೆ ಮಾಹಿತಿ ನೀಡಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಓವರ್‍ಹೆಡ್ ಟ್ಯಾಂಕ್‍ಗಳು ಇದ್ದರೆ ಸಂಪುಗಳನ್ನು ನಿರ್ಮಾಣ ಮಾಡಿ ಆ ಮೂಲಕ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಿ. ನೀರು ಸಿಗುವ ಕಡೆ ಕೊಳವೆ ಬಾವಿಗಳನ್ನು ಕೊರೆಯಿಸಿ, ಅಲ್ಲದೆ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ತೆರಳಿ ಪರಿಹಾರದೊಂದಿಗೆ ವರದಿಯನ್ನು ನೀಡಿ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಇಂಜಿನಿಯರ್‍ಗೆ ಸೂಚನೆ ನೀಡಿದರು.

      ಸಭೆಯಲ್ಲಿ ಶಾಸಕರಾದ ಡಾ: ರಂಗನಾಥ್, ಜಯರಾಂ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್‍ಕುಮಾರ್, ಜಿ.ಪಂ. ಸಿಇಓ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ.ವಂಶಿಕೃಷ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೀಶ್‍ನಾಯ್ಕ, ತಹಶೀಲ್ದಾರ್ ವಿಶ್ವನಾಥ್, ಮತ್ತಿತರರು ಹಾಜರಿದ್ದರು.

      ಕುಣಿಲ್ ತಾಲ್ಲೂಕಿನಲ್ಲಿ ಸಭೆ ನಡೆಸುವುದಕ್ಕೂ ಮುನ್ನ ತುರುವೇಕೆರೆ ತಾಲ್ಲೂಕಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.

(Visited 4 times, 1 visits today)

Related posts