ಪಿಯು ಮೌಲ್ಯಮಾಪನಕ್ಕೆ ಹಿಂದೇಟು ಹಾಕುತ್ತಿರುವ ಜಿಲ್ಲೆಯ 1500 ಉಪನ್ಯಾಸಕರು

ಮಧುಗಿರಿ :

     ಕರೋನಾ ಸೋಂಕು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯ ಸುಮಾರು 1500 ಕ್ಕೂ ಹೆಚ್ಚು ಉಪನ್ಯಾಸಕರು ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

     ದ್ವಿತೀಯ ಪಿಯು ಮೌಲ್ಯ ಮಾಪನಕ್ಕೆ ಒಟ್ಟು 4 ಕೇಂದ್ರಗಳಾಗಿ ವಿಭಾಗಿಸಲಾಗಿದ್ದು, ಬೆಂಗಳೂರಿನ ವಿಭಾಗಕ್ಕೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ ವಿಭಾಗದ ಉಪನ್ಯಾಸಕರು ಒಳಗೊಂಡಿದ್ದು, ಇವರೆಲ್ಲರೂ ಬೆಂಗಳೂರಿನ ವಿವಿಧ ಕೇಂದ್ರಗಳಿಗೆ ತೆರಳಿ ಮೌಲ್ಯಮಾಪನ ನಡೆಸಬೇಕಿದೆ. ಈ ಮೌಲ್ಯ ಮಾಪನವು ಸುಮಾರು 15 ದಿನಗಳವರೆಗೂ ನಡೆಯಲಿದೆ.

   ಆತಂಕ ಏಕೆ :

     ಲಾಕ್‍ಡೌನ್ ತೆರವಾದ ದಿನದಿಂದಲೂ ರಾಜ್ಯದಲ್ಲಿ ಸೊಂಕಿತರ ಪ್ರಕರಣಗಳು ಹೆಚ್ಚಾಗಿ ವರದಿ ಯಾಗುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದುಕೊಂಡಿದ್ದ ಗ್ರೀನ್ ಜೋನ್ ಕೇಂದ್ರಗಳು ಈಗ ರೆಡ್ ಜೋನ್‍ಗಳಾಗಿ ಮಾರ್ಪಡುತ್ತಿದ್ದು, ಈಗ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳಿದಾಗ ವಿವಿಧ ಜಿಲ್ಲೆಗಳಿಂದ ಉಪನ್ಯಾಸಕರು ಹಾಜರಾಗಲಿದ್ದು, ಒಂದೊಂದು ವಿಷಯಕ್ಕೆ 150 ಕ್ಕೂ ಹೆಚ್ಚು ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗವಹಿಸಬೇಕಿದೆ. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಸೊಂಕು ಹರಡುವುದಿಲ್ಲ ಎಂಬುದಕ್ಕೆ ಸರ್ಕಾರ ಗ್ಯಾರಂಟಿ ನೀಡುತ್ತದೆಯೇ. ನಮಗೂ ಕುಟುಂಬಗಳಿದ್ದು, ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಸೊಂಕು ಹರಡಿ ನಮ್ಮ ಕುಟುಂಬದವರಿಗೂ ವ್ಯಾಪಿಸುತ್ತದೆ ಎಂಬ ಭಯದಲ್ಲಿ ಉಪನ್ಯಾಸಕರ ಕುಟುಂಬಗಳಿದ್ದು, ನಮ್ಮ ರಕ್ಷಣೆಗೆ ಯಾರು ಹೊಣೆ ಎಂದು ಉಪನ್ಯಾಸಕರ ಪರವಾಗಿ ಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲು ಇಚ್ಚಿಸದ ಮಧುಗಿರಿಯ ಹಿರಿಯ ಉಪನ್ಯಾಸಕರೊಬ್ಬರು.

      ಅಲ್ಲದೇ ಮೌಲ್ಯ ಮಾಪನ ಕೇಂದ್ರಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬಹಳಷ್ಟು ದೂರದಲ್ಲಿರುವುದು ಸಮಸ್ಯೆಗೆ ಕಾರಣವಾಗಿದೆ.
ತುಟಿ ಬಿಚ್ಚುತ್ತಿಲ್ಲ ಎಂ.ಎಲ್.ಸಿಗಳು : ವಿಪರ್ಯಾಸವೆಂದರೆ ನಮ್ಮ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ನಮಗೆ ರಕ್ಷಣೆ ನೀಡುವ ಜವಾಬ್ದಾರಿ ನಿರ್ವಹಿಸಬೇಕಾದ 14 ಜನ ಎಂ.ಎಲ್.ಸಿಗಳು ಈ ಸಂದರ್ಭದಲ್ಲಿ ತುಟಿ ಬಿಚ್ಚದೇ ಜಾಣ ಮೌನ ವಹಿಸಿರುವುದು ಉಪನ್ಯಾಸಕರನ್ನು ಕೆರಳಿಸಿದ್ದು, ಈಗಲಾದರೂ ನಮ್ಮ ಪರ ವಕಾಲತ್ತು ವಹಿಸಿ ನಮಗೆ ರಕ್ಷಣೆ ನೀಡಬೇಕೆನ್ನುತ್ತಾರೆ.

      ಜವಾಬ್ದಾರಿ ಮರೆತ ಇಲಾಖೆಯ ಅಧಿಕಾರಿಗಳು: ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕಾದ ಇಲಾಖೆಯ ಹಿರಿಯ ಅಧಿಕಾರಿಗಳೂ ಸಹ ಜವಾಬ್ದಾರಿ ಮರೆತು ಮೌನಕ್ಕೆ ಜಾರಿದ್ದು, ಶಿಕ್ಷಣ ಸಚಿವ ಸುರೇಶ್‍ಕುಮಾರ್‍ರವರು ನಮ್ಮ ಸಮಸ್ಯೆಯ ಬಗ್ಗೆ ಗಮನಹರಿಸಿ ಸರ್ಕಾರದ ಗಮನಕ್ಕೆ ತಂದು ಪಿಯು ಮೌಲ್ಯ ಮಾಪನವನ್ನು ಆಯಾ ಜಿಲ್ಲೆಗಳಲ್ಲೇ ನಡೆಸುವಂತೆ ಅದೇಶ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.

  ಜಿಲ್ಲೆಗಳಲ್ಲೇ ಮೌಲ್ಯಮಾಪನ ನಡೆಸಿ :

      ನಮಗೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿಯಿದ್ದು, ನಾವು ಮೌಲ್ಯಮಾಪನ ನಡೆಸುವುದಿಲ್ಲ ಎಂದು ಹೇಳುತ್ತಿಲ್ಲ. ಈಗಾಗಲೇ ಮೇ. 25 ರಿಂದ ಅರ್ಥಶಾಸ್ತ್ರದ ವಿಷಯದ ಮೌಲ್ಯಮಾಪನವು ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆಯುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಪ್ರತಿಷ್ಠಿತವಾದ ಪಿಯು ಕಾಲೇಜುಗಳು, ವಿಶ್ವವಿದ್ಯಾನಿಲಯ ಕೇಂದ್ರಗಳಿದ್ದು, ಸರ್ಕಾರ ಇವುಗಳನ್ನು ಬಳಸಿಕೊಂಡು ಜಿಲ್ಲಾ ವ್ಯಾಪ್ತಿಯಲ್ಲಿ ಮೌಲ್ಯಮಾಪನಕ್ಕೆ ಅನುಕೂಲ ಮಾಡಿಕೊಟ್ಟಲ್ಲಿ ನಿರ್ಬೀತಿ ಮತ್ತು ನೆಮ್ಮದಿಯಿಂದ ಮೌಲ್ಯಮಾಪನ ನಡೆಸುತ್ತೇವೆ ಎನ್ನುತ್ತಾರೆ ಜಿಲ್ಲೆಯ ಉಪನ್ಯಾಸಕರು.

(Visited 14 times, 1 visits today)

Related posts

Leave a Comment