ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿರೋಧಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ!

ತುಮಕೂರು:

      ಬೆಳಗಾವಿ ನಗರದ ಪೀರನವಾಡಿ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನು ತೆರವುಗೊಳಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಹಾಗೂ ಸದರಿ ಸ್ಥಳದಲ್ಲಿಯೇ ಪ್ರತಿಮೆ ಮರುಸ್ಥಾಪನೆಗೆ ಒತ್ತಾಯಿಸಿ ಇಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಲವಾರು ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಎಸ್.ಶಂಕರ್,ದೇಶದ ಅದರಲ್ಲಿಯೂ ಕನ್ನಡನಾಡಿನ ಕಿತ್ತೂರನ್ನು ಬ್ರಿಟಿಷ್‍ರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಬೇಕು ಎಂಬ ಮಹದಾಸೆಯಿಂದ ತನ್ನ ಜೀವದ ಕೊನೆಯ ಉಸಿರು ಇರುವವರೆಗೂ ಹೋರಾಡಿದ ಸಂಗೋಳ್ಳಿ ರಾಯಣ್ಣನ ಪ್ರತಿಮೆಯನ್ನು ಪೊಲೀಸರು ದುರುದ್ದೇಶದಿಂದ ತೆರವುಗೊಳಿಸಿರುವುದು ಖಂಡನೀಯ.

      ಸಂಗೋಳ್ಳಿ ರಾಯಣ್ಣ ಅವರ ಪ್ರತಿಮೆ ಸ್ಥಾಪನೆಯಿಂದ ಇದುವರೆಗೂ ಯಾರಿಗೂ ಯಾವ ರೀತಿಯ ತೊಂದರೆಯೂ ಆಗಿರಲಿಲ್ಲ.ಶಾಂತಿ, ಸೌಹಾರ್ಧತೆಗೆ ಧಕ್ಕೆಯಾಗಿರಲಿಲ್ಲ.ಆದರೆ ಏಕಾಎಕಿ ಪ್ರತಿಮೆ ತೆರವುಗೊಳಿಸಿರುವುದು ಇಡೀ ಕನ್ನಡನಾಡಿನ ಸ್ವಾತಂತ್ರ ಹೋರಾಟಗಾರರಿಗೆ ಮಾಡಿದ ಅವಮಾನ. ಈ ನಿಟ್ಟಿನಲ್ಲಿ ಹಲವು ಮನವಿ,ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ, ರಾಜ್ಯ ಸರಕಾರ ಪ್ರತಿಮೆ ಸ್ಥಾಪನೆಗೆ ಮುಂದಾಗದಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಪ್ರತಿಮೆ ಮರುಸ್ಥಾಪನೆ ಮಾಡಬೇಕು.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಸ್.ಶಂಕರ್ ತಿಳಿಸಿದರು.

      ರಾಜ್ಯ ಕುರುಬರ ಸಂಘದ ನಿರ್ದೇಶಕ ಟಿ.ಇ.ರಘುರಾಮ್ ಮಾತನಾಡಿ,ಸಂಗೋಳ್ಳಿ ರಾಯಣ್ಣ, ಯುವಕರ ಶೌರ್ಯದ ಪ್ರತೀಕ.ತನ್ನ ಜೀವಿತದ ಕೊನೆಯ ಕ್ಷಣದವರೆಗೆ ದೇಶವನ್ನು ಬ್ರಿಟಿಷರಿಂದ ಬಿಡುಗಡೆಗೊಳಿಸಲು ಹೋರಾಡಿ,ಬ್ರಿಟಿಷರು ನೀಡಿದ ನೇಣಿಗೆ ನಗುನಗುತ್ತಲೇ ಕೊರಳೊಡ್ಡಿದವರು.ಇವರ ಪ್ರತಿಮೆ ತೆರವಿನ ಮೂಲಕ ಬೆಳಗಾವಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಮತ್ತು ಪೊಲೀಸರು ಅಕ್ಷಮ್ಯ ಅಪರಾದ ವೆಸಗಿದ್ದಾರೆ.ತ್ಯಾಗ, ಶೌರ್ಯದಪ್ರತೀಕವಾಗಿರುವ ರಾಯಣ್ಣನ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾಧ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದರು.

      ಪ್ರತಿಭಟನೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡರಾದ ಸೋಮಶೇಖರ್,ಅರುಣ್‍ಕುಮಾರ್,ಚೇತನ್,ಯಲ್ಲೇಶಗೌಡ, ಚಂದನ್, ಉದಯ, ಪ್ರವೀಣ್, ಯತೀಶ್, ನೇತಾಜೀ ಶ್ರೀಧರ್,ಪ್ರಸನ್ನ(ಪಚ್ಚಿ) ಸೇರಿದಂತೆ ಹಲವರು ಭಾಗವಹಿಸಿದ್ದರು.ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

(Visited 5 times, 1 visits today)

Related posts

Leave a Comment