ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಕರವೇ ಪ್ರತಿಭಟನೆ

ತುಮಕೂರು : 

    ಜಿಲ್ಲೆಯ ಅಂಗಡಿ ಮುಂಗಟ್ಟು ಗಳಿಗೆ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥಗೌಡ ಅವರ ನೇತೃತ್ವದಲ್ಲಿ ನೂರಾರು ಕರವೇ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕನ್ನಡ ನಾಮಪತ್ರಗಳನ್ನು ಅಳವಡಿಸುವಂತೆ ಆಗ್ರಹಿಸಿದರು.

      ಭಾರತ ಬಹುಭಾಷೆಗಳ ನಾಡು, ಭಾಷಾ ವಾರು ಪ್ರಾಂತ್ಯಗಳ ವಿಂಗಡನೆಯ ನಂತರ ಕರ್ನಾಟಕ ಆಸ್ಥಿತ್ವಕ್ಕೆ ಬಂದಿದ್ದು, ಇದಕ್ಕಾಗಿ ಗೋಕಾಕ್ ಚಳುವಳಿಯಂತಹ ಹಲವಾರು ಹೋರಾಟಗಳೇ ನಡೆದಿವೆ. ಆದರೂ ಸಹ ಇಂದಿಗೂ ಕರ್ನಾಟಕದ ರಾಜ್ಯಧಾನಿ ಸೇರಿದಂತೆ, ಜಿಲ್ಲಾ ಕೇಂದ್ರಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ಹಾಕುವುದರಲ್ಲಿ ಹಿಂದೆಟು ಹಾಕಲಾಗುತ್ತಿದೆ. ನಾಡಿನ ಇತರ ಭಾಷೆಗಳಿಗಿಂತ ಕನ್ನಡ ಭಾಷೆಯ ನಾಮಫಲಕ ದೊಡ್ಡದಾಗಿರ ಬೇಕೆಂಬ ನಿಯಮವನ್ನು ಜಾರಿಗೆ ತಂದರೂ ಪ್ರಯೋಜನವಾಗಿಲ್ಲ. ನಿಯಮ ಪಾಲಿಸ ದವರ ವಿರುದ್ಧ ಕೇಸು ದಾಖಲಿಸಲು ಕಾರ್ಮಿಕ ಇಲಾಖೆಗೆ ಅವಕಾಶವಿದ್ದರೂ ಕ್ರಮ ಕೈಗೊಂಡ ಯಾವುದೇ ಉದಾಹರಣೆಗಳಿಲ್ಲ.ಇದರ ವಿರುದ್ದ ಕಳೆದ 15 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಲೇ ಬಂದಿದೆ.

      ಇದರಿಂದಾಗಿ ಸ್ವಲ್ಪ ಮಟ್ಟಿನ ಬದಲಾವಣೆಯಾದರೂ, ಇನ್ನೂ ಕೆಲವರು ನಿರ್ಲಕ್ಷ ಭಾವನೆ ತಾಳಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸದು, ಇಂದಿನಿಂದ ಹತ್ತು ದಿನಗಳ ಒಳಗಾಗಿ ಪರಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ನಾಮಫಲಕ ಅಳವಡಿಸಲು ಸೂಚನೆ ನೀಡದೆ ಇದ್ದಲ್ಲಿ ಕಾರ್ಯಕರ್ತರೇ ತೆರವುಗೊಳಿಸುವ ಕಾರ್ಯಕಕ್ಕೆ ಮುಂದಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

      ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿ.ಎಲ್.ಆನಂದ್, ಉಪಾಧ್ಯಕ್ಷ ಕುಂಭಯ್ಯ, ಜಿಲ್ಲಾ ಸಹ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಬಾಲು, ನಗರ ಅಧ್ಯಕ್ಷ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

(Visited 4 times, 1 visits today)

Related posts