ರೈತಸ್ನೇಹಿ ಕಾಯ್ದೆಗಳ ಜಾರಿಗೆ ಕಾಂಗ್ರೆಸ್-ಜೆಡಿಎಸ್ ಅಡ್ಡಿಯಾಗಿವೆ

ಮಧುಗಿರಿ:

      ರೈತರ ಬಗ್ಗೆ ಕಾಳಜಿಯಿರುವ ನರೇಂದ್ರ ಮೋದಿಯವರ ಕಾರ್ಯಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಡ್ಡಗಾಲಾಗಿದ್ದು, ಎಪಿಎಂಸಿ ತಿದ್ದುಪಡಿಯಾಗಲು ಬಿಜೆಪಿಗೆ ಮತ ನೀಡುವಂತೆ ಶಾಸಕ ವೈ.ಎನ್.ನಾರಾಯಣಸ್ವಾಮಿ ತಿಳಿಸಿದರು. 

     ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಗ್ನೀಯ ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂ.ಚಿದಾನಂದ ಗೌಡರ ಪರವಾಗಿ ಮತಯಾಚನೆ ಮಾಡಿದ ಅವರು ರೈತರು ದಲ್ಲಾಳಿಗಳ ಹಾವಳಿಯಿಂದ ಹೊರಬಂದು ಸ್ವತಂತ್ರವಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ನೂತನ ಎಪಿಎಂಸಿ ಕಾಯ್ದೆ ಸಹಕಾರಿಯಾಗಿದೆ. ಆದರೆ ಈ ಕಾಯ್ದೆ ತಿದ್ದುಪಡಿಗೆ ವಿರೋಧ ಪಕ್ಷಗಳು ಅಡ್ಡಿಯಾಗಿದ್ದು, ಕಾಯ್ದೆ ಮೇಲ್ಮನೆಯಲ್ಲಿ ಬಿದ್ದುಹೋಗುವಂತೆ ಮಾಡಿವೆ. ಈಗಿನ ನಾಲ್ಕು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಆ ಕಾಯ್ದೆ ಜಾರಿಗೆ ಬಂದು ರೈತರಿಗೆ ಅನುಕೂಲವಾಗಲಿದೆ. ಬಿಜೆಪಿ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿ ಗೆಲುವಿಗೆ ಕಾರಣರಾಗಬೇಕು ಎಂದರು.

      ಅಭ್ಯರ್ಥಿ ಎಂ. ಚಿದಾನಂದ ಗೌಡ ಮಾತನಾಡಿ ಬಡ ರೈತ ಕುಟುಂಬದಿಂದ ಬಂದ ನಾನು ಶಿಕ್ಷಣವನ್ನೇ ಉಸಿರಾಗಿಸಿಕೊಂಡು 8 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದು, 220 ಶಿಕ್ಷಕರಿಗೆ ಉದ್ಯೋಗವನ್ನು ನೀಡಿ 30 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿದ್ದೇನೆ. ನನ್ನ ಪ್ರೆಸಿಡೆನ್ಸಿ ಕಾಲೇಜಿನ ಎಲ್ಲವನ್ನು ಶಿಕ್ಷಣಕ್ಕಾಗಿ ವ್ಯಯಿಸುತ್ತಿದ್ದೇವೆ. ಪ್ರಸ್ತುತ ಉನ್ನತ ಶಿಕ್ಷಣಕ್ಕಾಗಿ ಶಿರಾದಲ್ಲಿ ಕುವೆಂಪು ಐಎಎಸ್ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ಮತಕ್ಷೇತ್ರದ ಪ್ರತಿಭಾವಂತ 150 ಮಕ್ಕಳಿಗೆ ಪ್ರತಿವರ್ಷ ಉಚಿತ ಊಟ, ವಸತಿ ಹಾಗೂ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದ್ದೇನೆ. ನನ್ನ ಪಿಯೂ ಕಾಲೇಜಿನಲ್ಲಿ ಪ್ರತಿವರ್ಷ ಶೇ.95 ಅಂಕಗಳಿಸಿದ ಪ್ರತಿಭಾವಂತ 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದು, ಶಿರಾದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು ಎಲ್ಲ ಸೌಲಭ್ಯವನ್ನು ಕಲ್ಪಿಸಿ ಶಿಕ್ಷಣಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಇಂತಹ ಮತ್ತಷ್ಟು ಸಾಧನೆ ಮಾಡಲು ಈಗ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈ ಚುನಾವಣೆಯಲ್ಲಿ ಎಲ್ಲ ಪದವೀಧರರು ಮತದಾರರಾಗಿದ್ದು, ಪ್ರಬುದ್ದರಾಗಿದ್ದಾರೆ. ಪ್ರಧಾನಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ 12ನೇ ತರಗತಿಯವರೆಗೂ ಕಡ್ಡಾಯ ಶಿಕ್ಷಣ ನೀಡಲಿದೆ. ಇಂತಹ ಹಲವಾರು ಯೋಜನೆಗಳ ಅನುಷ್ಠಾನಕ್ಕಾಗಿ ಮತದಾರರು ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

       ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಂದೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಪುರವರ ನರಸಿಂಹಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ರಾಜ್ಯ ಎಬಿವಿಪಿ ಕಾರ್ಯದರ್ಶಿ ವಿನಯ್ ಬಿದರೆ, ತಾಲೂಕು ಪ್ರದಾನ ಕಾರ್ಯದರ್ಶಿ ನಾಗೇಂದ್ರ, ಎಬಿವಿಪಿ ತಾಲೂಕು ಅಧ್ಯಕ್ಷ ರಮೇಶ್, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಮುಖಂಡರಾದ ಸೀತಾರಾಂ, ಜಯಣ್ಣ, ಪ್ರಸನ್ನ, ಶ್ರೀನಿವಾಸ್, ಸುರೇಶ್‍ರೆಡ್ಡಿ ಇತರರಿದ್ದರು.

(Visited 4 times, 1 visits today)

Related posts

Leave a Comment