ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ : ಶೇ.76 ರಷ್ಟು ಮತದಾನ

ತುಮಕೂರು :

      ಕೊರೊನಾ ಮುನ್ನೆಚ್ಚರಿಕೆ ನಡುವೆ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಮತದಾನವು ಗುರುವಾರ ಶಾಂತಿಯುತವಾಗಿ ಜಿಲ್ಲೆಯಲ್ಲಿ ಮುಕ್ತಾಯಗೊಂಡಿದ್ದು, ಶೇಕಡ 76ರಷ್ಟು ಮತದಾನವಾಗಿದೆ.

      ಜಿಲ್ಲೆಯಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಪದವೀಧರ ಮತದಾರರು ಮಾಸ್ಕ್ ಧರಿಸಿ, 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಕಂಡು ಬಂತು.

      ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮತದಾನ ಮಾಡಲು ಆಗಮಿಸುವ ಮತದಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸ್ ಮಾಡಿದ ನಂತರ ಮತಕೇಂದ್ರವನ್ನು ಪ್ರವೇಶಿಸಿ ಕೈಗವಸು ಧರಿಸಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಜಿಲ್ಲೆಯಲ್ಲಿ ಒಟ್ಟು 64 ಮತ ಕೇಂದ್ರಗಳಲ್ಲಿ ಚುನಾವಣಾ ಮತದಾನವು ಪೊಲೀಸ್ ಭದ್ರತೆಯಲ್ಲಿ ನಡೆಯಿತು. 256ಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ಚುನಾವಣಾ ಮತದಾನ ಕರ್ತವ್ಯವನ್ನು ನಿರ್ವಹಿಸಿದರು.

      ಯುವ ಮತದಾರರಿಂದ ಹಿಡಿದು 87 ವರ್ಷ ವಯಸ್ಸಿನ ಹಿರಿಯ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು, ನಿಟ್ಟೂರು ಮತ ಕೇಂದ್ರದಲ್ಲಿ ಕಂಡು ಬಂದಿತು.

      ಮತದಾನದ ಕೊನೆಯ 1 ಗಂಟೆ ಅವಧಿಯಲ್ಲಿ ಕೊರೋನಾ ಸೋಂಕಿತರು/ಶಂಕಿತರ ಮತದಾನಕ್ಕೆ ಅವಕಾಶ ನೀಡಲಾಗಿತ್ತು ಆದರೆ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಸೋಂಕಿತರು/ಶಂಕಿತರು ಮತದಾನ ಮಾಡಿರುವುದಿಲ್ಲ.

      ಜಿಲ್ಲೆಯಲ್ಲಿ ಒಟ್ಟು 29415 ಪದವೀಧರ ಮತದಾರರಿದ್ದು, ಈ ಪೈಕಿ 18,656 ಪುರುಷ ಮತದಾರರು ಹಾಗೂ 10,759 ಮಹಿಳಾ ಮತದಾರರಿದ್ದರು. ಮತದಾನ ಮಾಡಿದ ಮತದಾರರಿಗೆ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಯಿತು.

     ಮತದಾನದ ಕಾರ್ಯ ಮುಕ್ತಾಯವಾದ ನಂತರ ತಾಲ್ಲೂಕು ಕೇಂದ್ರದಲ್ಲಿ ಡಿ-ಮಸ್ಟರಿಂಗ್ ಮಾಡಿ ಜಿಲ್ಲಾ ಕೇಂದ್ರದಿಂದ ಮತ ಎಣಿಕೆ ನಡೆಯುವ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಕೇಂದ್ರಕ್ಕೆ ಮತ ಪೆಟ್ಟಿಗೆಗಳನ್ನು ಕಳುಹಿಸಲಾಯಿತು. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ಮತದಾನಕ್ಕೆ ಬಂದೋಬಸ್ತ್:-

      ಶಾಂತಿಯುತ ಮತದಾನಕ್ಕೆ ಸೂಕ್ತ ಭದ್ರತೆ ಒದಗಿಸಲು ಜಿಲ್ಲೆಯಲ್ಲಿ 40 ಪಿ.ಎಸ್.ಐ., 13 ಎಎಸ್‍ಐ, 73 ಹೆಡ್ ಕಾನ್ಸೆಟೇಬಲ್, 129 ಪೊಲೀಸ್ ಕಾನ್ಸೆಟೇಬಲ್ ಹಾಗೂ 6 ಡಿಎಆರ್ ತುಕಡಿಗಳನ್ನು ಒದಗಿಸಲಾಗಿತ್ತು.

(Visited 4 times, 1 visits today)

Related posts

Leave a Comment