ಕೈಗಾರಿಕಾ ನಿವೇಶನಗಳ ಅಂತಿಮ ದರ ಕಡಿಮೆ ಮಾಡುವಂತೆ ಸಂಸದರಿಗೆ ಮನವಿ

ತುಮಕೂರು:

      ನಗರದ ಹೊರ ವಲಯದಲ್ಲಿರುವ ವಸಂತನರಸಾಪುರ 1ನೇ ಹಂತದ ಕೈಗಾರಿಕಾ ನಿವೇಶನಗಳ ಅಂತಿಮ ದರವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿರುವುದನ್ನು ಕಡಿಮೆ ಮಾಡುವಂತೆ ಹಾಗೂ ಹೆಚ್ಚುವರಿ ಜಾಗಕ್ಕೆ ಮಾರ್ಗಸೂಚಿ ಬೆಲೆ ಜತೆಗೆ ಶೇ. 10 ರಷ್ಟು ದಂಡ ವಿಧಿಸುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಸಂತನರಸಾಪುರ ಇಂಡಸ್ಟ್ರೀಯಲ್ ಅಸೋ ಸಿಯೇಷನ್ ಪದಾಧಿ ಕಾರಿಗಳು ಸಂಸದ ಜಿ.ಎಸ್. ಬಸವರಾಜು ಅವರಿಗೆ ಮನವಿ ಸಲ್ಲಿಸಿದ್ದಾರೆ.

      ನಗರದ ಸಂಸದರ ಕಚೇರಿಯಲ್ಲಿ ಸಂಸದ ಜಿ.ಎಸ್. ಬಸವರಾಜು ಅವರನ್ನು ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ಶಿವಶಂಕರ್ ನೇತೃತ್ವದಲ್ಲಿ ಭೇಟಿ ಮಾಡಿದ ಪದಾಧಿಕಾರಿಗಳು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆದೋರಿರುವ ಸಮಸ್ಯೆಗಳ ಕುರಿತು ಎಳೆಎಳೆಯಾಗಿ ಬಿಡಿಸಿಟ್ಟರು.

      ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ಶಿವಶಂಕರ್, ಕರ್ನಾಟಕದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. 2009 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನಿವೇಶನ ನೀಡಲಾಗಿದ್ದು, ರಾಷ್ಟ್ರದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಪ್ರದೇಶ ಇದಾಗಿದೆ ಎಂದರು.

       ಕರ್ನಾಟಕ ಇಂಡಸ್ಟ್ರೀಯಲ್ ಏರಿಯಾ ಡೆವಲಪ್‍ಮೆಂಟ್ ಬೋರ್ಡ್‍ನವರು ಯಾವುದೇ ರೀತಿಯ ಮೂಲಭೂತ ಸೌಲಭ್ಯ ಕೊಡುತ್ತಿಲ್ಲ. ಟಿ.ಬಿ. ಜಯಚಂದ್ರ ಅವರ ಪರಿಶ್ರಮದಲ್ಲಿ 220 ಕೆ.ವಿ. ವಿದ್ಯುತ್ ಉಪಸ್ಥಾವರ ನಿರ್ಮಾಣವಾಗಿದೆ. ಕುಪ್ಪೂರಿನಿಂದ ನೀರು ಸರಬರಾಜಾಗುತ್ತಿದೆ. ಕುಡಿಯಲು ಒಂದು ತಿಂಗಳಿಗೂ ನೀರು ಸಾಕಾಗುತ್ತಿಲ್ಲ. ಹಾಗಾಗಿ ಶೀಘ್ರ ಕುಡಿಯುವ ನೀರು ಮತ್ತು ಕೈಗಾರಿಕೆ ಬಳಕೆಗೂ ನೀರಿನ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

      2008 ಮತ್ತು 2010 ರಲ್ಲಿ  ಯಾರ್ಯಾರಿಗೆ.ಯಾವ್ಯಾವ ದರದಲ್ಲಿ ಜಾಗ ಹಂಚಿಕೆ ಮಾಡಿದ್ದಾರೆ ಅದು ಸರ್ಕಾರದ ಆದೇಶದ ಪ್ರಕಾರ ಶೇ. 20 ರಷ್ಟರಲ್ಲಿ ನೋಂದಣಿಯಾಗಬೇಕು. ಆದರೆ ಇಂದು ಶೇ. 130 ರಿಂದ ಶೇ. 140 ರ ವರೆಗೆ ಹೆಚ್ಚುವರಿ ದರ ನಿಗದಿಪಡಿಸಲಾಗಿದೆ. ಇದರಲ್ಲಿ ನೀರು ಸರಬರಾಜು ಬಾಬ್ತು, ಸಬ್‍ಸ್ಟೇಷನ್, ರೈಲ್ವೆ ಮೇಲ್ಸೇತುವೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ವೆಚ್ಚ, ಭೂಸ್ವಾಧೀನ ಹಾಗ ಸುಮಾರು 132 ಎಕರೆ ಸರ್ಕಾರಿ ಜಮೀನಿನ ಬಾಬ್ತನ್ನು ಸೇರಿಸಲಾಗಿದೆ. 2ನೇ ಹಂತದಲ್ಲಿ ವೆಚ್ಚವಾಗಿರುವ ಈ ಎಲ್ಲ ಬಾಬ್ತಿನ ವೆಚ್ಚವನ್ನು ಸಹ 1ನೇ ಹಂತಕ್ಕೆ ವಿಲೀನಗೊಳಿಸಿ ಅಂತಿಮ ದರವನ್ನು ಸರ್ಕಾರದ
ಆದೇಶ ಉಲ್ಲಂಘಿಸಿ ನಿಗದಿಪಡಿಸಲಾಗಿದೆ ಎಂದು ಆರೋಪಿಸಿದರು.

      ಕೆಐಎಡಿಬಿಯಲ್ಲಿ ಭೂಸ್ವಾಧೀನ ವೆಚ್ಚ ಹಾಗೂ ಕಾಮಗಾರಿ ವೆಚ್ಚ ಎಲ್ಲ ದರದಲ್ಲೂ ನಿಗದಿಪಡಿಸಿದ ವೆಚ್ಚಕ್ಕಿಂದ ಹೆಚ್ಚುವರಿಯಾಗಿದ್ದು, ಅನಧಿಕೃತ ವೆಚ್ಚಗಳನ್ನು ಸೇರಿಸಲಾಗಿದೆ. ಸಾಲ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಸಂಕಷ್ಟದಲ್ಲಿರುವ ಕೈಗಾರಿಕೋದ್ಯಮಿಗಳ ಮೇಲೆ ಹೆಚ್ಚಿನ ಹೊರೆ ಹೊರಿಸಿ ಅವೈಜ್ಞಾನಿಕವಾಗಿ ಅಂತಿಮ ದರ ನಿಗದಿ ಮಾಡಲಾಗಿದೆ. ಕೂಡಲೇ ಇದನ್ನು ಕೈಬಿಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

      ನಮ್ಮ ಸಮಸ್ಯೆಗಳ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್‍ಶೆಟ್ಟರ್ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ನಮ್ಮ ಸಮಸ್ಯೆಗಳು ಪರಿಹಾರವಾಗಿಲ್ಲ. ಹಾಗಾಗಿ ಸಂಸದರ ಮೂಲಕ ರಾಜ್ಯ ಸರ್ಕಾರಕ್ಕೆ ಗಮನ ಸೆಳೆಯಲು ಮನವಿ ಸಲ್ಲಿಸಲಾಗಿದೆ ಎಂದರು.  ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು, ವಸಂತನರಸಾಪುರದ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳು ಕುಡಿಯುವ ನೀರು ಕೊಟ್ಟಿಲ್ಲ, ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ, ರಸ್ತೆಗಳು ಸರಿಯಾಗಿಲ್ಲ. ಹೆಚ್ಚುವರಿ ದರ ನಿಗದಿಪಡಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಈ ದರವನ್ನು ಕಡಿಮೆ ಮಾಡಬೇಕು ಹಾಗೂ ಈ ಹಿಂದಿನ ಅಗ್ರಿಮೆಂಟ್ ಪ್ರಕಾರ ನಡೆದುಕೊಳ್ಳಬೇಕು. ಮನಬಂದಂತೆ ದರ ಹೆಚ್ಚಿಸಿದರೆ ಇದನ್ನು ನಿರ್ವಹಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿ ಇವರ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶ ರೈತರು ಕೊಟ್ಟಿರುವ ಜಮೀನಿನಿಂದ ನಿರ್ಮಾಣವಾಗಿದೆ. ಆದ್ದರಿಂದ ನಿಗದಿಗೊಳಿಸಿದ ದರವನ್ನೆ ಪಡೆಯಬೇಕು. ಹೆಚ್ಚುವರಿ ನಿಗದಿ ಮಾಡಬಾರದು ಎಂಬುದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಜಿ.ವಿ. ರಾಮಮೂರ್ತಿ, ಕಾರ್ಯದರ್ಶಿ ಸಿ.ವಿ. ಹರೀಶ್, ಜಂಟಿ ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಬಾಬುಲಾಲ್ ಎಸ್. ಜೈನ್, ಮಧುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 5 times, 1 visits today)

Related posts

Leave a Comment