ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯೊಳಗೆ ಮುಗಿಸಿ

ತುಮಕೂರು :

      ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯೊಳಗೆ ಮುಗಿಯಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳಲ್ಲಿ ವಿಳಂಬವಾಗಬಾರದು ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

      ಸ್ಮಾರ್ಟ್‍ಸಿಟಿ ತುಮಕೂರು ಮಹಾನಗರಪಾಲಿಕೆ ಹಾಗೂ ಟೂಡಾ ವತಿಯಿಂದ ನಗರದಾದ್ಯಂತ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

      ರಿಂಗ್ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ರಾಧಾಕೃಷ್ಣ ರಸ್ತೆ, ಅಪೆಕ್ಸ್ ಬ್ಯಾಂಕ್ ಸಮೀಪ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಗಳು, ಮಹಾತ್ಮಗಾಂಧಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ, ಮಾರಿಯಮ್ಮ ಕೊಳಚೆ ಪ್ರದೇಶ ನಿವಾಸಿಗಳ ನಿವೇಶನ ಸಮುಚ್ಚಯ ಸೇರಿದಂತೆ ನಗರದ ವಿವಿಧೆಡೆ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಿದ ಅವರು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿದೇ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

      ನಗರದ ಬಿ.ಎಚ್. ರಸ್ತೆಯ ಅಕ್ಕಪಕ್ಕದ ಎಲ್ಲಾ ಕಾಮಗಾರಿಗಳನ್ನು ಫೆ.6ರೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟ ಮತ್ತು ವೈಜ್ಞಾನಿಕವಾಗಿಲ್ಲದಿದ್ದರೆ ಅಂತಹ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ನಿಗದಿತ ಅವಧಿಯಲ್ಲಿ ರಸ್ತೆ, ಚರಂಡಿ, ಕ್ರೀಡಾಂಗಣ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಳ್ಳಬೇಕು ಎಂದು ನಿರ್ದೇಶಿಸಿದರು.

      ಮತ್ತೊಮ್ಮೆ ನಾನು ತುಮಕೂರಿಗೆ ಭೇಟಿ ನೀಡುವ ವೇಳೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿರಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ನಿತ್ಯ ಮಾಹಿತಿಯನ್ನು ನನ್ನ ಕಚೇರಿಗೆ ರವಾನಿಸಬೇಕು ಎಂದು ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಫೆ.10ರಂದು ಮಾರಿಯಮ್ಮ ಕೊಳಚೆ ಪ್ರದೇಶ ನಿವಾಸಿಗಳ ನಿವೇಶನ ಸಮುಚ್ಚಯ ಉದ್ಘಾಟಿಸಿ, ಫಲಾನುಭವಿಗಳಿಗೆ ಕೀ ಹಸ್ತಾಂತರಿಸಲಾಗುವುದು. ಈ ಸಂಬಂಧ ಉದ್ಘಾಟನೆ ವೇಳೆಗೆ ಸಮುಚ್ಚಯದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ರಂಗಸ್ವಾಮಿ, ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ, ಪಾಲಿಕೆ ಮಹಾಪೌರರಾದ ಫರೀದಾಬೇಗಂ, ಉಪಮಹಾಪೌರರಾದ ಶಶಿಕಲಾ ಗಂಗಹನುಮಯ್ಯ, ನಗರಾಭಿವದ್ಧಿ ಆಯುಕ್ತರಾದ ಯೋಗಾನಂದ್, ಟೂಡಾ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

      ಪ್ರಗತಿ ಪರಿಶೀಲನೆ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತೆರಿಗೆಗಳನ್ನು ಬಾಕಿ ಉಳಿಯದಂತೆ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚಿಸಿದರು.

      ಅಭಿವೃದ್ಧಿಗೆ ಅನುದಾನ ಮುಖ್ಯವಾಗಿದ್ದು, ಕುಡಿಯುವ ನೀರಿನ ತೆರಿಗೆಯನ್ನು ಮುಲಾಜಿಲ್ಲದೆ ಸಂಗ್ರಹಿಸಬೇಕು ಎಂದು ಇಂಜಿನಿಯರ್‍ಗೆ ನಿರ್ದೇಶಿಸಿದರು.
ನಗರ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ಮೀಟರ್‍ಗಳನ್ನು  ಕಡ್ಡಾಯವಾಗಿ ಅಳವಡಿಸಬೇಕು. ಉದ್ಯಾನವನ, ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

      ತುಮಕೂರು ನಗರ ಅಭಿವೃದ್ಧಿಗೊಳ್ಳುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಹೆಚ್ಚು ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಮಹಾನಗರ ಪಾಲಿಕೆ ಸ್ವಚ್ಚತೆಯಲ್ಲಿ ನಂ1 ಆಗಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದರು. ನಗರದಲ್ಲಿ ಎಲ್ ಇಡಿ ಅಳವಡಿಕೆ ಸಮರ್ಪಕವಾಗಿ ಆಗಬೇಕು. ಅವ್ಯವಹಾರದ ಅರೋಪ ಕೇಳಿಬಂದಿರುವ ಕಾರಣ ಗಂಭೀರವಾಗಿ ಪರಿಗಣಿಸಿ ಸಮರ್ಪಕವಾಗಿ ಅಳವಡಿಸಬೇಕು. ಪಾಲಿಕೆ ಸದಸ್ಯರೊಂದಿಗೆ ಸಮನ್ವಯದಿಂದ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

      ನಗರದಲ್ಲಿನ ಉದ್ಯಾನವನಗಳ ನಿರ್ವಹಣೆ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಹೆಚ್ಚು ಗಮನಹರಿಸುವಂತೆ ಶಾಸಕ ಜಿ. ಬಿ. ಜ್ಯೋತಿಗಣೇಶ್ ಸೂಚಿಸಿದರು. ಒತ್ತುವರಿಯಾಗಿರುವ ಪ್ರತಿಯೊಂದು ಉದ್ಯಾನವನ ಹಾಗೂ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮಹಾಲಕ್ಷ್ಮಿ ನಗರದಲ್ಲಿ ಸಾರ್ವಜನಿಕರು ಉದ್ಯಾನವನ ಒತ್ತುವರಿಯಾಗಿದೆ ಎಂದು ಮನವಿ ಕೊಟ್ಟಿದ್ದಾರೆ. ಹಾಗಾಗಿ ಪ್ರತಿಯೊಂದು ಉದ್ಯಾನವನದ ಒತ್ತುವರಿ ಪರಿಶೀಲನೆ ಮಾಡಿ, ಒತ್ತುವರಿ ತೆರವು ಮಾಡಬೇಕು. ಮಳೆಗಾಲ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿಯೇ ಒತ್ತುವರಿ ತೆರವು ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

      ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಶೀಘ್ರ ಮುಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅನುದಾನ ಸಮರ್ಪಕವಾಗಿ ಖರ್ಚಾಗಬೇಕು. ಶಾಲಾಭಿವೃದ್ದಿ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಸೇರಿದಂತೆ, ಸ್ಮಾರ್ಟ್ ಸಿಟಿಯಡಿ ನಡೆಯುತ್ತಿರುವ ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ಎಲ್ಲಾ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಆಯುಕ್ತ ರಂಗಸ್ವಾಮಿ ಅವರಿಗೆ ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲಾ ಯೋಜನಾ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು. ಅದರಲ್ಲೂ ವಸತಿ ಯೋಜನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ನಗರಾಭಿವದ್ಧಿ ಆಯುಕ್ತರಾದ ಯೋಗಾನಂದ್ ಅವರಿಗೆ ನಿರ್ದೇಶಿಸಿದರು.

      ಸಭೆಯಲ್ಲಿ ಜ್ಯೋತಿಗಣೇಶ್, ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಟೂಡಾ ಅಧ್ಯಕ್ಷ ನಾಗೇಶ್ ಮತ್ತಿತರರು ಹಾಜರಿದ್ದರು. 

ಅಕ್ರಮ-ಸಕ್ರಮ ಜಾರಿಗೆ ಉಪಸಮಿತಿ ರಚನೆ:

      ರಾಜ್ಯದಲ್ಲಿ ಅಕ್ರಮ-ಸಕ್ರಮ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಉಪಸಮಿತಿ ರಚಿಸಲಾಗಿದ್ದು, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ತಿಳಿಸಿದರು.

     ನಗರದ ಪ್ರವಾಸಿ ಮಂದಿರದಲ್ಲಿಂದು ಮಾತನಾಡಿದ ಅವರು, ತುಮಕೂರು ನಗರಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನದಿಂದ ನಗರದೊಳಗಿನ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

     ಪ್ರಸ್ತುತ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಿಂದ 211.99 ಕೋಟಿ ವೆಚ್ಚದಲ್ಲಿ 81 ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿದ್ದು, 670.93 ಕೋಟಿ ವೆಚ್ಚದಲ್ಲಿ 67ಯೋಜನೆಗಳು ಪ್ರಗತಿಯಲ್ಲಿವೆ. ಮತ್ತು 16.88ಕೋಟಿ ವೆಚ್ಚದ 8 ಯೋಜನೆಗಳ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಅವರು ತಿಳಿಸಿದರು.

      ಕೆಲವು ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬ ಅರೋಪ ಕೇಳಿಬಂದಿದ್ದು, ಕಳಪೆ ಯಾಗಿದೆ ಎಂಬುದರ ಬಗ್ಗೆ ಖಚಿತ ಆಧಾರಸಹಿತ ಲಿಖಿತ ಮಾಹಿತಿ ಸಿಕ್ಕರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಅಲ್ಲದೇ, ಮತ್ತೆ ಗುಣಮಟ್ಟ ಪರಿಶೀಲನೆಯ ತಂಡ ಕರೆಸಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

      ಎಲ್‍ಇಡಿ ಅಳವಡಿಕೆಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವ್ಯವಹಾರ ಆಗಿರುವುದು ಖಚಿತವಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

(Visited 7 times, 1 visits today)

Related posts

Leave a Comment