ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಡಿಸಿ ಸೂಚನೆ

 ತುಮಕೂರು : 

     ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ಸೂಚನೆ ನೀಡಿದ್ದಾರೆ.

      ಇತ್ತೀಚಿಗೆ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಇಲಾಖಾ ಕಾರ್ಯಕ್ರಮಗಳಿಗಾಗಿ ಜಿಲ್ಲೆಗೆ 2020-21ನೇ ಸಾಲಿಗಾಗಿ 170 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನವನ್ನು ಬಳಸಿಕೊಂಡು ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಫ್ಯಾನ್ ಹಾಗೂ ಲೈಟ್‍ಗಳನ್ನು ಅಳವಡಿಸಬೇಕೆಂದು ನಿರ್ದೇಶನ ನೀಡಿದ್ದಾರೆ.

      ಪ್ರತಿ ಅಂಗನವಾಡಿ ಕೇಂದ್ರಕ್ಕೆ 25000 ರೂ.ನಂತೆ ಸಿದ್ಧಪಡಿಸಿರುವ ಅಂದಾಜುಪಟ್ಟಿ ಬಗ್ಗೆ ಚರ್ಚಿಸಿದ ಅವರು, ಪ್ರತಿ ಕೇಂದ್ರಕ್ಕೆ 25000 ರೂ.ಗಳ ಅನುದಾನ ಅಗತ್ಯವಿರುವುದಿಲ್ಲ. ಆದ್ದರಿಂದ ಅಂದಾಜು ಪಟ್ಟಿಗಳನ್ನು ಪರಿಷ್ಕರಿಸಿ ವಾಸ್ತಾವಿಕ ವೆಚ್ಚದಲ್ಲಿ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಭೆಯಲ್ಲಿ ಹಾಜರಿದ್ದ ಪಿ.ಆರ್.ಇ.ಡಿ ಅಭಿಯಂತರರಿಗೆ ಸಭೆಯಲ್ಲಿ ಸೂಚಿಸಿದ್ದಾರೆ.

      ವಿದ್ಯುತ್‍ನೊಂದಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ಒದಗಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರಿಗೆ ಸೂಚಿಸಿದ್ದಾರೆ. ವಿವಿಧ ಯೋಜನೆಗಳಲ್ಲಿ ಮಂಜೂರಾಗಿರುವ ಎಲ್ಲಾ ಅಂಗನವಾಡಿ ಕಟ್ಟಡಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಇಲಾಖೆಗೆ ಹಸ್ತಾಂತರ ಮಾಡಲು ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿರುವ 0-6 ವರ್ಷದ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಎಲ್ಲಾ ಕಾಮಗಾರಿಗಳನ್ನು ನಿರಂತರ ಅನುಸರಣೆ ಮಾಡಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಸಹಕರಿಸಬೇಕು. ಕಾಮಗಾರಿಗಳ ಗುಣಮಟ್ಟದಲ್ಲಿ ಕಳಪೆಯಾಗಿರುವುದು ಕಂಡುಬಂದಲ್ಲಿ ಅಭಿಯಂತರರು/ಏಜೆನ್ಸಿಯವರರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ಮಾತು ಹೇಳಿದ್ದಾರೆ.

(Visited 5 times, 1 visits today)

Related posts

Leave a Comment