ತುಮಕೂರು ಜಿಲ್ಲೆಯ 3 ತಾಲ್ಲೂಕುಗಳಲ್ಲಿ CBNAAT ಕ್ಷಯ ಪತ್ತೆ ಯಂತ್ರ

 ತುಮಕೂರು:

      ಜಿಲ್ಲೆಯ ತಿಪಟೂರು, ಪಾವಗಡ, ತುಮಕೂರು ತಾಲ್ಲೂಕುಗಳಲ್ಲಿ ಒಆಖ ಕ್ಷಯ ಪತ್ತೆಗಾಗಿ ಜೀನ್ ಎಕ್ಸ್‍ಪರ್ಟ್ (CBNAAT) ಯಂತ್ರವನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್ ತಿಳಿಸಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು(ಯೋಜನೆಗಳ) ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.

      ಅಃಓಂಂಖಿ ಯಂತ್ರದ ನೆರವಿನಿಂದ ಸೂಕ್ಷ್ಮತೆಯಿಲ್ಲದ ರೋಗನಿರೋಧಕ ಕ್ಷಯ (MDR) ರೋಗವನ್ನು 2 ಗಂಟೆಗಳ ಅವಧಿಯಲ್ಲಿಯೇ ಪತ್ತೆ ಮಾಡಬಹುದಾಗಿದೆ. ಪ್ರಾಥಮಿಕ ಹಂತದ ಚಿಕಿತ್ಸೆಗೆ ಸ್ಪಂದಿಸದವರನ್ನು MDR ಕ್ಷಯ ರೋಗಿಗಳೆಂದು ಗುರುತಿಸಲಾಗುವುದು. ಇವರಿಗೆ ನಗರದ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಚಿಕಿತ್ಸಾ ಸೌಲಭ್ಯವಿದ್ದು, 9 ರಿಂದ 11 ತಿಂಗಳ ಕಾಲ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಸಂಪೂರ್ಣವಾಗಿ ಗುಣಮುಖರಾಗಬಹುದು ಸರ್ಕಾರಿ ಆಸ್ಪತ್ರೆಯಲ್ಲಿ ನೇರ ನಿಗಾವಣೆ ಮೂಲಕ ಕ್ಷಯರೋಗ ಚಿಕಿತ್ಸೆ ಪಡೆಯುವವರ ಖಾತೆಗೆ ಮಾಹೆಯಾನ 500 ರೂ.ಗಳನ್ನು ನೇರವಾಗಿ ಜಮಾ ಮಾಡಲಾಗುವುದು. ಅಲ್ಲದೆ ನೇರ ನಿಗಾವಣೆ ಮೂಲಕ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ನೆರವಾಗುವ ಒಬ್ಬರಿಗೆ 6 ತಿಂಗಳ ಅವಧಿಗೆ 1000 ರೂ.ಗಳ ಪ್ರೋತ್ಸಾಹಧನ ಹಾಗೂ ರೋಗಿಯಲ್ಲಿ ಕ್ಷಯ ರೋಗವನ್ನು ಪತ್ತೆ ಮಾಡಿ ದೃಢೀಕರಿಸಿದ ಖಾಸಗಿ ವೈದ್ಯರಿಗೆ ಸರ್ಕಾರದಿಂದ 500 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು. ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ 3366 ಕ್ಷಯರೋಗಿಗಳು ಪತ್ತೆಯಾಗಿದ್ದು, ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ 17ಸಾವಿರ ಏಡ್ಸ್ ರೋಗಿಗಳೆಂದು ಗುರುತಿಸಲಾಗಿದ್ದು, ಇವರ ಜೀವಿತಾವಧಿ ಪ್ರಮಾಣ ಹೆಚ್ಚಿಸಲು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗುಬ್ಬಿ ಹಾಗೂ ತುಮಕೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಿದ್ದು, ಇವರಿಗೆ ಏಡ್ಸ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

      ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವರಾಜ್ ಮಾತನಾಡಿ, ಮಾಧ್ಯಮಗಳು ಯಾವುದೇ ಸರ್ಕಾರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಶ್ಲಾಘನೀಯ ಕೆಲಸ ಮಾಡುತ್ತಿವೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಉತ್ತಮ ರಕ್ತ-ಒಳ್ಳೆಯ ಜೀವನ, ಪೌಷ್ಟಿಕ ಆಹಾರ, ತಾಯಿ-ಮಗುವಿನ ಆರೋಗ್ಯಕ್ಕೆ ಆಧಾರ, ಅಪೌಷ್ಠಿಕ ಪುನಶ್ಚೇತನ ಕೇಂದ್ರ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಕಾಂಗರೂ ಮದರ್ ಕೇರ್, ತಾಯಿ ಹಾಲಿನ ಮಹತ್ವ, ಅತಿಸಾರ ಭೇದಿ ನಿಯಂತ್ರಣ, ಜಂತುಹುಳು ನಿವಾರಣೆ, ಗರ್ಭಿಣಿ ಹಾಗೂ ಶಿಶುಗಳಿಗೆ ಚುಚ್ಚುಮದ್ದಿನ ವೇಳಾಪಟ್ಟಿ, ಅಯೋಡಿನ್ ಕೊರತೆಯಿಂದಾಗುವ ನ್ಯೂನ್ಯತೆಗಳ ನಿಯಂತ್ರಣದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರಲ್ಲದೆ ರೋಗ ತಗುಲಿದವರಿಗೆ ಚಿಕಿತ್ಸಾ ವಿಧಾನ, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಧ್ಯಮಗಳು ಜನರಿಗೆ ಮುಟ್ಟಿಸಿದಾಗ ಮಾತ್ರ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಕಾರ್ಯಕ್ರಮಗಳ ಸೌಲಭ್ಯ ದೊರೆತು ಯೋಜನೆ ಯಶಸ್ಸು ಕಾಣಲು ಸಾಧ್ಯವೆಂದು ತಿಳಿಸಿದರು.

      ಜಿಲ್ಲಾಸ್ಪತ್ರೆಯಲ್ಲಿ ಅಪೌಷ್ಠಿಕತೆ ಮಕ್ಕಳ ಆರೈಕೆಗಾಗಿ 10 ಹಾಸಿಗೆಗಳುಳ್ಳ ಅಪೌಷ್ಠಿಕ ಮಕ್ಕಳ ಪುನಶ್ಚೇತನ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ದಾಖಲಾದ ಮಕ್ಕಳಿಗೆ 14 ದಿನಗಳ ಕಾಲ ಉತ್ತಮ ಪೌಷ್ಠಿಕ ಆಹಾರ ನೀಡುವ ಮೂಲಕ ಅಪೌಷ್ಠಿಕತೆಯಿಂದ ದೂರ ಮಾಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 311 ಅಪೌಷ್ಠಿಕ ಮಕ್ಕಳನ್ನು ಗುರುತಿಸಲಾಗಿದ್ದು, ಪ್ರತಿ ತಿಂಗಳು 15 ರಿಂದ 20 ಮಕ್ಕಳು ದಾಖಲಾಗುತ್ತಿದ್ದಾರೆ ಎಂದು ತಿಳಿಸಿದರಲ್ಲದೆ, ಪ್ರತಿ ವರ್ಷ ಸುಮಾರು 40,000 ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಈ ಪೈಕಿ ಖಾಸಗಿ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.48 ರಷ್ಟು ಸಿಜೇರಿಯನ್ ಹಾಗೂ ಶೇ.62ರಷ್ಟು ಸಾಮಾನ್ಯ ಹೆರಿಗೆಗಳಾಗುತ್ತಿವೆ. ಜಿಲ್ಲೆಯಲ್ಲಿ 1ಲಕ್ಷ ಜೀವಂತ ಜನನಗಳಲ್ಲಿ 85 ತಾಯಿಮರಣ, 1,000 ಜನನಕ್ಕೆ 13 ಶಿಶು ಮರಣಗಳಾಗುತ್ತಿವೆ. ಈ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಪಲ್ಸ್ ಪೋಲಿಯೋ ಮತ್ತಿತರ ತಮ್ಮ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

      ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ: ಪುರುಷೋತ್ತಮ್ ಮಾತನಾಡಿ, ಪಾಶ್ರ್ವವಾಯು, ಹೈಪರ್ ಟೆನ್ಶನ್, ಮಧುಮೇಹ, ಚಿಕುನ್‍ಗುನ್ಯಾ, ಡೆಂಗ್ಯೂ, ಮೆದುಳು ಜ್ವರ, ಮಲೇರಿಯಾ, ಆನೆಕಾಲು, ಶ್ವಾಸಕೋಶ, ಹೃದಯ ಸಂಬಂಧಿ ಮತ್ತಿತರ ರೋಗಗಳ ಹತೋಟಿಗಾಗಿ ಸ್ಥಳೀಯ ಆಡಳಿತಗಳ ಸಹಕಾರದಲ್ಲಿ ಹಲವಾರು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ರೋಗ ಲಕ್ಷಣಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರಲ್ಲದೆ 3 ತಿಂಗಳಿಗೊಮ್ಮೆ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ಯೋಗ್ಯವಲ್ಲದ ನೀರನ್ನು ಬಳಸದಂತೆ ಜನರಿಗೆ ತಿಳುವಳಿಕೆ ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ 150 ಆನೆಕಾಲು ರೋಗ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಾವಗಡದ ಸೋಲಾರ್ ಪ್ಲಾಂಟ್ ಪ್ರದೇಶದಲ್ಲಿ ಕೂಲಿ ಮಾಡುತ್ತಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಾಗಿ ಈ ರೋಗ ಕಂಡುಬಂದಿದೆ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಇಂತಹ ರೋಗಗಳನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.

      ತುಮಕೂರು ನಗರವನ್ನು ತಂಬಾಕುಮುಕ್ತವೆಂದು ಘೋಷಿಸಲು ನಾವೆಲ್ಲ ಸಜ್ಜಾಗಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕುಯುಕ್ತ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಹತೋಟಿಗೆ ತರಲಾಗಿದೆ. ಕಾಲಕಾಲಕ್ಕೆ ದಾಳಿ ನಡೆಸುವ ಮೂಲಕ ನಿಯಮ ಉಲ್ಲಂಘಿಸಿದ 85 ಪ್ರಕರಣಗಳನ್ನು ದಾಖಲಿಸಿ 6,70,000 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧಸ್ಪರ್ಧೆ, ಮತ್ತಿತರ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

      ಕುಟುಂಬ ಕಲ್ಯಾಣಾಧಿಕಾರಿ ಡಾ: ಮಹಿಮಾ ಮಾತನಾಡಿ, ಆಸ್ಪತ್ರೆಗೆ ದಾಖಲಾದ ರೋಗಿ ಗುಣಮುಖರಾಗಿ ಹೊರ ಹೋಗಬೇಕೇ ಹೊರತು ಇಲ್ಲಿಂದ ಮತ್ತೊಂದು ರೋಗವನ್ನು ಕೊಂಡೊಯ್ಯಬಾರದೆನ್ನುವ ದೃಷ್ಟಿಯಲ್ಲಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಸ್ವಚ್ಛತೆ ಕಾಪಾಡಿಕೊಂಡಿರುವ ಜಿಲ್ಲಾಸ್ಪತ್ರೆಗೆ ರಾಜ್ಯ ಸರ್ಕಾರವು ಕಾಯಕಲ್ಪ ಪ್ರಶಸ್ತಿಗೆ ಮಾನ್ಯ ಮಾಡಿದೆ ಎಂದರಲ್ಲದೆ, ಜನಸಂಖ್ಯಾ ನಿಯಂತ್ರಣಕ್ಕಾಗಿ ಪುರುಷರು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕೆಂದು ಮನವಿ ಮಾಡಿದರು.

      ಹೆಣ್ಣು ಭ್ರೂಣಹತ್ಯೆ ಪ್ರಕರಣ ದೃಢಪಟ್ಟಲ್ಲಿ ಸಂಬಂಧಿಸಿದ ವೈದ್ಯರಿಗೆ 3 ರಿಂದ 5ವರ್ಷಗಳ ಕಾಲ ಕಾರಾಗೃಹ ವಾಸ ಹಾಗೂ ದಂಡ ವಿಧಿಸಲು ಅವಕಾಶವಿದೆ. ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳನ್ನು ತಪಾಸಣಾ ಮಾಡಿ ನಿಗಾವಹಿಸಲಾಗುತ್ತಿದೆ. ಆರೋಗ್ಯ ಕಾರ್ಯಕ್ರಮಗಳ ಕುರಿತು ಸಾರ್ವಜನಿಕ ದೂರುಗಳಿದ್ದಲ್ಲಿ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂದು ತಿಳಿಸಿದರು.

      ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ: ಚೇತನ್ ಮಾತನಾಡಿ, ಕುಷ್ಠರೋಗ ನಿರ್ಮೂಲನೆ, ಅಂಧತ್ವ ನಿವಾರಣೆ, ಆಯುಷ್ಮಾನ್ ಭಾರತ್, ಮಾನಸಿಕ ಆರೋಗ್ಯ ಕುರಿತು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡುತ್ತಾ, ಅಂಧತ್ವ ನಿರ್ಮೂಲನಾ ಕಾರ್ಯಕ್ರಮದಡಿ ಪ್ರಸಕ್ತ ವರ್ಷ 16844 ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದ್ದು, ಮಾನಸಿಕ ರೋಗಿಗಳನ್ನು ಪತ್ತೆ ಹಚ್ಚಿ ಪ್ರಾಥಮಿಕ ಚಿಕಿತ್ಸೆ ನೀಡಲು 900 ಆರೋಗ್ಯ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

      ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಲು ಪತ್ರಕರ್ತರೊಬ್ಬರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಮಾತನಾಡಿ ಊಟದ ವ್ಯವಸ್ಥೆ ಮಾಡಿರುವ ದೇವಸ್ಥಾನ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಹಾರ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಆಹಾರ ಗುಣಮಟ್ಟದ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಿ ಕೂಡಲೇ ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ನಿರೀಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

      ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚೀ.ನಿ.ಪುರಷೋತ್ತಮ್ ಮಾತನಾಡಿ, ಹಲವಾರು ಹೊಸ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎಲ್ಲ ಯೋಜನೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು ಪ್ರತ್ಯೇಕವಾಗಿ ವಿವಿಧ ದಿನಗಳಂದು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ಜನರಿಗೆ ಸಮರ್ಪಕ ಮಾಹಿತಿ ತಲುಪುತ್ತದೆ ಎಂದು ಸಲಹೆ ನೀಡಿದರಲ್ಲದೆ, ಇಂತಹ ಕಾರ್ಯಕ್ರಮಗಳಿಗೆ ಮಾಧ್ಯಮದ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

      ವಾರ್ತಾ ಸಹಾಯಕಿ ಆರ್. ರೂಪಕಲಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಆರ್.ಪರಶುರಾಮಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಹನುಮಂತರಾಯ, ಮಾಧ್ಯಮದ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.

(Visited 112 times, 1 visits today)

Related posts