ಪ್ರತಿಭಟನೆಗೂ ಮುನ್ನವೇ ರೈತರನ್ನು ಬಂಧಿಸಿದ ಪೊಲೀಸರು

ತುಮಕೂರು :  

      ದೆಹಲಿಯಲ್ಲಿರುವ ನಡೆಯುತ್ತಿರುವ ರೈತರ ಚಳವಳಿ ಬೆಂಬಲಿಸಿ,ದೇಶದೆಲ್ಲಡೆ ರೈತರು ನಡೆಸುತ್ತಿರುವ ಹೆದ್ದಾರಿ ಪ್ರತಿಭಟನೆಯ ಅಂಗವಾಗಿ ತುಮಕೂರಿನಲ್ಲಿ ರೈತ ಸಂಘ, ಹಸಿರು ಸೇನೆ, ಪ್ರಗತಿಪರ ಸಂಘಟನೆಗಳು ಹಾಗೂ ಕಾರ್ಮಿಕರು ಹಮ್ಮಿಕೊಂಡಿದ್ದ ಶಾಂತಿಯುತ ರಸ್ತೆ ತಡೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಸಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಆರೋಪಿಸಿದ್ದಾರೆ.

      ನಗರದ ಗುಬ್ಬಿಗೇಟ್ ಬಳಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ರೈತರು,ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಮಿಕರನ್ನು ಬಂಧಿಸಿದ ಪೊಲೀಸರ ಕ್ರಮ ಸರಿಯಲ್ಲ ಎಂದ ಅವರು,ನಾವುಗಳು ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದೇವು.ಆದರೆ ತುಮಕೂರು ಪೊಲೀಸರು ಪ್ರತಿಭಟನೆಗೆ ಕುಳಿತುಕೊಳ್ಳುವ ಮುನ್ನವೇ ನಮ್ಮನ್ನು ಬಲವಂತವಾಗಿ ಬಂಧಿಸುವ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ.ಇದು ಸರಿಯಲ್ಲ.ಇಂದು ರೈತರ ಸ್ಥಿತಿ ಬೀದಿಗೆ ಬಿದ್ದಿದೆ.ರೈತರ ಹೋರಾಟಕ್ಕೆ ಪ್ರಪಂಚದಾದ್ಯಂತ ತಿಳಿದವರು ಮಾತನಾಡುತಿದ್ದಾರೆ. ಇದನ್ನು ಸಹಿಸದ ಕೇಂದ್ರ ಮತ್ತು ರಾಜ್ಯ ಸರಕಾರ ಪೊಲೀಸ್ ಬಲ ಬಳಸಿ ಪ್ರತಿಭಟನೆ ಹತಿಕ್ಕಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಪ್ರಗತಿಪರ ಸಂಘಟನೆಗಳ ಮುಖಂಡ ಡಾ.ಬಸವರಾಜು ಮಾತನಾಡಿ,ರೈತರು ಸಕಾರಣವನ್ನಿಟ್ಟುಕೊಂಡು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದರ ಭಾಗವಾಗಿ ತುಮಕೂರು ಜಿಲ್ಲೆಯಲ್ಲಿಯೂ ಪ್ರತಿಭಟನೆಗೆ ಮುಂದಾಗುವ ಮೊದಲೇ ರೈತರು, ಕಾರ್ಮಿಕರು, ಪ್ರಗತಿಪರ ನಿಲುವು ಉಳ್ಳವರನ್ನು ಬಂಧಿಸಿದ್ದು ಸರಿಯಲ್ಲ.ರೈತರಿಗೆ ಬೇಡವಾದ ಕಾನೂನು ತರುವ ತರಾತುರಿ ಸರಕಾರಕ್ಕೆ ಏಕೆ ಎಂದು ಪ್ರಶ್ನಿಸಿದರು.

       ನಾನು ಒಬ್ಬ ವೈದ್ಯನಾಗಿ,ರೈತಪರ ಕಾಳಜಿ ಉಳ್ಳ ವ್ಯಕ್ತಿಯಾಗಿ,ಹೊಸ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು,ರೈತರನ್ನು ಉಳಿಸಬೇಕೆಂಬ ಆಶಯದೊಂದಿಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಕಾಯ್ದೆಗಳಿಂದ ರೈತರ ಬದುಕು ಸರ್ವನಾಶವಾಗಲಿದೆ ಎಂದು ಡಾ.ಬಸವರಾಜು ನುಡಿದರು.

ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಸರಕಾರ ರೈತರು ನಡೆಸುತ್ತಿರುವ ಹೋರಾಟವನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಮೂಲಕ ರೈತರ ಹೋರಾಟವೆಂದರೆ ರೈತರು ಮತ್ತು ಪೊಲೀಸರು ಎಂಬಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ.ರೈತರು ಯಾವ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ ಎಂಬುದೇ ಚರ್ಚೆಯಾಗದ ರೀತಿಯಲ್ಲಿ ಸರಕಾರ ನಡೆದುಕೊಳ್ಳುತ್ತಿರುವುದು ದುರಂತ ಎಂದರು.

      ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್,ರೈತರ ಸಂಘದ ಶಂಕರಪ್ಪ, ಅಜ್ಜಪ್ಪ,ರೈತ ಸಂಘ ಮತ್ತು ಹಸಿರುಸೇನೆಯ ಚಿಕ್ಕಬೋರೇಗೌಡ,ಚಿರತೆ ಚಿಕ್ಕಣ್ಣ,ಅರುಂಧತಿ,ಮಂಜುಳ,ಪ್ರವೀಣ್,ಪೂಜಾರಪ್ಪ,ವೆಂಕಟೇಗೌಡ,ಮೆಳೆಕಲ್ಲ ಹಳ್ಳಿಯ ಯೋಗೀಶ್,ನರಸಿಂಹಮೂರ್ತಿ,ಆರ್.ಕೆ.ಎಸ್‍ನ ಕಲ್ಯಾಣಿ,ಆಶ್ವಿನಿ,ಶ್ರೀನಿವಾಸಗೌಡ, ನಾದೂರು ಕೆಂಚಪ್ಪ, ಲಕ್ಷ್ಮಣಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

(Visited 4 times, 1 visits today)

Related posts

Leave a Comment