ಎಡೆಯೂರು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಲು ಡಿಸಿ ಸೂಚನೆ

ತುಮಕೂರು : 

     ಕುಣಿಗಲ್ ತಾಲೂಕು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ಏಪ್ರಿಲ್ 12 ರಿಂದ 27 ರವರೆಗೆ ನಡೆಯಲಿರುವ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಎಲ್ಲಾ ಇಲಾಖೆಗಳು ಸಮನ್ವಯದಿಂದ ತಮ್ಮ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಸುಸೂತ್ರವಾಗಿ ಜಾತ್ರೆ ನೆರವೇರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.

      ಪ್ರಸಿದ್ಧ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವುದರಿಂದ ಕೋವಿಡ್-19 ನಿಯಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗಬೇಕು. ಜಾತ್ರೆಗೆ ಬರುವ ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ವಿತರಣೆ ಮಾಡುವ ಪ್ರಸಾದವನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಕಡ್ಡಾಯವಾಗಿ ಪರೀಕ್ಷಿಸಿ, ನಂತರವೇ ವಿತರಣೆಗೆ ಅನುಮತಿ ನೀಡಬೇಕು. ನೀರಿನ ಗುಣಮಟ್ಟ ಖಾತ್ರಿಪಡಿಸಿಕೊಂಡು ಕುಡಿಯುವ ನೀರು ಸರಬರಾಜು ಮಾಡುಬೇಕು. ಪಾರ್ಕಿಂಗ್ ಸಮಸ್ಯೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಬೇಕು. ಏ.19ರಂದು ನಡೆಯಲಿರುವ ಮಹಾರಥೋತ್ಸವದ ದಿನ ಹೆಚ್ಚಿನ ಪೊಲೀಸ್ ವ್ಯವಸ್ಥೆ ನಿಯೋಜಿಸಬೇಕು. ಧ್ವನಿವರ್ಧಕಗಳ ಮೂಲಕ ಜನರಿಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.

     ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಬೇಕು. ಶೌಚಾಲಯದ ಶುಚಿತ್ವಕ್ಕಾಗಿ ಪೂರಕ ನೀರಿನ ಸೌಲಭ್ಯವೂ ಸಮರ್ಪಕವಾಗಿರಬೇಕು. ಭಕ್ತಾಧಿಗಳು ಓಡಾಡುವ ರಸ್ತೆಗಳೂ ಅಚ್ಚುಕಟ್ಟಾಗಿರುವಂತೆ ಕ್ರಮಕೈಗೊಳ್ಳಬೇಕು. ಭಕ್ತಾಧಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

       ಜಾತ್ರಾ ಮೈದಾನದಲ್ಲಿ ಮದ್ಯ, ಮಾಂಸ ಮಾರಾಟ ಅಂಗಡಿಗಳನ್ನು ತೆರೆಯದಂತೆ ನಿರ್ಬಂಧಿಸಬೇಕು. ಜಾನುವಾರುಗಳಿಗೆ ಸೋಂಕು, ರೋಗಗಳು ತಗುಲದಂತೆ ಪಶುವೈದ್ಯ ಇಲಾಖೆ ಎಚ್ಚರಿಕೆ ವಹಿಸುವುದರೊಂದಿಗೆ ರಾಸುಗಳಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಏಪ್ರಿಲ್ 21ರ ಬೆಳ್ಳಿ ಪಲ್ಲಕ್ಕಿ ಉತ್ಸವದ ದಿನದಂದು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಪೌರಾಣಿಕ ನಾಟಕ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದ ಅವರು, ಜಾತ್ರಾ ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗದಂತೆ ನಿರಂತರವಾಗಿ ವಿದ್ಯುತ್ ಸರಬರಾಜು ಆಗುವಂತೆ ಕ್ರಮವಹಿಸಬೇಕು ಎಂದು ಬೆಸ್ಕಾಂ ಅಧಿಕಾರಿಗೆ ಸೂಚಿಸಿದರು.

      ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಡ್ಯಾಮೇಜ್ ಇಲ್ಲದ ವೈರ್‍ಗಳನ್ನು ಬಳಸಿ ದೀಪಾಲಂಕಾರ ಮಾಡಬೇಕು. ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಅನುಮೋದನೆ ಪಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

     ಏ.13ರಿಂದ ದನಗಳ ಜಾತ್ರೆ ನಡೆಯಲಿದ್ದು, ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಣೆಯನ್ನು ದೇವಾಲಯದ ವತಿಯಿಂದ ಮಾಡಬೇಕು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು

ಸಭೆಯಲ್ಲಿ ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್, ಎಡೆಯೂರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೈ.ಎಸ್.ಸಿದ್ದಲಿಂಗ ಪ್ರಭು, ಮುಜರಾಯಿ ತಹಶೀಲ್ದಾರ್ ಅನಂತರಾಯ, ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮಂಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

(Visited 6 times, 1 visits today)

Related posts

Leave a Comment