ರೈತರ ಪರವಾಗಿ ಕೆಲಸ ಮಾಡಿ, ಇಲ್ಲವಾದರೇ ಜೋಕೆ : ಶಾಸಕರ ಎಚ್ಚರಿಕೆ

ಕೊರಟಗೆರೆ:

      ಎತ್ತಿನಹೊಳೆ ಅಧಿಕಾರಿ ವರ್ಗ ರೈತರ ಪರವಾಗಿ ನಿಲ್ಲಬೇಕು. ಗುತ್ತಿಗೆದಾರರ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸ ಬೇಕು. ರೈತರಿಗೆ ಪರಿಹಾರ ನೀಡದೇ ಈಗಾಗಲೇ ಅವರ ಜಮೀನಿನಲ್ಲಿ ಪೈಪ್‍ಲೈನ್ ಅಳವಡಿಸಿದ್ದೀರಾ. ಬಡ ರೈತರಿಗೆ ಅನ್ಯಾಯ ಮಾಡಿದರೇ ಸುಮ್ಮನಿರೋಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

      ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಯಲುಸೀಮೆ ಪ್ರದೇಶವಾದ ನಮ್ಮ ಕೊರಟಗೆರೆ, ಮಧುಗಿರಿ, ಪಾವಗಡ ಸೇರಿದಂತೆ ತುಮಕೂರು ಜಿಲ್ಲೆಗೆ ನೀರು ಬರುತ್ತಿರುವ ಒಳ್ಳೆಯ ಕೆಲಸಕ್ಕೆ ಅಡ್ಡಿ ಆಗಬಾರದು ಎನ್ನುವ ಉದ್ದೇಶದಿಂದ ಸುಮ್ಮನಿದ್ದೇವೆ. ನಮ್ಮ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುತ್ತೀರಾ. ತುಮಕೂರು ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ಗಣನೆಗೆ ತೆಗೆದುಕೊಳ್ಳದಿದ್ದರೇ ತಕ್ಕ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಕೆಂಡಾಮಂಡಲ ಆದರು.
ಕೊರೊನಾ ರೋಗದಿಂದ ಜನಸಾಮಾನ್ಯರ ಜೀವನ ಸಂಪೂರ್ಣ ಕುಗ್ಗಿದೆ. ಇಂತಹ ಸಮಯದಲ್ಲಿ ಸರಕಾರಿ ಅಧಿಕಾರಿವರ್ಗ ಬೇಕಾಬಿಟ್ಟಿ ಕೆಲಸ ಮಾಡಿದರೆ ನಿಮ್ಮ ಆಟ ನಡಿಯೋದಿಲ್ಲ. ನಿಮ್ಮೆಲ್ಲರ ವಿರುದ್ದ ಸರಕಾರಕ್ಕೆ ವರದಿ ಕಳಿಸುತ್ತೇನೆ. ಜನಸಾಮಾನ್ಯರ ಕೆಲಸ ಮಾಡಿದರೆ ನಾನು ಎಂದಿಗೂ ನಿಮ್ಮೊಂದಿಗೆ ಇರುತ್ತೇನೆ. ನನ್ನ ಒಳ್ಳೆಯತನ ನಿಮಗೆ ದುರಪಯೋಗ ಆಗದಿರಲಿ ಎಂದು ಎಚ್ಚರಿಕೆ ನೀಡಿದರು.

      ಕೊರೊನಾ ರೋಗ ಮತ್ತು ಅಂಕಿ ಅಂಶದ ಬಗ್ಗೆ ತಪ್ಪು ನೀಡಬೇಡಿ. ಜನಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಿ. ಸರಕಾರದ ಮಾರ್ಗಸೂಚಿ ಪಾಲಿಸದೆ ಮುಂಜಾಗ್ರತೆ ಕ್ರಮಗಳ ಬಗ್ಗೆ ತಯಾರಿ ಮಾಡಿಕೊಳ್ಳದೆ ಇರುವ ಆರೋಗ್ಯ ಇಲಾಖೆ ಟಿಎಚ್‍ಓಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದ ದೊಡ್ಡರಂಗಮ್ಮನಿಂದ ಮತ್ತೆ ಹಿಂಪಡೆದಿರುವ ಕಿರಿಯ ಸಹಾಯಕ ನಿರ್ದೆಶಕ ನಾಗರಾಜು ಮೇಲೆ ಕ್ರಮ ಏಕೆ ಕೈಗೊಂಡಿಲ್ಲ ಎಂದು ಹಿರಿಯ ಸಹಾಯಕಿ ನಿರ್ದೆಶಕಿಗೆ ಪ್ರಶ್ನಿಸಿದರು. ಕರ್ತವ್ಯ ಲೋಪ ಮತ್ತು ಅನುಧಾನ ದುರುಪಯೋಗದ ಬಗ್ಗೆ ತನಿಖೆ ನಡೆಸುವಂತೆ ಸರಕಾರದ ಕಾರ್ಯದರ್ಶಿ ಮತ್ತು ತೋಟಗಾರಿಕೆ ಇಲಾಖೆಗೆ ಪತ್ರ ಬರೆಯುವಂತೆ ತಾಪಂ ಇಓಗೆ ಸೂಚಿಸಿದರು.
ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ ಎತ್ತಿನಹೊಳೆ ಅಧಿಕಾರಿವರ್ಗ ಬಡರೈತರ ಜೀವನದಲ್ಲಿ ಆಟ ಆಡಬಾರದು. ಸರಕಾರದ ಆದೇಶ ಇಲ್ಲದೆ ಸ್ವಾದೀನ ಮಾಡಿಕೊಂಡ ರೈತರ ಜಮೀನುಗಳಿಗೆ ಪರಿಹಾರ ಧನವನ್ನು ನೀಡಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಜಿಪಂ ಎಇಇ ಮಂಜುನಾಥ್‍ಗೆ ಸೂಚಿಸಿದರು.

     ತ್ರೈಮಾಸಿಕ ಸಭೆಯಲ್ಲಿ ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಇಒ ಶಿವಪ್ರಕಾಶ್, ಟಿಹೆಚ್‍ಓ ವಿಜಯಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಜಿಪಂ ಎಇಇ ಮಂಜುನಾಥ್, ಕೃಷಿ ಅಧಿಕಾರಿ ನಾಗರಾಜು, ರೇಷ್ಮೆ ಇಲಾಖೆ ಅಧಿಕಾರಿ ಲಕ್ಷ್ಮೀನರಸಿಪ್ಪ, ನರೇಗಾ ಸಹಾಯಕ ನಿರ್ದೇಶಕ ನಾಗರಾಜು, ಸಿಡಿಪಿಒ ಅಂಬಿಕಾ ಸೇರಿದಂತೆ ಇತರರು ಇದ್ದರು.

(Visited 2 times, 1 visits today)

Related posts

Leave a Comment