ಜಿಲ್ಲೆಯ ಜಲಮೂಲಗಳನ್ನು ಜಿಯೋ ಟ್ಯಾಗಿಂಗ್‍ಗೆ ಒಳಪಡಿಸಲು ಸಂಸದರ ನಿರ್ದೇಶನ!!

ತುಮಕೂರು :

      ಜಿಲ್ಲೆಯಲ್ಲಿರುವ ನದಿ, ಕೆರೆ, ಕಟ್ಟೆ, ಕೊಳವೆಬಾವಿ, ತೆರೆದ ಬಾವಿ. ಹಳ್ಳ, ಕಾಲುವೆ ಸೇರಿದಂತೆ ಎಲ್ಲ ಜಲಮೂಲಗಳನ್ನು ಜಿಯೋ ಟ್ಯಾಗಿಂಗ್‍ಗೆ ಒಳಪಡಿಸಬೇಕೆಂದು ಸಂಸದ ಜಿ.ಎಸ್. ಬಸವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

       ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳ್ಳುವ ವಿವಿಧ ಕಾರ್ಯಕ್ರಮಗಳ ಉಸ್ತುವಾರಿ, ಮೇಲ್ವಿಚಾರಣೆ ಹಾಗೂ ಸಮರ್ಪಕ ಅನುಷ್ಠಾನವನ್ನು ಪರಿಶೀಲಿಸಲು ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ 2574 ಗ್ರಾಮಗಳಲ್ಲಿ ಒಟ್ಟು 2022 ಕೆರೆ-ಕಟ್ಟೆಗಳಿದ್ದು, ಎಲ್ಲ ಮಾಹಿತಿಯನ್ನು ಜಿಯೋ ಟ್ಯಾಗಿಂಗ್‍ಗೊಳಿಸಬೇಕೆಂದರಲ್ಲದೆ ವಿಷಯ ಪರಿಣಿತರ ಅಧ್ಯಯನದನ್ವಯ 4435 ಜಲಸಂಗ್ರಹಗಾರಗಳಿರುವ ಹಿನ್ನೆಲೆಯಲ್ಲಿ ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ಯೋಜನೆಯಿಂದ ತುಂಬುವ ಕೆರೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕೆರೆಗಳಿಗೆ “ಊರಿಗೊಂದು ಕೆರೆ-ಕೆರೆಗೆ ನದಿ ನೀರು” ಯೋಜನೆಯಡಿ ನದಿ ನೀರು ತುಂಬಿಸಲು ಅಗತ್ಯವಿರುವ ನೀರಿನ ಮೂಲಗಳ ಬಗ್ಗೆ ಚರ್ಚಿಸಿದರು.

      ಜಿಲ್ಲೆಯ ಸುಮಾರು 670 ಗ್ರಾಮಗಳಲ್ಲಿ ಯಾವುದೇ ಕೆರೆ-ಕಟ್ಟೆಗಳಿಲ್ಲವೆಂದು ವಿಷಯ ಪರಿಣಿತರ ವರದಿಯಿಂದ ತಿಳಿದು ಬಂದಿದ್ದು, ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡಬೇಕೆಂದು ನಿರ್ದೇಶನ ನೀಡಿದರಲ್ಲದೆ ಜಿಲ್ಲೆಯ 57 ಹೋಬಳಿಯ ತಲಾ ಒಂದು ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಲಗ್ರಾಮ ಕ್ಯಾಲೆಂಡರ್‍ಗಳನ್ನು ಸಿದ್ಧಪಡಿಸಬೇಕು. ಕೇಂದ್ರ ಸರ್ಕಾರದ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಮಿಷನ್ ಅಂತ್ಯೋದಯದ ಮಾರ್ಗಸೂಚಿಯನ್ವಯ ಗುಬ್ಬಿ ತಾಲೂಕಿನ ಕುಂದರನಹಳ್ಳಿ ಗ್ರಾಮವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಸಂಸದರ ಆದರ್ಶ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಸೂಚನೆ ನೀಡಿದರು.

      ಕರ್ನಾಟಕ ದೂರ ಸಂವೇದಿ ಕೇಂದ್ರದ ನಿರ್ದೇಶಕ ಪ್ರಭು ಮಾತನಾಡಿ ಸರ್ಕಾರದ ಆದೇಶದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸುಮಾರು 450 ಜಿಐಎಸ್ ಲೇಯರ್(ಸ್ತರ)ಗಳನ್ನು ನಿಗಧಿಪಡಿಸಿದ್ದು, ಆಯಾ ಇಲಾಖಾ ವ್ಯಾಪ್ತಿಗೆ ಬರುವ ಲೇಯರ್‍ಗಳ ಮಾಹಿತಿಯನ್ನು ನೀಡಿದಲ್ಲಿ ಜಿಯೋ ಟ್ಯಾಗಿಂಗ್ ಮಾಡಲು ನೆರವಾಗುತ್ತದೆ ಎಂದರು.

      ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ನಿಯಮಾವಳಿಯನ್ವಯ ವೃಕ್ಷ ಪ್ರಾಧಿಕಾರವನ್ನು ರಚಿಸಬೇಕು. ಪ್ರಾಥಮಿಕ ಹಂತದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಮರಗಳ ಸಂಖ್ಯೆ, ಮರಗಳ ಜಾತಿ, ಮತ್ತಿತರ ಅಂಕಿ-ಅಂಶಗಳನ್ನು ಸಂಗ್ರಹಿಸಲು ಶೀಘ್ರವೇ ಮರಗಳ ಡಿಜಿಟಲ್ ಗಣತಿ ಕಾರ್ಯ ನಡೆಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ 11 ನಗರ ಸ್ಥಳೀಯ ಸಂಸ್ಥೆಗಳ ತಲಾ ಒಂದು ವಾರ್ಡ್‍ನಲ್ಲಿ ಕೇಂದ್ರ ಸರ್ಕಾರದ ಮಿಷನ್ ಅಂತ್ಯೋದಯ ಮಾದರಿಯಲ್ಲಿ ಸಮೀಕ್ಷೆ ಕೈಗೊಂಡು ವರದಿ ತಯಾರಿಸಬೇಕು ಎಂದು ತಿಳಿಸಿದರು.

      ನಗರದ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ ಲೇಯರ್ ಸಿದ್ಧಪಡಿಸಬೇಕು. ಮುಂದಿನ ದಿಶಾ ಸಭೆಯೊಳಗಾಗಿ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನಾ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಹಾಗೂ ಸಂಸದರು ಸೂಚಿಸಿದಂತೆ ಸಿದ್ಧಪಡಿಸಿದ ಜಲಗ್ರಾಮ ಕ್ಯಾಲೆಂಡರ್ ಮಾಹಿತಿಯನ್ನೊಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಬೇಕು. ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ಬಳಸಿಕೊಂಡು ಮಿಷನ್ ಅಂತ್ಯೋದಯ ವರದಿಯನ್ನು ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ಸಭೆಯಲ್ಲಿ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ಪ್ರೇಮ ಹೆಗ್ಡೆ, ಕೆ.ಎನ್. ಲೋಕೇಶ್ವರಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ರಮೇಶ್ ಹಾಗೂ ಕೃಷ್ಣಮೂರ್ತಿ, ಮುಖ್ಯ ಯೋಜನಾ ಅಧಿಕಾರಿ ಬಸನಗೌಡ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 36 times, 1 visits today)

Related posts