ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ : ಜೆಸಿಎಂ ಆತಂಕ

ತುಮಕೂರು:

      ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಈವರೆಗೆ ಒಟ್ಟು 252 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಭಾನುವಾರ ಒಂದೇ ದಿನದಲ್ಲಿ 31 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.

      ಇದುವರೆಗೆ ವರದಿಯಾದ 252 ಸೋಂಕಿತರ ಪೈಕಿ 61 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಉಳಿದಂತೆ 183 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮರಣ ಹೊಂದಿದ್ದಾರೆ. ಈವರೆಗೆ 20512 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, 1395 ಜನರನ್ನು ನಿಗಾವಣೆಯಲ್ಲಿಡಲಾಗಿದೆ. ಈ ಪೈಕಿ 16879 ಮಾದರಿಗಳು ನೆಗೆಟಿವ್ ಪ್ರಕರಣವೆಂದು ವರದಿಯಾಗಿದೆ. ಪ್ರಸ್ತುತ 566 ಪ್ರಾಥಮಿಕ ಹಾಗೂ 829 ದ್ವಿತೀಯ ಸಂಪರ್ಕಿತರಿದ್ದಾರೆ ಎಂದು ಮಾಹಿತಿ ನೀಡುತ್ತಾ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಈ ಸೋಂಕು ಸಮುದಾಯದಲ್ಲಿ ಹರಡುತ್ತಿರುವುದು ಆಘಾತವನ್ನುಂಟು ಮಾಡಿದೆ. ಇದರಿಂದ ಸೋಂಕು ನಿಯಂತ್ರಣ ನಮ್ಮ ಕೈತಪ್ಪುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತರಬಹದಾಗಿದ್ದು, ಈ ನಿಟ್ಟಿನಲ್ಲಿ ಜನರು ಮುನ್ನೆಚ್ಚರಿಕೆವಹಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.

      ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ 200 ಹಾಸಿಗೆಗಳ ವ್ಯವಸ್ಥೆಯಿದ್ದು, ಹೆಚ್ಚುವರಿಯಾಗಿ 150 ಸೇರಿ ಒಟ್ಟು 350 ಹಾಸಿಗೆಗಳ ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 50 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ಕಾಲೇಜುಗಳಲ್ಲಿ 500 ಹಾಸಿಗೆಗಳು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆಗಳ ವ್ಯವಸ್ಥೆ ಒದಗಿಸಲು ಮನವಿ ಮಾಡಲಾಗಿದೆ ಎಂದರು.

      ಜಿಲ್ಲೆಯಲ್ಲಿ 900 ಕೋವಿಡ್ ಕೇರ್ ಸೆಂಟರ್‍ಗಳಿದ್ದು, ಈ ಸೆಂಟರ್‍ನಲ್ಲಿ ರೋಗ ಲಕ್ಷಣಗಳಿಲ್ಲದ ಅಥವಾ ಸಣ್ಣ-ಪುಟ್ಟ ಖಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ತಗುಲಿದರೆ ಗುಣಪಡಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಉದಾಸೀನ ಮಾಡದೆ ಕೆಮ್ಮು, ನೆಗಡಿ, ಶೀತ, ಜ್ವರ, ಮತ್ತಿತರ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ರೋಗಲಕ್ಷಣಗಳು ಕಂಡುಬಂದ ರೋಗಿಗಳಿಗೆ ಮನೆಯಲ್ಲಿಯೇ ಸ್ವಯಂ ಔಷಧೋಪಚಾರದ ಪ್ರಯೋಗ ಮಾಡಿ ರೋಗ ಉಲ್ಬಣವಾಗಿ ಅಸಹಾಯಕ ಸ್ಥಿತಿ ತಲುಪಿದಾಗ ಆಸ್ಪತ್ರೆಗೆ ಕರೆತರದೆ ರೋಗಿಯನ್ನು ತಕ್ಷಣವೇ ಪರೀಕ್ಷೆಗೊಳಪಡಿಸುವುದರಿಂದ ಅನಾಹುತಗಳನ್ನು ತಡೆಯಬಹುದೆಂದು ತಿಳಿಸಿದರು.

      ಸಾರ್ವಜನಿಕರು ಗೃಹ ದಿಗ್ಬಂಧನ(ಹೋಮ್ ಕ್ವಾರೆಂಟೈನ್)ವನ್ನು ಗಂಭೀರವಾಗಿ ಪರಿಗಣಿಸದೇ ಇರುವುದೂ ಸಹ ಸೋಂಕು ಹೆಚ್ಚಾಗಿ ಹರಡಲು ಕಾರಣವಾಗಿದೆ. ಸಾಂಸ್ಥಿಕ ದಿಗ್ಬಂಧನ(ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್)ಕ್ಕೊಳಗಾಗಲು ಜನರು ಸಹಕರಿಸುತ್ತಿಲ್ಲ. ಹೋಮ್ ಕ್ವಾರೆಂಟೈನ್ ಆದವರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸದಿದ್ದರೆ ಮುಂದೆ ಬಹು ಕ್ಲಿಷ್ಟಕರ ಸಮಸ್ಯೆ ಎದುರಾಗುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಸೋಂಕು ಗ್ರಾಮಗಳಿಗೂ ಕಾಲಿಟ್ಟಿರುವುದರಿಂದ ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯನೇ ಆಗಿದ್ದರೂ ಸಹ ಹೊರಗಿನಿಂದ ಬಂದವರನ್ನು ತಪಾಸಣೆಗೊಳಪಡಿಸದೇ ಮನೆಯಲ್ಲಿಟ್ಟುಕೊಳ್ಳಬಾರದು. ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು. ಇದರಿಂದ ನಿಗಾವಹಿಸಲು ಸಾಧ್ಯವಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕೋವಿಡ್-19 ಸೋಂಕನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.

      ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಬಿಡಬಾರದು. ಮಕ್ಕಳಿಗೆ ರೋಗ ತಗುಲಿದರೆ ನಿಯಂತ್ರಿಸುವುದು ಬಹಳ ಕಷ್ಟ ಎಂದರಲ್ಲದೆ ಸೋಂಕಿತರು ಗುಣಮುಖರಾದ ಕೂಡಲೇ ಎಲ್ಲೆಂದರಲ್ಲಿ ಓಡಾಡದೆ, ಸಮುದಾಯದಲ್ಲಿ ಬೆರೆಯದೆ ಕನಿಷ್ಟ ಒಂದು ವಾರಗಳ ಕಾಲ ಹೋಮ್ ಕ್ವಾರೆಂಟೈನ್‍ಗೊಳಗಾಗಬೇಕು. ಕ್ವಾರೆಂಟೈನ್ ಅವಧಿ 14 ದಿನಗಳ ನಂತರವೂ ಸೋಂಕು ದೃಢಪಟ್ಟ ನಿದರ್ಶನಗಳಿರುವುದರಿಂದ ಮುಂಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದರು.

      ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ ಆರೋಗ್ಯ ಸಿಬ್ಬಂದಿಗಳು ಬಹಳಷ್ಟು ಶ್ರಮಿಸುತ್ತಿದ್ದಾರೆ. ಶುಶ್ರೂಕಿಯರು ಭಯಭೀತರಾಗಿ ಕೆಲಸವನ್ನು ಬಿಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಆರೋಗ್ಯ ಸಿಬ್ಬಂದಿಗಳು ಯಾವುದೇ ಆತಂಕಕ್ಕೊಳಗಾಗದೆ ದೇಶಸೇವೆ ಎಂದು ಪರಿಗಣಿಸಿ ಸಂಕಷ್ಟ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಿವ ಮೂಲಕ ಸೋಂಕಿನ ನಿಯಂತ್ರಣಕ್ಕೆ ಕೈಜೋಡಿಸಬೇಕೆಂದು ಕೋರಿದರು.
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರ ಪೈಕಿ ಉಸಿರಾಟದ ಸಮಸ್ಯೆಯಿಂದ 8 ಮಂದಿ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಹಾಗೂ 8 ಮಕ್ಕಳು ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ಮಾಹಿತಿ ನೀಡಿದರು.

      ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ ನಡೆಸಿದ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಅವರಿಂದ ಸೋಂಕಿತರ, ಪ್ರಾಥಮಿಕ/ದ್ವಿತೀಯ ಸಂಪರ್ಕಿತರ, ಕ್ವಾರೆಂಟೈನ್ ಆದವರ, ಪರೀಕ್ಷೆಗೊಳಗಾದವರ ತಾಲೂಕುವಾರು ಸಂಪೂರ್ಣ ಮಾಹಿತಿ ಪಡೆದರು.

      ಕೋವಿಡ್-19 ಸೋಂಕು ಗ್ರಾಮೀಣ ಪ್ರದೇಶಗಳಲ್ಲೂ ಹರಡುತ್ತಿರುವುದರಿಂದ ಗ್ರಾಮದ ಮುಖ್ಯರಸ್ತೆಗಳಲ್ಲಿ ಬ್ಯಾರಿಕೇಡಿಂಗ್ ಹಾಗೂ ಪೊಲೀಸ್ ಕಾವಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನ ವಂಶಿಕೃಷ್ಣ ಅವರಿಗೆ ಸೂಚನೆ ನೀಡಿದರು.

      ಭಾನುವಾರ ಮೃತಪಟ್ಟ ತುಮಕೂರು ವ್ಯಾಪ್ತಿಯ ವಿನಾಯಕನಗರದ ನಿವಾಸಿ 78 ವರ್ಷದ ವಯೋವೃದ್ಧನ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ಮಾಹಿತಿ ನೀಡುತ್ತಾ ಈ ವೃದ್ಧ ಕೋವಿಡ್ ಸಮಸ್ಯೆಯೊಂದಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗುವಾಗಲೇ ಇವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು ಎಂದು ತಿಳಿಸಿದರು.

      ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆಗಾಗಿ ಸರ್ಕಾರ ನಿಯೋಜಿಸಿರುವ ಮೇಲುಸ್ತುವಾರಿ ತಂಡದ ಮುಖ್ಯಸ್ಥ ಹಾಗೂ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ಸ್ಥಳದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಸೂಚಿಸಲಾದ ರೋಗಿಗಳಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸಿಗೆ ಹಂಚಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

      ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಉಪ ವಿಭಾಗಾಧಿಕಾರಿ ಅಜಯ್, ಇದ್ದರು.

(Visited 9 times, 1 visits today)

Related posts