ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಡೀಸಿ ಸೂಚನೆ

 ತುಮಕೂರು:

      ಜಿಲ್ಲಾ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯ ರಸ್ತೆಗಳಿಗೆ ರಸ್ತೆ ಉಬ್ಬುಗಳಿಗೆ ಬಣ್ಣ ಹಚ್ಚುವ, ಸೂಚನೆ ಫಲಕಗಳನ್ನು ಹಾಕುವ, ಟ್ರಾಫಿಕ್ ಚಿಹ್ನೆಗಳ ಫಲಕಗಳನ್ನು ನಿಲ್ಲಿಸುವ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಲ್ಲದೆ, ಡಿವೈಡರ್‍ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಅವುಗಳಿಗೆ ಬಣ್ಣ ಹಚ್ಚಬೇಕು ಹಾಗೂ ವಾಹನಗಳು ಮುಖ್ಯ ರಸ್ತೆಯಿಂದ ಸೇವಾ ರಸ್ತೆಗೆ ಬರುವ ಮಾರ್ಗದಲ್ಲಿ ಕಡ್ಡಾಯವಾಗಿ ಚಿಹ್ನೆಗಳನ್ನು ಪ್ರದರ್ಶಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಕಾರ್ಮಿಕರು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಹಾಗೂ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

      ಯಾವುದೇ ಒತ್ತಡಕ್ಕೆ ಮಣಿಯದೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮಾಡುವ ಹಾಗೂ ಹೆಲ್ಮೆಟ್ ಧರಿಸದೇ ಇರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ನೋಂದಣಿಯನ್ನು ರದ್ದುಪಡಿಸಬೇಕು. ಅಜಾಗರೂಕ ವಾಹನ ಚಾಲನೆ ಮಾಡುವವರ ಚಾಲನಾ ಅನುಜ್ಞಾ ಪತ್ರವನ್ನು ಅಮಾನತ್ತು ಮಾಡಬೇಕು ಎಂದರಲ್ಲದೆ, ವಾಹನ ಚಲಾಯಿಸುವ 18 ವರ್ಷದೊಳಗಿನ ಮಕ್ಕಳ ಪೋಷಕರ/ ವಾಹನ ಮಾಲೀಕರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

      ನಗರದ ಕ್ಯಾತ್ಸಂದ್ರ ಜಂಕ್ಷನ್‍ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕೂಡಲೇ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ/ ರಾಜ್ಯ ಹೆದ್ದಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಮಾತನಾಡಿ, ಜಿಲ್ಲಾದ್ಯಂತ ಸುಮಾರು 88 ಬ್ಲಾಕ್ ಸ್ಪಾಟ್‍ಗಳಿದ್ದು, ಎಲ್ಲಾ ಅಧಿಕಾರಿಗಳು ಬ್ಲಾಕ್ ಸ್ಪಾಟ್‍ಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರಲ್ಲದೆ, ತುಮಕೂರು ನಗರದಲ್ಲಿರುವ ಪಾರ್ಕಿಂಗ್ ಏರಿಯಾಗಳನ್ನು ಗುರುತಿಸಿ ವಿವರ ನೀಡಬೇಕೆಂದು ಅವರು ತಿಳಿಸಿದರು.

      ಭೀಮಸಂದ್ರದ ರೈಲ್ವೆ ಕ್ರಾಸಿಂಗ್ ಬಳಿ ನಿರ್ಮಿಸಿರುವ ಸೇತುವೆಯ ಸಮೀಪ ಮಳೆ ಬಂದಾಗ ನೀರು ತುಂಬಿಕೊಂಡು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಇದನ್ನು ಸರಿಪಡಿಸುವಂತೆ ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆಯಬೇಕೆಂದರು.

      ರಾಷ್ಟ್ರೀಯ ಹೆದ್ದಾರಿ 206ರ ಕಿಬ್ಬನಹಳ್ಳಿ-ಹಿಂಡಸಗೆರೆ, ತಿಪಟೂರು ಮಾರ್ಗದಲ್ಲಿರುವ ಡಿವೈಡರ್ ಅವೈಜ್ಞಾನಿಕವಾಗಿದ್ದು, ವಾಹನ ಚಾಲನೆಗೆ ತೊಂದರೆಯಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಡಿವೈಡರನ್ನು ವೈಜ್ಞಾನಿಕವಾಗಿ ಸರಿಪಡಿಸಲು ಸೂಚಿಸಿದರು.

      ಸಭೆಯಲ್ಲಿ ಜಿಲ್ಲಾ ಪೊಲೀಸ್ ಪಾಲಿಕೆ ಆಯುಕ್ತ ಭೂಬಾಲನ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 18 times, 1 visits today)

Related posts