ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವುದು ನನ್ನ ಆದ್ಯತೆ: ನೂತನ ಸಚಿವ ಮಾಧುಸ್ವಾಮಿ

 ತುಮಕೂರು:

      ತುಮಕೂರು ಜಿಲ್ಲೆ ಅಭಿವೃದ್ದಿ ಕುರಿತಂತೆ ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ನಾನು ಸಚಿವನಾಗಿದ್ದು, ಕೆರೆಗಳಿಗೆ ನೀರು ಹರಿಸುವುದು ನನ್ನ ಮೊದಲ ಆದ್ಯತೆ ಎಂದು ನೂತನ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

      ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ: ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದು ಹಾಗೂ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

      ಮುಖ್ಯಮಂತ್ರಿಗಳು ಯಾವ ಖಾತೆ ನೀಡಿದರೂ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ತುಮಕೂರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಮೊದಲು ಕೆರೆಗಳಿಗೆ ನೀರು ಹರಿಸುವ ಮಹದಾಸೆ ನನ್ನದಾಗಿದೆ. ಜಿಲ್ಲೆಯಲ್ಲಿ ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಡಿ ಮೂರು ಕಡೆ ನಾಲೆ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಸಾಧ್ಯವಾಗುವಷ್ಟು ನೀರನ್ನು ಶೇಖರಿಸುವುದರಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜನರು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ಹಾಗಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಹೇಮಾವತಿ ನೀರು ಈಗಾಗಲೇ ಜಿಲ್ಲೆಗೆ ಬಂದಿದ್ದು ಸಂತಸದ ವಿಷಯವಾಗಿದೆ ಎಂದರು.
 

(Visited 13 times, 1 visits today)

Related posts