ತುಮಕೂರಿನಲ್ಲಿ ಭೀಕರ ಕೊಲೆ ; ಬೆಚ್ಚಬಿದ್ದ ಜನತೆ!

ತುಮಕೂರು : 

      ನಗರದಲ್ಲಿ ಮತ್ತೊಂದು ಭೀಕರ ಕೊಲೆಯಾಗಿದೆ.

      ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಗಣ್ಣನ ಪಾಳ್ಯದಲ್ಲಿ ಸಂಜೆ 4.30 ಸುಮಾರಿನಲ್ಲಿ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವರಿಬ್ಬರ ಮೇಲೆ ಭೀಕರ ಸ್ವರೂಪದಲ್ಲಿ ಹಲ್ಲೆ ಮಾಡಿದ್ದಾರೆ.

      ಲಾಂಗು ಮತ್ತು ಮಚ್ಚು ಹಾಗೂ ಇತರೆ ಮಾರಕಾಸ್ತ್ರಗಳನ್ನು ಹಿಡಿದುಬಂದ ರೌಡಿಗಳ ಗುಂಪು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್ ಹಾಗೂ ಮಂಜುನಾಥ್ ರವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲಿ ಮಹಾಂತೇಶ್ ಕೊನೆಯುಸಿರೆಳೆದಿದ್ದಾರೆ.

      ಮಹಾಂತೇಶ್ ಮತ್ತು ಚಿನ್ನು ಎನ್ನುವವರ ನಡುವೆ ಆಗಾಗ ಗಲಾಟೆ-ಗದ್ದಲಗಳು ನಡೆಯುತ್ತಿತ್ತು.  ಚಿನ್ನು ಎನ್ನುವ ರೌಡಿ ಕುಖ್ಯಾತ ರೌಡಿ ರೋಹಿತ್ ನ ಶಿಷ್ಯನಾಗಿದ್ದು, ಮುಂದಾಗಬಹುದಾದ ಅನಾಹುತವನ್ನು ಗಮನಿಸಿ ಈ ಹಿಂದೆಯೇ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್ ರವರು ಮಹಾಂತೇಶ ಮತ್ತು ಚಿನ್ನುವನ್ನ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರು. ಆದರೆ, ಆಂತರಿಕವಾಗಿ ಚಿನ್ನು ಮತ್ತು ಮಹಾಂತೇಶನ ನಡುವೆ ವೈರತ್ವ ಹಸಿ-ಹಸಿಯಾಗಿತ್ತು ಎನ್ನಲಾಗುತ್ತಿದೆ. ಹತ್ಯೆಯಾದ ಮಹಾಂತೇಶ ಕಳೆದ 1 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಯಾದ ನಂತರ ತನ್ನ ಪುಂಡಾಟಿಕೆಯನ್ನ ಕಡಿಮೆ ಮಾಡಿಕೊಂಡಿದ್ದ. ಚಿನ್ನುವಿನ ಹಗೆತನದಿಂದ ತನಗೆ ಯಾವುದೇ ಅನಾಹುತವಾಗಬಾರದೆಂದು ಕೆಲವು ಪೊಲೀಸರ ವಿಶ್ವಾಸವನ್ನ ಗಳಿಸಿಕೊಂಡಿದ್ದ.

ನೆನ್ನೆ ನ.6 ರ ಬುಧವಾರ ತುಮಕೂರು ನಗರದಲ್ಲಿರುವ ಎಲ್ಲಾ ರೌಡಿಗಳ ಮನೆ ಮತ್ತು ಅಡಗುತಾಣಗಳ ಮಾಹಿತಿ ಕಲೆಹಾಕಿ ದಿಢೀರ್ ದಾಳಿ ಮಾಡಲಾಗಿತ್ತು. ಆ ದಾಳಿಯ ಸಂದರ್ಭದಲ್ಲಿ ಕುಖ್ಯಾತ ರೌಡಿ ರೋಹಿತ್ ಮತ್ತು ಅವನ ಗ್ಯಾಂಗಿನ ಕೆಲವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದರು. ಬಂಧನದ ಸಮಯದಲ್ಲಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

     ಜೈಲು ಸೇರಿದ್ದ ಕುಖ್ಯಾತ ರೌಡಿಯೊಬ್ಬನಿಗೆ ತನ್ನ ಬಗ್ಗೆ ಸುಳಿವು ನೀಡಿದ್ದು ಮಹಾಂತೇಶನೆಂಬ ಅನುಮಾನ ಉಕ್ಕಿರುವ ಸಾಧ್ಯತೆಗಳಿದೆ. ಏಕೆಂದರೆ ಹತ್ಯೆ ಮಾಡಿದ ಆರೋಪ ಹಾಗೂ ಅನುಮಾನ ಚಿನ್ನು ಮತ್ತು ಅವರ ಗ್ಯಾಗ್ ನ ಮೇಲಿದ್ದು, ಚಿನ್ನು ತನ್ನ ನಾಯಕನ ಆದೇಶವನ್ನ ಮೀರುವಂತಿಲ್ಲ. ಹಾಗಾಗಿ ಚಿನ್ನು ಮತ್ತು ಮಹಾಂತೇಶನ ಹಗೆತನ ಮನಗಂಡ  ಜೈಲು ಸೇರಿದ್ದ ರೌಡಿ ಜೈಲಿನೊಳಗಿದ್ದುಕೊಂಡೇ ಈ ಹತ್ಯೆಗೆ ಸಂಚು ರೂಪಿಸಿ ತನ್ನ ಶಿಷ್ಯ ಚಿನ್ನು ಮತ್ತು ಅವನ ಗ್ಯಾಂಗ್ ನಿಂದ ಈ ಕೊಲೆಯನ್ನ ಮಾಡಿಸಿರಬಹುದೆಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

      ಕಳೆದ ಹತ್ತು ದಿನಗಳಿಂದ ಒಟ್ಟು ಮೂರು ಬರ್ಬರ ಹತ್ಯೆಗಳಾಗಿದ್ದು, ಮೂರು ಕೊಲೆ ಯತ್ನದ ಪ್ರಯತ್ನಗಳು ನಡೆದಿವೆ. ತುಮಕೂರು ಪೊಲೀಸರು ನಿದ್ದೆಗೆಡುವಂತ ಪರಿಸ್ಥಿತಿ ಎದುರಾಗುತ್ತಿದೆ. ಕುಖ್ಯಾತ ರೌಡಿಗಳು ಹಾಗೂ ಅವರ ಸಹಚರರ ಅಟ್ಟಹಾಸಕ್ಕೆ ಕಡಿವಾಣ ಹಾಕದಿದ್ದರೆ ನಗರದ ನಾಗರೀಕರು ನಿರಾತಂಕವಾಗಿ ಜೀವನ ಸಾಗಿಸುವುದು ಕಷ್ಟವಾಗುತ್ತದೆ.

    ಹತ್ಯೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ||ಕೋನ ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ವಿಜಯಲಕ್ಷ್ಮೀ ಇನ್ನಿತರರು ಭೇಟಿ ನೀಡಿ ಹತ್ಯೆ ಮತ್ತು ಹತ್ಯೆಯ ಘೊರತೆಯನ್ನ ಪರಿಶೀಲಿಸಿದ್ದಾರೆ.

ತುಮಕೂರು ನಗರದಲ್ಲಿ ದಿನನಿತ್ಯವೂ ರಕ್ತಪಾತ ನಡೆಯುತ್ತಿದ್ದು, ನಗರ ನಾಗರೀಕರ ನೆಮ್ಮದಿ ಹದಗೆಟ್ಟಿದೆ. ನಡುರಸ್ತೆಯಲ್ಲಿ ಎಲ್ಲೆಂದರಲ್ಲಿ ಲಾಂಗು-ಮಚ್ಚುಗಳ ರೌದ್ರನರ್ತನ, ರೌಡಿಗಳ ಅಟ್ಟಹಾಸ, ರಸ್ತೆ-ರಸ್ತೆಗಳಲ್ಲಿ ಹರಿಯುತ್ತಿರುವ ರಕ್ತಪಾತ, ಪುಂಡರ ಹಾವಳಿ, ವಂಚಕರ ಹಿಂಡು ಹಾಡಹಗಲೇ ರಾಜಾರೋಷವಾಗಿ ಮೆರೆಯುತ್ತಿದೆ ಎಂದರೆ ತುಮಕೂರು ನಗರದ ಪೊಲೀಸರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಮೂರು ಬರ್ಬರ ಹತ್ಯೆಗಳು, ಮೂರು ಕೊಲೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಮೂಲ ಕಾರಣ ತುಮಕೂರು ನಗರಗಳಲಿರುವ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆಯನ್ನ ಪ್ರದರ್ಶಿಸದಿರುವುದು. ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ನಡೆದ ಗ್ಯಾಂಗ್ ವಾರ್ ನ ನಂತರ ನಗರದಲ್ಲೆಲ್ಲಾ ರೌಡಿಗಳ ಮನೆಯ ಮೇಲೆ ಆದಂತಹ ದಾಳಿಗಳು ಕೇವಲ ನೆಪಮಾತ್ರಕ್ಕೆ. ಫೋಟೋಗಳಲ್ಲಿ ಕಾಣುವ ಫೋಜುಗಳು ಠಾಣೆಯಲ್ಲಿ ನಡೆಯುವ ಅಕ್ರಮಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ನೆನ್ನೆ ಸಂಜೆ ನಡೆದ ಮಹೇಶನ ಹತ್ಯೆಗೆ ಬಹು ಮುಖ್ಯ ಕಾರಣ ಪೊಲೀಸರ ಅಸಹಾಯಕತೆ ಮತ್ತು ಅಸಹಕಾರ. ರೋಹಿತ ಮನೆಯಲ್ಲಿ ಅಡಗಿರುವ ಮಾಹಿತಿಯನ್ನು ರವಾನಿಸಿದ ಮಹಾಂತೇಶನ ವಿಚಾರವನ್ನ ನಗರ ಠಾಣೆಯಲ್ಲಿ ಕುಖ್ಯಾತ ರೌಡಿ ರೋಹಿತನಿಗೆ ಹೇಳುವ ಅನಿವಾರ್ಯತೆಯಾದರೂ ಇತ್ತೇ… ಅವನು ಹೇಳಿದ ಆ ಒಂದು ಮಾಹಿತಿ ವiಹಾಂತೇಶನ ಕೊಲೆಗೆ ಮುಖ್ಯ ಕಾರಣವಾಗಿತ್ತು. ಪೊಲೀಸರಿಗೆ ನೀಡಿದ್ದ ಗೌಪ್ಯ ಮಾಹಿತಿಯನ್ನು ಹೊರಹಾಕಬಾರದು ಎಂಬು ಕನಿಷ್ಟ ಸೌಜನ್ಯವೂ ಇಲ್ಲದ ಕೆಲವರು ಪರೋಕ್ಷವಾಗಿ ಮಹಾಂತೇಶನ ಹತ್ಯೆಗೆ ಕಾರಣೀಭೂತರಾಗಿದ್ದಾರೆ. ಹತನಾದ ಮಹಾಂತೇಶನ ಆಧಾರದ ಮೇಲೆ ರೋಹಿತನ ಮನೆಗೆ ರೋಹಿತನನ್ನು ಬಂಧಿಸಲು ಕೇವಲ ಕ್ರೈಂ ಪೊಲೀಸರಲ್ಲದೇ , ಇನ್ಸ್‍ಪೆಕ್ಟರ್, ಸಬ್ ಇನ್ಸ್‍ಪೆಕ್ಟರ್‍ಗಳು, ಡಿವೈಎಸ್‍ಪಿ ನಂತರದ ಅಧಿಕಾರಿಗಳು ಆತನನ್ನ ಬಂಧಿಸಲು ಹೋದದ್ದು ಇಲಾಖೆಯ ಮತ್ತೊಂದು ದುರಂತ. ಒಬ್ಬ ರೌಡೀಶೀಟರ್‍ನನ್ನು ಬಂಧಿಸಲು ಅಷ್ಟೊಂದು ಜನ ಅಧಿಕಾರಿಗಳು ಮತ್ತು ಸಿಬ್ಬಂಧಿ ತೆರಳುವ ಅನಿವಾರ್ಯತೆ ಇತ್ತೇ.. ಎಲ್ಲರೂ ಹೋಗಿ ಬಂಧಿಸಿ ಕರೆತರುವ ಸಂದರ್ಭದಲ್ಲಿ ರೌಡಿ ರೋಹಿತನ ಮನೆಯ ಸಿಸಿ ಕ್ಯಾಮೆರಾದ ಡಿವಿಆರ್‍ನ್ನು ಕಳಚಿಕೊಂಡು ಬಂದದ್ದು ಯಾವ ಪುರುಷಾರ್ಥಕ್ಕೆ..ರೋಹಿತನ ಜೊತೆ ಆತನ ಇಡೀ ಸಹಚರರನ್ನು ಬಂಧಿಸದಿರುವುದು ಯಾವ ಕಾರಣಕ್ಕೆ .. ಠಾಣೆಗೆ ಕರೆತಂದ ರೋಹಿತನಿಗೆ ಲಾಠಿ ರುಚಿ ತೋರಿಸದೇ ಸತ್ಕರಿಸಿದ್ದು ಯಾವ ಪುರುಷಾರ್ಥಕ್ಕೆ.. ಪೊಲೀಸರ ಬಗ್ಗೆ ಕಿಂಚಿತ್ತೂ ಭಯವಿಲ್ಲದೇ ಅನಾಯಾಸವಾಗಿ ಜೈಲು ಸೇರಿದ ರೋಹಿತನ ಕೊಲೆಗೆ ಜೈಲಿನಲ್ಲಿದ್ದುಕೊಂಡೇ ಸಂಚು ರೂಪಿಸಿದ. ಸಂಚು ಮಿಂಚಾಗಿ ಕೇವಲ 24 ಗಂಟೆಗಳೊಳಗಾಗಿ ಮಹಾಂತೇಶನನ್ನ ಬಲಿ ತೆಗೆದುಕೊಂಡದ್ದು, ಪೊಲೀಸರ ನ್ಯೂನತೆಗೆ ತಾಜಾ ಉದಾಹರಣೆಯಲ್ಲವೇ.. ರೋಹಿತನು ಪೊಲೀಸರ ವಶದಲ್ಲಿದ್ದಾಗ ಆಧರಿಸಿ, ಸತ್ಕರಿಸಿದ್ದು ರೋಹಿತನ ಜಾತಿಯ ಬೆಂಬಲವೇ.. ಅಥವಾ ರೋಹಿತನ ಜಾತಿಯ ನಂಟು ನಗರದ ಕೆಲವು ಪೊಲೀಸ್ ಅಧಿಕಾರಿಗಳ ಪ್ರೀತಿ ಪಾತ್ರಕ್ಕೆ ಕಾರಣವಾಯಿತೇ ಎನ್ನುವುದು ಕೇವಲ ಪ್ರಶ್ನೆಯಾಗೇ ಉಳಿದಿದೆ. ನಗರದಲ್ಲಾಗುತ್ತಿರುವ ಎಲ್ಲಾ ಅಪರಾಧಗಳಿಗೂ ತುಮಕೂರು ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ಅದಕ್ಷತೆ ಮೂಲಕ ಕಾರಣವೆಂದು ಹೇಳಲಾಗುತ್ತಿದೆ. ಈ ಕೊಲೆ ನಗರ ವೃತ್ತ ನಿರೀಕ್ಷಕ ಬಿ.ನವೀನ್ ರವರ ಕಾರ್ಯವೈಖರಿಯನ್ನ ಎತ್ತಿ ತೋರಿಸುತ್ತದೆ

(Visited 4,597 times, 1 visits today)

Related posts