ತುಮಕೂರು: ನಗರದ ಹಿರೇಮಠದ ಕರ್ತೃ ಮಲ್ಲಿಕಾರ್ಜುನಸ್ವಾಮಿಯ ಪುನ: ಪ್ರತಿಷ್ಠಾಪನಾ ಮಹೋತ್ಸವ ಶ್ರೀ ಮಠದ ಅಧ್ಯಕ್ಷರಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಭಾನುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ವಿವಿಧ ಮಠಗಳ ಮಠಾಧೀಶರು, ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಇದರ ಅಂಗವಾಗಿ ಮಠದಲ್ಲಿ ಮೂರು ದಿನ ಕಾಲ ನಡೆದ ವಿವಿಧ ಧಾರ್ಮಿಕ, ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿತ್ತು. ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉದ್ಘಾಟನೆ ಮಾಡಲಾಯಿತು. ಧಾರ್ಮಿಕ ಮಹಾಸಭೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಭಾನುವಾರ ಬೆಳಿಗ್ಗೆ ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಅಮೃತಾಸ್ತದಿಂದ ಮಲ್ಲಿಕಾರ್ಜುನಸ್ವಾಮಿ, ನಂದೀಶ್ವರ ಸ್ವಾಮಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿತು. ನೇತ್ರೋನ್ಮೀಲನ ಮತ್ತು ಗೋಪುರ ಕಲಶಾರೋಹಣ, ಕುಂಭಾಭಿಷೇಕ, ನಂತರ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ, ಜಯಾದಿ ಹೋಮಗಳು, ನಂತರ ಮಹಾಪೂರ್ಣಾಹುತಿ, ರಾಜೋಪಚಾರಸಹಿತ ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿತ್ತು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ನಿಂಬಾಳ ಮಠದ ಜಡೆಯ ಶಾಂತಲಿAಗೇಶ್ವರ ಸ್ವಾಮೀಜಿ ಆಗಮಿಸಿ ಮಲ್ಲಿಕಾರ್ಜುನ ಸ್ವಾಮಿ, ನಂದೀಶ್ವರನಿಗೆ ಪೂಜೆ ಸಲ್ಲಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ತುಮಕೂರು ವಿಶ್ವವಿದ್ಯಾಲಯ ಉಪಕುಲಪತಿ ವೆಂಕಟೇಶ್ವರಲು, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಉಪಾಧ್ಯಕ್ಷ ಟಿ.ಬಿ.ಹರೀಶ್, ಖಜಾಂಚಿ ಜಿ.ಕೆ.ಸ್ವಾಮಿ, ಕಾರ್ಯದರ್ಶಿ ಶಶಿಧರ್, ಮುಖಂಡರಾದ ಕೋರಿ ಮಂಜುನಾಥ್, ಸಿ.ವಿ.ಮಹದೇವಯ್ಯ, ಮಹೇಶ್ ಶಿಕ್ಷಣ ಸಂಸ್ಥೆ, ಸಿಟಿ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಎನ್.ಶಶಿಧರ್, ಬಾವಿಕಟ್ಟೆ ಮಂಜುನಾಥ್, ಬಸವೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್, ಬಾವಿಕಟ್ಟೆ ಗಣೇಶ್, ನಟರಾಜು, ಪ್ರಭು, ನಟರಾಜ ಶೆಟ್ಟಿ, ತೀತಾ ಮಲ್ಲಿಕಾರ್ಜುನಯ್ಯ, ಕೆ.ಜೆ.ರುದ್ರಪ್ಪ, ನಿಶ್ಚಲ್, ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಗಮಿಸಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ವಿವಿಧ ದಾನಿಗಳನ್ನು ಸನ್ಮಾನಿಸಿ ಗೌರವಿಸಿದರು.