ದೆಹಲಿ: 

      ಕೇರಳ ಸರ್ಕಾರ ಮುಂದಿನ ದಿನಗಳಲ್ಲಿ ವಿಶೇಷ ಭದ್ರತೆಯೊಂದಿಗೆ 10-50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಬೆಟ್ಟ ಹತ್ತಲು ಪ್ರತ್ಯೇಕ ವ್ಯವಸ್ಥೆ ಮಾಡುತ್ತದೆ ಎಂದು ಪಿಣರಾಯಿ ವಿಜಯನ್​ ಅವರು ಭರವಸೆ ನೀಡಿದ್ದಾರೆ.

      ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಶಬರಿಮಲೆ ಪ್ರವೇಶಕ್ಕೆ ಪೊಲೀಸ್​​ ಭದ್ರತೆ ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಸಿಎಂ ಪಿಣರಾಯಿ ವಿಜಯನ್​​​ ಅವರು ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್​​ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸದೇ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

      ಈಗಾಗಲೇ ನಾನು ನಮ್ಮ ಯೋಜನೆ ಬಗ್ಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಹಿರಿಯ ಅರ್ಚಕರೊಂದಿಗೆ ಮಾತಾಡಿದ್ದೇನೆ. ಈ ವಿಚಾರವನ್ನು ಎಲ್ಲಾ ಪಕ್ಷಗಳ ಮುಖಂಡರೊಂದಿಗೂ ಒಮ್ಮೆ ಚರ್ಚೆ ಮಾಡಲಾಗುವುದು. ಕಾಂಗ್ರೆಸ್​​ ಮತ್ತು ಬಿಜೆಪಿ ಹೊರತುಪಡಿಸಿ ನಮ್ಮ ಸರ್ಕಾರದ ಎಲ್ಲಾ ಪಕ್ಷಗಳು ಆದೇಶ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದರು.

      ಶಬರಿಮಲೆ ಭಕ್ತರೆಲ್ಲ ದಯವಿಟ್ಟು ಅರ್ಥಮಾಡಿಕೊಂಡು ಸಹಕರಿಸಬೇಕು. ಇದು ಕಾನೂನಿಗೆ ಬೆಲೆ ಕೊಡುವ ನೆಲ, ಪ್ರಜಾಪ್ರಭುತ್ವವೇ ಈ ನಾಡಿನ ಸೌಂದರ್ಯ. ಭಕ್ತರ ನಂಬಿಕೆಗಳು ಮಹಿಳೆಯರ ಮೂಲಭೂತ ಹಕ್ಕುಗಳಿಗಿಂತ ದೊಡ್ಡದಾಗಲು ಸಾಧ್ಯವಿಲ್ಲ. ನಮಗೆ ಬೇರೆ ಯಾವುದೇ ದಾರಿಯಿಲ್ಲ, ನ್ಯಾಯಲಯದಿಂದ ಬಂದ ಆದೇಶವನ್ನು ಪಾಲಿಸಲೇಬೇಕಾದುದು ನಮ್ಮ ಕರ್ತವ್ಯ. ನಮ್ಮ ಉದ್ದೇಶವನ್ನು ಅರ್ಥಮಾಡಿಕೊಳ್ಳಿ ಎಂದು ಸಿಎಂ ಅವರು ಅಯ್ಯಪ್ಪ ಭಕ್ತರಲ್ಲಿ ಮನವಿ ಮಾಡಿದರು.

(Visited 8 times, 1 visits today)