ಚಿಕ್ಕನಾಯಕನಹಳ್ಳಿ :

     ಅಧಿಕಾರಿಗಳ ನಿರ್ಲಕ್ಷತನವೋ, ಜನಪ್ರತಿನಿಧಿಗಳ ಅಸೆಡ್ಡೆಯೋ ಗೊತ್ತಿಲ್ಲ, ಪಟ್ಟಣದ ಪುರಸಭೆಯಲ್ಲಿ ಮಾತ್ರ ಬೇಜವಬ್ದಾರಿಯಿಂದ ಪಟ್ಟಣದ 10ನೇ ವಾರ್ಡ್‍ನಲ್ಲಿ ಕೊಳವೆ ಮಾರ್ಗದಲ್ಲಿ ಕೊಳಚೆ ನೀರು ಹಾಗೂ ಹುಳವಿರುವ ನೀರು ಸರಬರಾಜಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಪಟ್ಟಣದಲ್ಲಿ ಪ್ರಸಕ್ತ ಎಲ್ಲಾ ವಾರ್ಡ್‍ಗಳಿಗೂ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ, ಎಲ್ಲಾ ಮನೆಗಳಿಗೂ ಕೊಳಾಯಿ ಮೂಲಕ ಹಾಗೂ ಬೀದಿ ನಲ್ಲಿ ಮೂಲಕ ಪಟ್ಟಣದ ಜನತೆಗೆ ನೀರು ಸರಬರಾಜಾಗುತ್ತಿದೆ, ಸರಬರಾಜಾಗುತ್ತಿರುವ ನೀರನ್ನು ಜನತೆ ಕುಡಿಯಲು ಹಾಗೂ ಮನೆಯ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಶುಕ್ರವಾರ ಬ್ರಾಹ್ಮಣರ ಬೀದಿಯಲ್ಲಿ ಮುಂಜಾನೆ 6ಗಂಟೆಗೆ ನೀರು ಹಾಯಿಸಲಾಗಿದೆ ಆದರೆ ಬಂದಿರುವ ನೀರಿನಲ್ಲಿ ಪೂರ್ಣ ಕೊಳಚೆಯುಕ್ತ ನೀರು ಸರಬರಾಜಾಗಿದೆ, ನೀರಿನ ಜೊತೆಯಲ್ಲಿ ಹುಳುಗಳು ಸಹ ಬಂದಿವೆ, ಕೊಳಚೆ ನೀರನ್ನು ನೋಡದೆ ಜನರು ತೊಟ್ಟಿಯೊಳಗೆ ನೀರನ್ನು ಹಾಯಿಸಿದ್ದರಿಂದ ಈ ಮೊದಲು ಮನೆಯ ತೊಟ್ಟಿಯೊಳಗಿದ್ದ ನೀರೂ ಸಹ ಪೂರ್ಣ ಕೊಳಚೆಯಾಗಿ ನೀರನ್ನೆಲ್ಲಾ ಹೊರಗೆ ಚೆಲ್ಲಲಾಗಿದೆ, ಪುರಸಭೆಯಿಂದ ಸರಬರಾಜಾಗಿರುವ ಈ ಕೊಳಚೆ ನೀರನ್ನು ಬಿಡುವಾಗಲೇ, ಪುರಸಭೆ ಇಂಜನಿಯರ್ ಹಾಗೂ ನೀರುಗಂಟಿಗಳು ಎಚ್ಚರ ವಹಿಸಬೇಕಿತ್ತು, ಇದು ಅವರ ಬೇಜವಬ್ದಾರಿತನಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ದೂರಿದ್ದಾರೆ.

      ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೊಳವೆ ಮಾರ್ಗಕ್ಕೆ ಜೋಡಿಸಿರುವ ಗೇಟ್‍ವಾಲ್ವ್‍ಗಳು ಹಾಳಾಗಿದ್ದು ಗೇಟ್‍ವಾಲ್ವ್‍ಗಳಲ್ಲಿ ನೀರು ಹೊರಬಂದು ನಂತರ ನೀರು ಅದೇ ಗೇಟ್‍ವಾಲ್ವ್ ಮುಖಾಂತರ ಪಟ್ಟಣಕ್ಕೆ ನೀರು ಹರಿಯುತ್ತದೆ, ಇದರಿಂದ ಸಾರ್ವಜನಿಕರಿಗೂ ನೀರನ್ನು ಕುಡಿಯಲು ಹಿಂದು, ಮುಂದು ನೋಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನೇ ಆಶ್ರಯಿಸಬೇಕಾಗಿದೆ.

      ಪಟ್ಟಣದ ಬಗ್ಗೆ ಶಾಸಕರ ಆಸಕ್ತಿ ಕಡಿಮೆ ಆಯಿತೆ ? ಪಟ್ಟಣದಲ್ಲಿ ಸರಬರಾಜು ಆಗುತ್ತಿರುವ ನೀರು ಕೊಳಚೆಯಾಗಿ ಹರಿಯುತ್ತಿರುವುದರಿಂದ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಹೈರಾಣಾಗುತ್ತಿದ್ದಾರೆ, ಪಟ್ಟಣದ ಬಗ್ಗೆ ಹಾಲಿ ಶಾಸಕರು ಮೊದಲು ತೋರುತ್ತಿದ್ದ ಇಚ್ಚಾಶಕ್ತಿ ಮಾಯವಾಗಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

      ಸ್ಥಳೀಯ ಶಾಸಕರು ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನಾ ಬೆಳ್ಳಂಬೆಳಗ್ಗೆ ಪಟ್ಟಣದ ವಾರ್ಡ್‍ಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸುತ್ತಿದ್ದರು, ಚುನಾವಣೆ ನಂತರ ವಾರ್ಡ್‍ಗಳಿಗೆ ಭೇಟಿ ನೀಡುತ್ತಿಲ್ಲ, ಪುರಸಭೆಯಲ್ಲಿ ಆಡಳಿತ ರಚಿತವಾಗಿಲ್ಲ, ಶಾಸಕರು ಪಟ್ಟಣದ ಜವಬ್ದಾರಿ ಹೊತ್ತು ಇಲ್ಲಿ ಉಂಟಾಗುತ್ತಿರುವ ಸಮಸ್ಯೆ ಅರಿಯದೆ ಇರುವುದು ದುರದೃಷ್ಠಕರ, ಪಟ್ಟಣದ ಜನತೆಯ ಯೋಗಕ್ಷೇಮಕ್ಕಾಗಿಯಾದರೂ ಶಾಸಕರು ಪುರಸಭೆಯತ್ತ ಆಗಮಿಸಿ ಸಮಸ್ಯೆ ನಿವಾರಿಸುವಂತೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

(Visited 38 times, 1 visits today)