ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ನಡವಳಿಕೆ ಮುಖ್ಯ : ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ

ಗುಬ್ಬಿ :

      ಶಿಕ್ಷಕ ವರ್ಗದಲ್ಲಿ ಕಾಣುವ ಸೃಜನಶೀಲತೆ ವಿದ್ಯಾರ್ಥಿ ವೃಂದದಲ್ಲಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ನಡವಳಿಕೆ ಮುಖ್ಯವಾಗಿದೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.

      ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಚಿಣ್ಣರ ಚಿಲುಮೆ ವಲಯ ಮಟ್ಟದ ನಾಟಕೋತ್ಸವವನ್ನು ಉದ್ಘಾಟಿಸಿದ ಅವರು ಹಣ ಗಳಿಕೆಯಿಂದಲೇ ಸಂತೋಷ ಸಿಗುತ್ತದೆ ಎಂಬ ಕಲ್ಪನೆಯಲ್ಲಿ ಇಂದಿನ ಜನಾಂಗ ಸಂಗೀತ, ಸಾಹಿತ್ಯ, ಕಲೆ ಹಾಗೂ ಕ್ರೀಡೆಯಿಂದ ದೂರವಾಗಿ ಬದುಕಿನ ಸಂತಸದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ ಎಂದರು.

      ರಂಗಭೂಮಿಯಲ್ಲಿ ಸಮಾಜ ನಿರ್ಮಾಣ ಎಂಬ ಅಂಶ ಅಡಗಿದೆ. ಈ ಹಿಂದೆ ನಮ್ಮ ಮನರಂಜನೆಯಾಗಿದ್ದ ನಾಟಕಗಳು ಮುಂದೆ ಜಾಗೃತಿ ಮೂಡಿಸುವ ಉತ್ತಮ ಸಂದೇಶ ಒದಗಿಸುವ ವೇದಿಕೆಯಾಗಿದೆ. ಇಂತಹ ರಂಗಭೂಮಿಯ ಅಭಿರುಚಿಯನ್ನ ಇವತ್ತಿನ ಮಕ್ಕಳಲ್ಲಿ ಮೂಡಿಸಬೇಕಿದೆ. ಈ ಕಾರ್ಯವನ್ನ ಗುಬ್ಬಿ ವೀರಣ್ಣ ಟ್ರಸ್ಟ್ ನಿರಂತರವಾಗಿ ನಡೆಸಿದೆ ಎಂದು ಶ್ಲಾಘಿಸಿದರು.

      ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಯ್ಯ ಮಾತನಾಡಿ ಮಕ್ಕಳಲ್ಲಿ ಪರಿಣಾಮಕಾರಿಯಾಗಿ ಮೆಸೇಜ್ ನೀಡುವ ನಾಟಕಗಳ ಬಗ್ಗೆ ತರಬೇತಿಯನ್ನ ಗ್ರಾಮೀಣ ಮಕ್ಕಳಿಗೆ ನೀಡಬೇಕಿದೆ. ಶಾಲೆಗಳಲ್ಲಿ ಹಲವು ಪ್ರತಿಭೆಗಳು ಎಲೆ ಮರೆಯ ಕಾಯಿಗಳಂತೆ ಅಡಗಿದೆ. ಇಂತಹ ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ವೇದಿಕೆ ಕೆಲಸವನ್ನ ಶಾಲಾ ಶಿಕ್ಷಕರು ಮಾಡಬೇಕಿದೆ ಎಂದರು.

      ನಾಟಕೋತ್ಸವ ಸಂಚಾಲಕ ತಿಪಟೂರು ಸತೀಶ್ ಮಾತನಾಡಿ ಮಕ್ಕಳಲ್ಲಿ ನಾಟಕದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಂದಲೇ ರಚಿತವಾದ ನಾಟಕವನ್ನ ಪ್ರದರ್ಶಿಸಲಾಗುತ್ತಿದೆ. ನಾಟಕಗಳನ್ನು ನೋಡುವ ಮಕ್ಕಳಲ್ಲಿ ರಂಗ ಚಟುವಟಿಕೆ ಬಗ್ಗೆ ಆಸಕ್ತಿ ಮೂಡುವ ಸಾಧ್ಯತೆ ಇದೆ. ಹಾಗಾಗಿ ಎಲ್ಲಾ ಶಾಲಾ ಮಕ್ಕಳಿಗೆ ನಾಟಕವನ್ನು ತೋರಲಾಗುತ್ತದೆ ಎಂದರು.

      ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಮೆಳೇಹಳ್ಳಿ ವಜ್ರಪ್ಪ, ಶಿಕ್ಷಕ ಜಗದೀಶ್, ಟ್ರಸ್ಟಿ ಕಾಡಶೆಟ್ಟಿಹಳ್ಳಿ ಸತೀಶ್ ಇತರರು ಇದ್ದರು.

(Visited 18 times, 1 visits today)

Related posts