ತಿಪಟೂರು-ಹುಳಿಯಾರು ರಸ್ತೆ ದುರಸ್ಥಿಗೆ ಒತ್ತಾಯ

ತಿಪಟೂರು:

     ತಿಪಟೂರಿನಿಂದ ಹಾಲ್ಕುರಿಕೆ ಮಾರ್ಗವಾಗಿ ಹುಳಿಯಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿ ಗೊಟರುಗಳಿಂದ ಕೂಡಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ರಸ್ತೆಯನ್ನು ಸರಿಪಡಿಸಬೇಕೆಂದು ಈ ಭಾಗದ ಹಳ್ಳಿಗಳ ಸಾರ್ವಜನಿಕರು ಹಾಗೂ ವಾಹನ ಸವಾರರು ಲೋಕಪಯೋಗಿ ಇಲಾಖೆ ಹಾಗೂ ಶಾಸಕರನ್ನು ಒತ್ತಾಯಿಸಿದ್ದಾರೆ.

      ಈ ರಸ್ತೆಯ ಮೂಲಕ ಟಿ.ಎಂ. ಮಂಜುನಾಥನಗರ, ಬೈರನಾಯ್ಕನಹಳ್ಳಿ, ಗೆದ್ಲೇಹಳ್ಳಿ ಗೊಲ್ಲರಹಟ್ಟಿ, ಆಲೂರು, ಬೈರಾಪುರ ಗೇಟ್, ಹರಿಸಮುದ್ರ, ಹಾಲ್ಕುರಿಕೆ, ಮತ್ತಿಘಟ್ಟ ಮತ್ತಿತರ ಗ್ರಾಮಗಳಿಗೆ ಹೋಗಬೇಕಾದರೆ ಇದೇ ರಸ್ತೆ ಮುಖ್ಯವಾಗಿದೆ. ಆದರೆ ರಸ್ತೆ ಬಹಳಷ್ಟು ಕಡೆಗಳಲ್ಲಿ ಹಾಳಾಗಿದ್ದು, ಉದ್ದುದ್ದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಹರಸಾಹಸ ಮಾಡಿಕೊಂಡು ವಾಹನಗಳನ್ನು ಚಲಾಯಿಸಬೇಕಾಗಿದೆ. ನೂರಾರು ಲಘು ಹಾಗೂ ಭಾರಿ ವಾಹನಗಳು ಇಲ್ಲಿ ಸಂಚರಿಸುತ್ತಿರುವುದರಿಂದ ಪ್ರತಿನಿತ್ಯ ಒಂದಲ್ಲೊಂದು ಅವಘಡ, ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಇದೂ ಸಾಲದೆಂದು ರಸ್ತೆಯ ಎರಡೂ ಬದಿಗಳಲ್ಲಿ ಗಿಡ-ಗೆಂಟೆಗಳಿಂದ ಕೂಡಿದ ಬೇಲಿಗಳು ಬೆಳೆದಿದ್ದು, ತಿರುವುಗಳಲ್ಲಿ ಬರುವ ವಾಹನಗಳೇ ಕಾಣಿಸುವುದಿಲ್ಲ.
ದಿನನಿತ್ಯ ನೂರಾರು ಬಸ್‍ಗಳು, ಸಾಕಷ್ಟು ಲಾರಿ, ಟ್ಯಾಂಕರ್, ಆಟೋಗಳು ಸಾವಿರಾರು ಸಂಖ್ಯೆಯಲ್ಲಿ ಬೈಕ್ ಸವಾರರು, ವಿದ್ಯಾರ್ಥಿಗಳು ಸಂಚರಿಸುವ ಈ ರಸ್ತೆಯಲ್ಲಿ ಹಿಡಿ ಶಾಪ ಹಾಕಿಕೊಂಡೆ ಓಡಾಡುತ್ತಿದ್ದಾರೆ.

      ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ದುರಸ್ಥಿ ಕಾಮಗಾರಿ ಕೈಗೊಳ್ಳಬೇಕು ಹಾಗೂ ರಸ್ತೆ ಬದಿಗಳಲ್ಲಿರುವ ಬೇಲಿಯನ್ನು ತೆರವುಗೊಳಿಸಿ ವಾಹನ ಸವಾರರ ಸುರಕ್ಷಿತ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಈ ಭಾಗದ ಗ್ರಾಮಗಳ ಸಾರ್ವಜನಿಕರ ಪರವಾಗಿ ಗೆದ್ಲೇಹಳ್ಳಿ ದಿನೇಶ್ ಒತ್ತಾಯಿಸಿದ್ದಾರೆ.

(Visited 31 times, 1 visits today)

Related posts

Leave a Comment