ದೌರ್ಜನ್ಯ ಮುಕ್ತ ಬಾಲ್ಯ: ಮಕ್ಕಳ ಭವಿಷ್ಯ ಉಜ್ವಲ

  ತುಮಕೂರು:

      ದೌರ್ಜನ್ಯ ಮುಕ್ತ ಬಾಲ್ಯದಿಂದ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್ ಅಭಿಪ್ರಾಯಪಟ್ಟರು.

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ನರಸಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಬಾಲನ್ಯಾಯ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳನ್ನು ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸುವಲ್ಲಿ ಪೋಷಕರು, ಶಿಕ್ಷಕರು ಹಾಗೂ ಅಧಿಕಾರಿಗಳು ಅನುವು ಮಾಡಿಕೊಡಬೇಕು. ಬಾಲ್ಯದಲ್ಲಿ ಮಕ್ಕಳ ಹಕ್ಕುಗಳು ಸದುಪಯೋಗವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. 

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಎಲ್. ಜಿನರಾಳ್ಕರ್ ಮಾತನಾಡಿ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ದತಿಯಂತಹ ಅನಿಷ್ಟ ಆಚರಣೆಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅವುಗಳ ನಿವಾರಣೆಗಾಗಿ ಸರ್ಕಾರ ಹಲವಾರು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದೆ. ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿ ತಮಗಾಗಿಯೇ ಇರುವ ವಿಶೇಷ ಕಾರ್ಯಕ್ರಮ ಹಾಗೂ ಕಾನೂನುಗಳನ್ನು ಅವಶ್ಯಕ ಸಂದರ್ಭದಲ್ಲಿ ಬಳಸಿಕೊಳ್ಳಬೇಕಲ್ಲದೆ ಇತರೆ ಮಕ್ಕಳಿಗೂ ಮಾಹಿತಿಯನ್ನು ನೀಡಬೇಕೆಂದು ಕಿವಿಮಾತು ಹೇಳಿದರು.

      ಬಾಲನ್ಯಾಯ ಮಂಡಳಿ ಸದಸ್ಯೆ ಆಶಾ ಮಾತನಾಡಿ, ಹದಿಹರೆಯದಲ್ಲಿ ಮಕ್ಕಳು ತಿಳಿದೋ, ತಿಳಿಯದೆಯೋ ತಪ್ಪುಗಳನ್ನು ಮಾಡುತ್ತಾರೆ. ಆದರೆ ಮಾಡಿರುವ ತಪ್ಪುಗಳನ್ನು ಪುನರಾವರ್ತನೆ ಮಾಡದೇ ಸನ್ಮಾರ್ಗದಲ್ಲಿ ನಡೆಯಲು ಗುರುಹಿರಿಯರ ಮಾರ್ಗದರ್ಶನ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮದಲ್ಲದ ತಪ್ಪಿಗೆ ಕಾನೂನು ಸಂಘರ್ಷಕ್ಕೆ ಒಳಗಾಗುವ ಪ್ರಸಂಗಗಳೂ ಸಹ ನಡೆಯುತ್ತಿದ್ದು, ಮಕ್ಕಳು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.

      ಬಾಲನ್ಯಾಯ ಮಂಡಳಿ ಸದಸ್ಯೆ ಶಾಲಿನಿ ಮಾತನಾಡಿ ಸರ್ಕಾರವು ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಸತಿಯುತ ಶಾಲೆಗಳನ್ನು ಆರಂಭಿಸಿದ್ದು, ಮಕ್ಕಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ತಿಳಿಸಿದರು.

      ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ, ಪೋಕ್ಸೊ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಕುರಿತು ಮಾಹಿತಿಯನ್ನು ನೀಡುತ್ತಾ, ಮಕ್ಕಳು ಸಂಕಷ್ಟದಲ್ಲಿದ್ದಾಗ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಛೇರಿ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಬೇಕೆಂದು ತಿಳಿಸಿದರು. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಮನಸ್ಸು ಹಾಗೂ ಭವಿಷ್ಯ ಮುರುಟಿಹೋಗುವ ಸಾಧ್ಯತೆಯಿದ್ದು, ಮಕ್ಕಳು ಅದಕ್ಕೆ ಅವಕಾಶ ನೀಡದೇ ತಮ್ಮ ಮೇಲೆ ಯಾರಾದರೂ ದೌರ್ಜನ್ಯ ಮಾಡಲು ಮುಂದಾದಲ್ಲಿ ಮೊದಲ ಪ್ರಯತ್ನದಲ್ಲಿಯೇ ಅವರಿಗೆ ತಕ್ಕ ಪಾಠ ಕಲಿಸುವ ಧೈರ್ಯ ತೋರಬೇಕೆಂದು ಸಲಹೆ ನೀಡಿದರು.

      ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಅನಿತ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 225 ಮಕ್ಕಳು ಭಾಗವಹಿಸಿ ಪ್ರಯೋಜನ ಪಡೆದರು.

 

(Visited 14 times, 1 visits today)

Related posts

Leave a Comment