12 ಕೋಟಿ ಖಾತೆದಾರರ ಡಾಟಾ ಹ್ಯಾಕ್!!

ನವದೆಹಲಿ: 

      ಹನ್ನೆರಡು ಕೋಟಿ ಫೇಸ್ ಬುಕ್ ಬಳಕೆದಾರರ ಖಾಸಗಿ ಚಾಟ್ ಮಾಹಿತಿ ಸಹಿತ ಹಲವಾರು ವಿವರಗಳನ್ನು ಹ್ಯಾಕ್ ಮಾಡಿ ಅವುಗಳನ್ನು ಅಂತರ್ಜಾಲದಲ್ಲಿ ಮಾರಾಟಕ್ಕಿಡಲಾಗಿತ್ತು ಎಂದು ಬಿಬಿಸಿ ರಷ್ಯನ್ ಸರ್ವಿಸ್ ವರದಿ ಮಾಡಿದೆ. ಹ್ಯಾಕರ್ ಗಳು ಫೇಸ್ ಬುಕ್‍ನ 81,000 ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬಿಡುಗಡೆಗೊಳಿಸಿದ್ದಾರೆಂದು ಹೇಳಲಾಗಿದೆ.

      ಈ ಹ್ಯಾಕ್ ಆದ ವಿಚಾರ ಸೆಪ್ಟೆಂಬರ್ ತಿಂಗಳಲ್ಲಿ ಎಫ್‍ಬಿ ಸೇಲರ್ ಎಂಬ ಬಳಕೆದಾರ ಆಂಗ್ಲ ಭಾಷೆಯ ಅಂತರ್ಜಾಲ ವೇದಿಕೆಯಲ್ಲಿ ಜಾಹೀರಾತನ್ನು ಹಾಕಿ ಒಂದು ಫೇಸ್ ಬುಕ್ ಖಾತೆಯ ಡಾಟಾ ಮಾಹಿತಿಯನ್ನು ಹತ್ತು ಸೆಂಟ್ಸ್ ಗೆ ಒದಗಿಸುವುದಾಗಿ ಹೇಳಿದಾಗ ಬಹಿರಂಗಗೊಂಡಿತ್ತು. ಆದರೆ ಆ ಜಾಹೀರಾತು ಈಗ ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ.

      ತನ್ನ ಸೆಕ್ಯುರಿಟಿ ಫೀಚರ್ಸ್ ಸುರಕ್ಷಿತವಾಗಿದ್ದು, ಕೆಲವು ಶಂಕಾಸ್ಪದ ಬ್ರೌಸರ್ ಎಕ್ಸ್‍ಟೆನ್ಶನ್‍ಗಳ ಮುಖಾಂತರ ಈ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಫೇಸ್ ಬುಕ್ ಬಿಬಿಸಿಗೆ ಹೇಳಿದೆ. ಇನ್ನಷ್ಟು ಫೇಸ್‍ಬುಕ್ ಖಾತೆಗಳು ಬಾಧಿತವಾಗದೇ ಇರುವಂತೆ ತಾನು ಕ್ರಮ ಕೈಗೊಂಡಿದ್ದಾಗಿಯೂ ಫೇಸ್ ಬುಕ್ ತಿಳಿಸಿದೆಯಲ್ಲದೆ ಬ್ರೌಸರ್ ತಯಾರಕರನ್ನು ಸಂಪರ್ಕಿಸಿ ಇಂತಹ ಶಂಕಾಸ್ಪದ ಎಕ್ಸ್‍ಟೆನ್ಶನ್‍ಗಳು ಲಭ್ಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ ಎಂದು ಫೇಸ್ ಬುಕ್ ಅಧಿಕಾರಿ ಗಯ್ ರೋಸೆನ್ ಬಿಬಿಸಿಗೆ ತಿಳಿಸಿದ್ದಾರೆ. ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಿದ ಬ್ರೌಸರ್ ಎಕ್ಸ್‍ಟೆನ್ಶನ್ ಹೆಸರನ್ನು ಅವರು ಬಹಿರಂಗಗೊಳಿಸಿಲ್ಲ.

      ಹ್ಯಾಕ್ ಆದ ಹೆಚ್ಚಿನ ಖಾತೆಗಳು ಉಕ್ರೇನ್ ಮತ್ತು ರಷ್ಯಾಗೆ ಸೇರಿದ್ದಾಗಿದ್ದು ಉಳಿದವು ಇಂಗ್ಲೆಂಡ್, ಅಮೆರಿಕಾ, ಬ್ರೆಝಿಲ್ ಮತ್ತಿತರ ದೇಶಗಳ ಬಳಕೆದಾರರದ್ದಾಗಿದೆ. ಹ್ಯಾಕ್ ಆದ ಮಾಹಿತಿಗಳಲ್ಲಿ ಬಳಕೆದಾರರ ಖಾಸಗಿ ಸಂದೇಶಗಳೂ ಸೇರಿವೆ ಎಂದು ಬಿಬಿಸಿ ಸ್ವತಂತ್ರವಾಗಿ ಸೈಬರ್ ಸೆಕ್ಯುರಿಟಿ ಕಂಪೆನಿ ಡಿಜಿಟಲ್ ಶ್ಯಾಡೋಸ್ ಮೂಲಕ ದೃಢಪಡಿಸಿದೆ.

(Visited 8 times, 1 visits today)

Related posts

Leave a Comment