ಕೃಷಿ ಸಮ್ಮಾನ್‍ಗೆ 1 ಲಕ್ಷ ರೈತರು ಸೇರುವ ಸಾಧ್ಯತೆ!

ತುಮಕೂರು :

      ಪ್ರಧಾನ ನರೇಂದ್ರ ಮೋದಿ ಅವರು ಜನವರಿ 2ರಂದು ತುಮಕೂರು ಆಗಮಿಸಿ, ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನ ಕಾರ್ಯಕ್ರಮ ಹಾಗೂ ರೈತ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 1 ಲಕ್ಷ ರೈತರು ಸೇರುವ ಸಾಧ್ಯತೆಯಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

      ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿ ಮಾತನಮಾಡಿದ ಅವರು ಜನವರಿ 2ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದು, ಮೊದಲು ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂ.ಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ನಂತರ ಮಠದ ಮಕ್ಕಳ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

      ದೇಶದ 6 ರಾಜ್ಯಗಳಲ್ಲಿ ಕೃಷಿ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ 30 ಕ್ಕೂ ಹೆಚ್ಚು ಮಂದಿ ರೈತರಿದ್ದಾರೆ. ಈ ಪೈಕಿ ಕರ್ನಾಟಕ ರಾಜ್ಯವು ಕೂಡ ಆಯ್ಕೆಯಾಗಿದ್ದು, ಸಮಾವೇಶದಲ್ಲಿ ರೈತರಿಗೆ ಪ್ರಶಸ್ತಿ ನೀಡಲಾಗುವುದು. ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೆಲವು ಕಾರ್ಯಕ್ರಮಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಗುವುದು ಎಂದರು.

      ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ತುಮಕೂರು ನಗರವು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ತಪೋ ಭೂಮಿ. ಇಲ್ಲಿಗೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವುದು ಜಿಲ್ಲೆಯಲ್ಲದೆ ರಾಜ್ಯಕ್ಕೇ ಸಂತಸದ ಸಂಗತಿಯಾಗಿದೆ. ಪ್ರಧಾನ ಮಂತ್ರಿಗಳು ಮೊದಲು ಶ್ರೀ ಮಠಕ್ಕೆ ಭೇಟಿ ನೀಡಿ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯಲ್ಲಿ ಪೂಜಾಕೈಂಕರ್ಯ ಮುಗಿಸಿ ಮಕ್ಕಳು ಮತ್ತು ಶ್ರೀ ಮಠದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಕಾರ್ಯಕ್ರಮ ದೇಶದ 6 ರಾಜ್ಯಗಳ ಕಾರ್ಯಕ್ರಮವಾಗಿದ್ದು, ತುಮಕೂರು ನಗರದಲ್ಲಿ ಆಯೋಜನೆ ಮಾಡಲಾಗಿದೆ.

       ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಅವರು ಮಾಡಿದರಲ್ಲದೆ, ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂ.ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳು 111 ವರ್ಷಗಳ ಕಾಲ ಬಡವರು ಸೇರಿದಂತೆ ಎಲ್ಲಾ ವರ್ಗದ ಮಕ್ಕಳಿಗೆ ವಿದ್ಯಾ ದಾನ ಮಾಡಿ ರಾಷ್ಟ್ರಕ್ಕೆ ಕೊಡುಗೆ ನೀಡಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ನಾನು ಶ್ರೀಗಳಿಗೆ ಭಾರತರತ್ನ ಪ್ರಶಸ್ತಿಯನ್ನು ಕೊಡಬೇಕೆಂದು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಡಾ|| ಉದೇಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

(Visited 9 times, 1 visits today)

Related posts

Leave a Comment