ಮಧುಗಿರಿ : 39 ಗ್ರಾ.ಪಂ.ಸಾರ್ವತ್ರಿಕ ಚುನಾವಣೆಗೆ ಪೂರ್ವ ಸಿದ್ದತೆ

ಮಧುಗಿರಿ : 

      ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಸಾರ್ವತ್ರಿಕ ಚುನಾವಣೆಗೆ 324 ಮತಗಟ್ಟೆಗಳಲ್ಲಿ 42 ಮತಗಟ್ಟೆಗಳು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತದಾನದ ಸಂಪೂರ್ಣ ವಿಡಿಯೋ ಚಿತ್ರಿಕರಣ ಮಾಡಲಾಗುವುದು ಎಂದು ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ತಿಳಿಸಿದರು. 

       ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನಕ್ಕೆ ಪೂರ್ವ ಸಿದ್ದತೆ ಕೈಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1,95,548 ಮತದಾರರು ಮತದಾನ ಮಾಡಬಹುದಾಗಿದ್ದು, 900 ಕ್ಕೂ ಹೆಚ್ಚು ಮತದಾರರೊಂದಿರುವ ಮತಗಟ್ಟೆಗಳಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುವುದು ತಾಲ್ಲೂಕಿನಲ್ಲಿ 33 ಹೆಚ್ಚುವರಿ ಮತಗಟ್ಟೆ ತೆರೆಯಲಾಗಿದೆ ಎಂದರು.

      ಶಾಂತಿ ಮತ್ತು ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಡಿವೈಎಸ್‍ಪಿ ಒಬ್ಬರು, ಸಿಪಿಐ ನಾಲ್ವರು, ಪಿಎಸ್‍ಐ ಏಳು ಹಾಗೂ ಎಎಸ್‍ಐ 17 ಪೊಲೀಸ್ ರೊಂದಿಗೆ ಜೊತೆಗೆ ಗೃಹರಕ್ಷಣಕದಳದವರು ಸೇರಿ 378 ಸಿಬ್ಬಂದಿಯನ್ನು ಮತ್ತು 17 ಮೀಸಲು ಶಸಸ್ತ್ರ ಪಡೆಯ ತುಕ್ಕಡಿಗಳನ್ನು ಸಹ ನಿಯೋಜಿಸಲಾಗಿದೆ ಎಂದರು.

      ಈಗಾಗಲೇ 15 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಏಕ ಸದಸ್ಯ ಏಳು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಆ ಕ್ಷೇತ್ರಗಳಲ್ಲಿ ಮತದಾನ ನಡೆಯುವುದಿಲ್ಲ. ಇನ್ನುಳಿದ ಎಂಟು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಇವುಗಳು ಮತ್ತೊಂದು ಕ್ಷೇತ್ರದೊಂದಿಗೆ ಸೇರಿರುವುದರಿಂದ ಅಲ್ಲಿ ಚುನಾವಣೆ ನಡೆಯಲಿದೆ ಎಂದರು.

      ನೋಡೆಲ್ ಅಧಿಕಾರಿಗಳಾಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಬಾಲರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಮಹೇಶ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರೇಮ್‍ನಾಥ್‍ರವರುಗಳನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ.

      13 ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳಿಗೆ ಈಗಾಗಲೇ ಎರಡು ಬಾರಿ ಭೇಟಿ ನೀಡಿದ್ದು ಮತದಾನದ ವೇಳೆಯಲ್ಲೂ ಸಹ ಭೇಟಿ ನೀಡಲಿದ್ದು, ನ್ಯೂನತೆಗಳು ಕಂಡಬಂದಲ್ಲಿ ತಕ್ಷಣ ವರದಿ ಮಾಡಲಿದ್ದಾರೆ ಎಂದರು. ಚುನಾವಣೆಗೆ 1850 ಮತಗಟ್ಟೆ ಮತ್ತು ಸಹಾಯಕ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.

 

(Visited 4 times, 1 visits today)

Related posts

Leave a Comment