ಆರ್ಥಿಕ ಹಿಂಜರಿತ ಕೇವಲ ನಮ್ಮ ರಾಷ್ಟ್ರಕ್ಕೆ ಮಾತ್ರ ಆಗಿಲ್ಲ -ಸಚಿವ ಜಗದೀಶ್ ಶೆಟ್ಟರ್

ತುಮಕೂರು:

      ಕೈಗಾರಿಕಾ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಠಿ ಹಾಗೂ ಆರ್ಥಿಕ ಮಟ್ಟ ಚೇತರಿಕೆಗೆ ಕ್ರಮ ಕೈಗೊಳ್ಳುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‍ಶೆಟ್ಟರ್ ಇಂದಿಲ್ಲಿ ತಿಳಿಸಿದರು.

      ಆರ್ಥಿಕ ಹಿಂಜರಿತ ಕೇವಲ ನಮ್ಮ ರಾಜ್ಯ, ರಾಷ್ಟ್ರಕ್ಕೆ ಮಾತ್ರ ಆಗಿಲ್ಲ. ಇಡೀ ಜಗತ್ತಿನಲ್ಲೇ ಇದೆ. ಆದರೆ ಇದರಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಭಾರೀ ಹಿನ್ನಡೆಯಾಗಿರುವುದು ಸತ್ಯ. ಈ ಎಲ್ಲದರ ಬಗ್ಗೆ ಅಧ್ಯಯನ ನಡೆಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

      ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಸಿದ್ದಗಂಗಾ ಮಠಕ್ಕೆ ತೆರಳಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರದಲ್ಲಿ ಕೆಲವು ವಲಯಗಳಿಗೆ ಆರ್ಥಿಕ ಹಿಂಜರಿತ ಪರಿಣಾಮ ಬೀರಿದೆ. ಇಡೀ ಜಗತ್ತಿಲ್ಲೇ ಆಟೋಮೊಬೈಲ್ ಕ್ಷೇತ್ರದ ಮೇಲೆ ಇದರ ಪರಿಣಾಮ ಬೀರಿದೆ ಎಂದರು.

      ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸುತ್ತಿದ್ದು, ಆದಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡುವಂತೆ ಕೈಗಾರಿಕೋದ್ಯಮಿಗಳಿಗೆ ಒತ್ತಾಯ ಮಾಡಲಾಗುವುದು ಎಂದರು.

      ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಶ್ರೀಮಠಕ್ಕೆ ಭೇಟಿ ನೀಡಿದ್ದು, ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ. ಹಾಗೆಯೇ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದಿದ್ದೇನೆ. ಇನ್ನು ಮುಂದೆ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುವುದಾಗಿ ಅವರು ಹೇಳಿದರು.

      ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಯಾರೂ ಸಹ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

     ಜಗತ್ತು ಬದಲಾವಣೆಯಾಗತ್ತಿರುವಾಗ ಇಂತಹ ಮೌಢ್ಯತೆಗಳು ಜೀವಂತವಾಗಿರುವುದು ದುರ್ದೈವ. 12ನೇ ಶತಮಾನದಲ್ಲಿ ಬಸವಣ್ಣನವರು ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿದ್ದರು. ಬಸವಣ್ಣನವರ ಮಾದರಿಯಲ್ಲೇ ಅಂಬೇಡ್ಕರ್, ಮಹಾತ್ಮಗಾಂಧೀಜಿಯವರು ಸಹ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಆದರೂ ಸಹ 21ನೇ ಶತಮಾನದಲ್ಲೂ ಈ ಅಸ್ಪೃಶ್ಯತೆ ಜೀವಂತವಾಗಿರುವುದು ತಲೆತಗ್ಗಿಸುವಂತಹ ಸಂಗತಿ, ಇದು ಖಂಡನೀಯ ಎಂದರು.

      ಅಸ್ಪೃಶ್ಯತೆ, ಮೂಢನಂಬಿಕೆಗಳ ಬಗ್ಗೆ ಗ್ರಾಮಸ್ಥರು ವಿಚಾರ ಮಾಡಿಕೊಳ್ಳಬೇಕು. ಇದರಿಂದ ದೂರಗಾಮಿ ಪರಿಣಾಮಗಳು ಆಗುತ್ತವೆ. ಆದ್ದರಿಂದ ಗ್ರಾಮಸ್ಥರೆಲ್ಲಾ ಒಂದೆಡೆ ಕುಳಿತು ಈ ಆಚರಣೆಗೆ ಅಂತ್ಯ ಹಾಡಬೇಕು ಎಂದರು. ಸಂಸದ ನಾರಾಯಣಸ್ವಾಮಿ ಅವರನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಅವರು ಹೇಳಿದರು.

      ಓರ್ವ ಲೋಕಸಭಾ ಸದಸ್ಯನಿಗೆ ಈ ಗತಿ ಬಂದರೆ ಇನ್ನು ಸಾಮಾನ್ಯರ ಪರಿಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಈ ಮೌಢ್ಯ ಆಚರಣೆ ವಿರುದ್ಧ ಗ್ರಾಮಸ್ಥರಲ್ಲಿ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಒಂದು ವೇಳೆ ಅಧಿಕಾರಿಗಳ ಸಲಹೆ-ಸೂಚನೆ, ಜನಜಾಗೃತಿ ಮೂಡಿಸುವ ಕಾರ್ಯ ಇದ್ಯಾವುದಕ್ಕೂ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

 

      ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡರಾದ ಶಿವಪ್ರಸಾದ್, ರವಿ ಹೆಬ್ಬಾಕ, ಕೊಪ್ಪಲ್ ನಾಗರಾಜು, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ರುದ್ರೇಶ್, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಕೆಐಎಡಿಬಿ ಸಿಇಓ ಬಸವರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

(Visited 17 times, 1 visits today)

Related posts

Leave a Comment