ಜೆಸಿಟಿಯು ಅಡಿಯಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ತುಮಕೂರು:

      ಹನ್ನೆರಡು ಬೇಡಿಕೆಗಳ ಆಧಾರದಲ್ಲಿ ರಾಷ್ಟ್ರಮಟ್ಟದಲ್ಲಿ ಕರೆ ನೀಡಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಜೆಸಿಟಿಯು ಅಡಿಯಲ್ಲಿ ತುಮಕೂರು ನಗರದ ಟೌನ್‍ಹಾಲ್ ಬಳಿ ನೂರಾರು ಕಾರ್ಮಿಕರು ಬೆಳಗ್ಗೆ 9 ಗಂಟೆಗೆ ಸಮಾವೇಶಗೊಂಡರು. ಅಂಗನವಾಡಿ ನೌಕರರು, ಆಶಾ, ಕೈಗಾರಿಕಾ ಕಾರ್ಮಿಕರು, ಪೌರಕಾರ್ಮಿಕರು, ಬಿಎಸ್‍ಎನ್‍ಎಲ್ ನೌಕರರು, ಜೀವ ವಿಮಾ ನೌಕರರು, ಗುತ್ತಿಗೆ ಕಾರ್ಮಿಕರು ಮಧ್ಯಾಹ್ನ 12 ಗಂಟೆಯವರೆಗೆ ಘೋಷಣೆಗಳನ್ನು ಕೂಗುತ್ತ ಟೌನ್‍ಹಾಲ್ ವೃತ್ತದಲ್ಲಿ ಧರಣಿ ನಡೆಸಿದರು. 

     ಧರಣಿಯ ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಇಪ್ಪತ್ತು ಕೋಟಿ ಕಾರ್ಮಿಕರು ಬೀದಿಗಿಳಿದು ಮುಷ್ಕರ ನಡೆಸಿದಾಗ್ಯೂ ಕೇಂದ್ರ ಸರ್ಕಾರ ಕಾರ್ಮಿಕರ ಬೇಡಿಕೆಯ ಬಗ್ಗೆ ಮಾತುಕತೆ ಆಹ್ವಾನಿಸದೆ ನಿರ್ಲಕ್ಷ್ಯ ವಹಿಸಿರುವುದು ಸರ್ಕಾರಕ್ಕೆ ದುಡಿಯುವ ಜನರ ಬಗ್ಗೆ ಇರುವ ತಾತ್ಸಾರಕ್ಕೆ ಸಾಕ್ಷಿ ಎಂದರು.

      ಇದೊಂದು ರಾಜಕೀಯ ಪ್ರೇರಿತ ಹೋರಾಟ ಹಾಗೂ ಬಂದ್ ವಿಫಲವಾಗಿದೆ ಎಂದು ಬೊಬ್ಬೆ ಇಡುತ್ತಿರುವವರನ್ನು ತರಾಟೆಗೆ ತೆಗೆದುಕೊಂಡ ಅವರು, ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕ ಪದ್ದತಿ ನಿಷೇಧ, ಬೆಲೆ ಏರಿಕೆಗೆ ಕಡಿವಾಣ, ಹಾಗೂ ರೈತರ ಸಾವಿಗೆ ಕಡಿವಾಣ, ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ವಿರೋಧ, ಸ್ಕೀಂ ನೌಕರರ ಕಾಯಮಾತಿಯ ಕುರಿತು ಹಕ್ಕೊತ್ತಾಯಗಳು ರಾಜಕೀಯ ತೀರ್ಮಾನವನ್ನು ಆಧರಿಸಿದವು. ಹಾಗಾಗಿ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಿದ್ದಲ್ಲಿ ಹೋರಾಟದ ಅನಿವಾರ್ಯವೇ ಇರುತ್ತಿರಲಿಲ್ಲ,. ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬಂದ್ ಎಂದು ಬಿಂಬಿಸಿದ್ದು ಮಾಧ್ಯಮಗಳೇ ಹೊರತು ಸಮಿತಿ ಎಂದು ಸ್ಪಷ್ಡಪಡಿಸಿದರು. ಜಿಲ್ಲೆಯ ಜನತೆ ಹೋರಾಟಕ್ಕೆ ಸ್ಪಂದಿಸಿರುವುದಕ್ಕೆ ಅಭಿನಂದಿಸಿದರು.

      ಪ್ರತಿಭಟನಾಕಾರರನ್ನುದ್ದೇಶಿಸಿ ಎಐಟಿಯುಸಿ ಗಿರೀಶ್, ಯುಟಿಯುಸಿಯ ಕಲ್ಯಾಣಿ, ಸಿಐಟಿಯುನ ಎನ್.ಕೆ.ಸುಬ್ರಮಣ್ಯ, ಮತ್ತಿತರರು ಮಾತನಾಡಿದರು.
ಮಧ್ಯಾಹ್ನ 12.30ಗಂಟೆಗೆ ನಗರದ ಬಿಎಚ್.ರಸ್ತೆ, ಎಂ.ಜಿ.ರಸ್ತೆಯ ಗುಂಚಿಚೌಕದ ಮೂಲಕ ಜಿಲ್ಲಾದಿಕಾರಿ ಕಚೇರಿಗೆ ತಲುಪಿದ ಪ್ರತಿಭಟನಾಕಾರರು ಕಚೇರಿಯ ಎದುರು ಸುಮಾರು 1 ಗಂಟೆಗೂ ಹೆಚ್ಚು ಉರಿಯುವ ಬಿಸಿಲಿನಲ್ಲಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಸ್ಕೀಂ ನೌಕರರನ್ನು 42-43 ವರ್ಷಗಳಿಂದ ಜೀತದಾಳುಗಳಂತೆ ಇಲಾಖೇತರ ಕೆಲಸಗಳಿಗೂ ಬಳಸುತ್ತಾ ಗೌರವ ಬದುಕು ನೀಡದೇ ಇರುವ ಸರ್ಕಾgದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

      ಎಐಟಿಯುಸಿಯ ಕಂಬೇಗೌಡ, ಎಐಯುಟಿಯುಸಿಯ ಕಲ್ಯಾಣಿ ಇದೇ ಸಂದರ್ಭದಲ್ಲಿ ಮಾತನಾಡಿದರು. ಹನ್ನೆರಡು ಬೇಡಿಕೆಗಳಿರುವ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.  

      ಸಿಐಟಿಯು ಜಿಲ್ಲಾ ಸಮಿತಿಯು ಮತ್ತೊಂದು ಮನವಿ ಪತ್ರವನ್ನು ಸಲ್ಲಿಸಿ ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕೆ ನಾಲ್ಕು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು. ಕಾರ್ಮಿಕ ಇಲಾಖೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ನಾಲ್ಕೈದು ಮಂದಿ ಕಾರ್ಮಿಕರ ನಿರೀಕ್ಷಕರು ಮತ್ತು ಇತರೆ ಸಿಬ್ಬಂದಿಯನ್ನು ತಕ್ಷಣ ನೇಮಕ ಮಾಡಬೇಕು.. ಗುತ್ತಿಗೆ ಕಾರ್ಮಿಕರ ಪಿಎಫ್ ಮತ್ತು ಕನಿಷ್ಠ ಕೂಲಿ ಕೆಲಸದ ಅವಧಿಗಳ ಬಗ್ಗೆ ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಬೇಕು. ಇಂಜಿನಿಯರ್, ಡೆಂಟಲ್ ಮತ್ತು ಮೆಡಿಕಲ್ ಕಾಲೇಜುಗಳ ಬೋಧಕೇತರ ಸಿಬ್ಬಂದಿಗೆ ಕಾನೂನುಬದ್ದ ವೇತನ ಹಾಗೂ ಸಾಮಾಜಿಕ ಭದ್ರತೆ ಕಲ್ಪಸಬೇಕು. ಬೀಡಿಕಾರ್ಮಿಕರು, ಗ್ರಾಮ ಪಂಚಾಯಿತಿ ನೌಕರರ ಕನಿಷ್ಠ ಕೂಲಿ ಜಾರಿ ಹಾಗೂ ಗಾರ್ಮೆಂಟ್ಸ್ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

      ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಇತ್ಯರ್ಥಕ್ಕೆ ಮುಖ್ಯಮಂತ್ರಿಗಳ ತಕ್ಷಣವೇ ಸಭೆ ನಡೆಸಬೇಕು. ಪ್ರತಿ ತಿಂಗಳ ಸಂಬಳ ಮತ್ತು ಪಿಎಫ್ ಮತ್ತು ಸಮಾನ ವೇತನದ ಪ್ರಶ್ನೆಗಳ ಕುರಿತ ಮನವಿ ಪತ್ರವನ್ನು ಸಲ್ಲಿಸಿದರು.

ಮುತ್ತಿಗೆಗೆ ಯತ್ನಿಸಿದ ನೂರಾರು ಕಾರ್ಮಿಕರ ಬಂಧನ:

      ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಎಸ್‍ಎನ್‍ಎಲ್ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರದ ಹಠಮಾರಿ ಧೋರಣೆಯನ್ನು ಖಂಡಿಸಿ ಈ ಕೂಡಲೇ ಕಾರ್ಮಿಕ ಬೇಡಿಕೆಗಳ ಕುರಿತು ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭ ದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದು ಪೊಲೀಸರು ನೂರಾರು ಮಂದಿ ಕಾರ್ಮಿಕರನ್ನು ಬಂಧಿಸಿದರು.

      ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಲೋಕೇಶ್, ತಾಲ್ಲೂಕು ಅಧ್ಯಕ್ಷ ಷಷ್ಮುಗಪ್ಪ, ಕಾರ್ಯದರ್ಶಿ ಪುಟ್ಟೇಗೌಡ, ಅಂಗನವಾಡಿ ನೌಕರರ ಸಂಘಟನೆಯ ತಾಲೂಕು ಅಧ್ಯಕ್ಷ ಗೌರಮ್ಮ, ಪ್ರೇಮ, ಅನಸೂಯ, ಸರೋಜ, ಎಐಟಿಯುಸಿಯ ಅಶ್ವತ್ಥ ನಾರಾಯಣ್, ಗೌಡರಂಗಪ್ಪ, ಶಶಿಕಾಂತ್, ಯುಟಿಯುಸಿಯ ಎನ್.ಎಸ್.ಸ್ವಾಮಿ, ಕಟ್ಟಡ ಕಾರ್ಮಿಕ ಸಂಘಟನೆಯ ಶಂಕರಪ್ಪ, ಲಕ್ಷ್ಮಣ್, ಬಿಎಸ್‍ಎನ್‍ಎಲ್ ನೌಕರರ ಸಂಘಟನೆಯ ನರೇಶ್ ರೆಡ್ಡಿ, ಜೀವ ವಿಮಾನೌಕರರ ಸಂಘಟನೆಯ ಅಧ್ಯಕ್ಷ ನಂಜುಂಡ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

      ಅಖಿಲ ಭಾರತ ಮುಷ್ಕರದ ಭಾಗವಾಗಿ ಅಂತರಸನಹಳ್ಳಿ, ಸತ್ಯಮಂಗಲ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳ ಬಹುತೇಕ ಕಾರ್ಖಾನೆಗಳು ಮುಚ್ಚಿದ್ದವು. ಅಂಗನವಾಡಿ, ಬಿಎಸ್‍ಎನ್‍ಎಲ್, ಜೀವವಿಮಾ ಸಂಸ್ಥೆ, ಅಂಚೆ ಕಚೇರಿ, ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಮುಷ್ಕರದ ನೋಟೀಸ್ ನೀಡಿದ್ದ ಬ್ಯಾಂಕುಗಳು ಬಂದ್ ಆಗಿದ್ದವು.

(Visited 22 times, 1 visits today)

Related posts

Leave a Comment