ತುಮಕೂರು:
ಇಂದು ಬೆಳಗ್ಗೆ ಕುಣಿಗಲ್ ತಾಲೂಕಿನ ಆಲಪ್ಪಗುಡ್ಡ ಬಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಸಿ.ಟಿ.ರವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಶಿಕುಮಾರ್ (28) ಹಾಗೂ ಸುನಿಲ್ ಗೌಡ (27) ಮೃತ ದುರ್ದೈವಿಗಳು. ಇನ್ನೊಬ್ಬರಿಗೆ ತೀವ್ರ ಸ್ವರೂಪದ ಮೂಳೆ ಮುರಿತ ಉಂಟಾಗಿದೆ.
ಎರಡು ಕಾರುಗಳಲ್ಲಿ 13 ಜನ ಗೆಳೆಯರು ಪ್ರವಾಸಕ್ಕೆಂದು ಹೋಗಿದ್ದರು. ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿ ಸಮೀಪ ತಮ್ಮ ಕಾರುಗಳನ್ನು ನಿಲ್ಲಿಸಿ ರಸ್ತೆಬದಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಶಾಸಕ ಸಿ.ಟಿ.ರವಿ ಅವರ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಕಾರುಗಳಿಗೆ ಅಪ್ಪಳಿಸಿತು. ಈ ಸಂದರ್ಭದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ನಡೆದ ತಕ್ಷಣ ಆಘಾತಕ್ಕೊಳಗಾದ ಶಾಸಕ ರವಿ ಅವರು ಸ್ವಲ್ಪ ಹೊತ್ತು ಘಟನಾ ಸ್ಥಳದಲ್ಲಿದ್ದರು ಬಳಿಕ ಬೆಂಗಳೂರಿಗೆ ಬಂದು ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಾಸಕರ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಿ. ಟಿ. ರವಿ ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ ನನ್ನು ಇಂದು ಮಧ್ಯಾಹ್ನ ಕುಣಿಗಲ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.