ಕೌಟುಂಬಿಕ ಕಲಹಗಳಿಗೆ ಬೇಗ ನ್ಯಾಯ ಸಿಗಬೇಕು

 ತುಮಕೂರು :

      ಯಾವುದೇ ಕೌಟುಂಬಿಕ ಕಲಹಗಳಿಗೆ ಬೇಗ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ಕಲಹಗಳ ನಡುವಿನ ಅಂತರ ಹೆಚ್ಚಾಗಿ ಭಿನ್ನಾಬಿಪ್ರಾಯಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್ ಅಭಿಪ್ರಾಯಪಟ್ಟರು.

      ಜಿಲ್ಲಾ ಕೌಟುಂಬಿಕ ನ್ಯಾಯಾಲಯಗಳ ಆವರಣದಲ್ಲಿಂದು 1ನೇ ಅಧಿಕ ಪ್ರಧಾನ ಕೌಟುಂಬಿಕ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡುತ್ತಾ, ಕೌಟುಂಬಿಕ ಪ್ರಕರಣಗಳು ಎಷ್ಟು ಕಡಿಮೆಯಾಗುತ್ತವೆಯೋ ಅಷ್ಟು ಸಮಾಜದ ಏಳ್ಗೆಯಾಗುತ್ತದೆ. ಯಾವುದೇ ಕಕ್ಷಿದಾರರಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಬೇಗ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ಕೌಟುಂಬಿಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು, ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.

      ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರಧಾನ ನ್ಯಾಯಾಧೀಶೆ ಉಷಾರಾಣಿ ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬಂತೆ ಯಾವುದೇ ಕೆಲಸ ಕಷ್ಟವಾದರೂ ಸಹ ಮನಸಾರೆ ಸಂತೋಷದಿಂದ ಆ ಕೆಲಸವನ್ನು ಮಾಡಬೇಕು. ಕೌಟುಂಬಿಕ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರ ಕಲಹಗಳನ್ನು ಬೇಗನೆ ಇತ್ಯರ್ಥಪಡಿಸಲು ತಮ್ಮೆಲ್ಲರ ಸಹಕಾರ ನನಗೆ ಅಗತ್ಯವಿದೆ ಎಂದು ವಕೀಲರಿಗೆ ತಿಳಿಸಿದರು.

      ಪ್ರಧಾನ ನ್ಯಾಯಾಧೀಶ ಬಿ. ವೆಂಕಟೇಶ್ ಅವರು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಈ ಕೌಟುಂಬಿಕ ನ್ಯಾಯಾಲಯವು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

      ಸಮಾರಂಭದಲ್ಲಿ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಭರತ್ ಕುಮಾರ್, 2ನೇ ಗೌರವಾನ್ವಿತ ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಎಸ್.ಪಟೇಲ್, ಸಿವಿಲ್ ನ್ಯಾಯಾಧೀಶ ಗಣೇಶ್ ಮತ್ತು ವಕೀಲರು ಉಪಸ್ಥಿತರಿದ್ದರು.

(Visited 32 times, 1 visits today)

Related posts

Leave a Comment